ಬೆಂಗಳೂರು: “ಇಸ್ರೆಲ್ ಮಾದರಿ ಕೃಷಿ ಪದ್ದತಿ’ ಹಾಗೂ “ಶೂನ್ಯ ಬಂಡವಾಳ ಕೃಷಿ ಪದ್ದತಿ’ಗೆ ರಾಜ್ಯದಲ್ಲಿ ಮುಂದಿನ ತಿಂಗಳು ಚಾಲನೆ ನೀಡಲಾಗುವುದು ಎಂದು ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಎರಡೂ ಯೋಜನೆಗಳು ರೂಪುರೇಷೆಗಳು ಸಿದ್ದಗೊಂಡಿದ್ದು, ಎಲ್ಲ ರೀತಿಯ ಪೂರಕ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ. ಮುಂದಿನ ತಿಂಗಳು ಅಧೀಕೃತವಾಗಿ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಇಸ್ರೆಲ್ ಮಾದರಿ ಕೃಷಿ ಪದ್ದತಿ ಬಗ್ಗೆ ಸಮಗ್ರ ಅಧ್ಯಯನ ಕೈಗೊಳ್ಳಲಾಗಿತ್ತು. ಆ ಆಧಾರದಲ್ಲಿ ವರದಿ ಸಿದ್ಧಪಡಿಸಲಾಗಿದೆ. ಅದರ ಪ್ರಾತ್ಯಾಕ್ಷಿಕೆ ಹಾಗೂ ಚರ್ಚೆಗೆ ಸೋಮವಾರ (ಅ.15) ಮುಖ್ಯಮಂತ್ರಿಯವರೊಂದಿಗೆ ಸಭೆ ಸಹ ನಿಗದಿಯಾಗಿತ್ತು. ಆದರೆ, ಮುಖ್ಯಮಂತ್ರಿಯವರ ಕೆಲವು ತುರ್ತು ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಗಿದೆ. ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಈ ವಾರದಲ್ಲಿ ಸಭೆ ನಿಗದಿಪಡಿಸಲಾಗುವುದು. ಬಳಿಕ ಅದರ ಚಾಲನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವರು ತಿಳಿಸಿದರು.
ರಾಜ್ಯದ ಕೃಷಿ ವಿವಿಗಳು ಮತ್ತು ಕೃಷಿ ಇಲಾಖೆ ವ್ಯಾಪ್ತಿಯಲ್ಲಿರುವ ಕೃಷಿ ಫಾರ್ಮ್ಗಳಲ್ಲಿ ಇಸ್ರೆಲ್ ಮಾದರಿ ಕೃಷಿ ಪದ್ದತಿಯ ಪ್ರದರ್ಶನ (ಶೋಕೇಸ್) ಮಾಡುವುದು, ಅಚ್ಚುಕಟ್ಟು ಪ್ರದೇಶಗಳ ವ್ಯಾಪ್ತಿಯಲ್ಲಿ ಹನಿ ನೀರಾವರಿ ನಡೆಸುವುದು, ಈಗಾಗಲೇ ರೈತರು ಕೃಷಿಗೆ ಬಳಸಿಕೊಳ್ಳುತ್ತಿರುವ ಕೆರೆಗಳ ನೀರನ್ನು ಬಳಸಿಕೊಳ್ಳುವುದು ಹಾಗೂ ಸಾಮೂಹಿಕ ಕೃಷಿಯಂತೆ ನಾಲ್ಕೂ ಮಾದರಿಗಳನ್ನು ಅಳವಡಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಇದೇ ವೇಳೆ ಶಿವಶಂಕರ ರೆಡ್ಡಿ ಮಾಹಿತಿ ನೀಡಿದರು.
ಅದೇ ರೀತಿ ಶೂನ್ಯ ಬಂಡವಾಳ ಕೃಷಿ ಪದ್ದತಿ ಅಳವಡಿಸಿಕೊಳ್ಳುವ ಬಗ್ಗೆಯೂ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇಸ್ರೆಲ್ ಮಾದರಿ ಕೃಷಿ ಪದ್ದತಿ ಜೊತೆಗೆ ಮುಂದಿನ ತಿಂಗಳು ಶೂನ್ಯ ಬಂಡವಾಳ ಕೃಷಿ ಪದ್ದತಿಗೂ ಚಾಲನೆ ನೀಡಲಾಗುವುದು ಎಂದು ಕೃಷಿ ಸಚಿವರು ಹೇಳಿದರು.