“5ಜಿ’ ಚಿತ್ರ ನೋಡಿದ ಸೆನ್ಸಾರ್ ಮಂಡಳಿ ಆರಂಭದಲ್ಲಿ 20 ಕಟ್ಸ್ ಹೇಳಿದರಂತೆ. ಆದರೆ, ಚಿತ್ರತಂಡ ಆ ಸನ್ನಿವೇಶಗಳನ್ನು ಯಾಕೆ ಬಳಸಲಾಗಿದೆ ಎಂದು ಸ್ಪಷ್ಟನೆ ಕೊಟ್ಟ ನಂತರ ಕಟ್ಸ್ ಸಂಖ್ಯೆ 4ಕ್ಕೆ ಇಳಿದಿದೆ. ನಾಲ್ಕು ಕಟ್ಸ್‌ನೊಂದಿಗೆ “5ಜಿ’ ಚಿತ್ರ “ಯು/ಎ’ ಪ್ರಮಾಣ ಪತ್ರ ಪಡೆದಿದೆ. ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಗುರುವೇಂದ್ರ ಶೆಟ್ಟಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಲವ್‌ಸ್ಟೋರಿಯ ಜೊತೆಗೆ ಒಂದು ಗಂಭೀರ ವಿಚಾರವನ್ನು ಹೇಳಲಾಗಿದೆಯಂತೆ.
ನಿರ್ದೇಶಕರು ಹೇಳುವಂತೆ ಗಾಂಧೀಜಿ ತಲೆಮಾರಿನಿಂದ ಇಲ್ಲಿವರೆಗಿನ ಕಥೆಯಂತೆ. ಈಗಿನ ಸ್ಥಿತಿಯಲ್ಲಿ ಗಾಂಧೀಜಿ ಬಂದರೆ ಏನೆಲ್ಲಾ ನೋಡಬೇಕಾಗಿ ಬರಬಹುದು ಎಂಬ ಅಂಶದೊಂದಿಗೆ ಚಿತ್ರ ಸಾಗುತ್ತದೆಯಂತೆ. ಚಿತ್ರದಲ್ಲಿ 500ರ ನೋಟು ಕೂಡಾ ಪ್ರಮುಖ ಪಾತ್ರ ವಹಿಸಿದ್ದು, ಸಿನಿಮಾದುದ್ದಕ್ಕೂ ಸಾಗಿಬರುತ್ತದೆ ಅನ್ನೋದು ನಿರ್ದೇಶಕರ ಮಾತು. ನೋಟಿನ ಮೂಲಕ ಗಾಂಧೀಜಿಯ ವ್ಯವಸ್ಥೆಯನ್ನು ಹೇಗೆ ನೋಡುತ್ತಾರೆಂಬುದನ್ನು ತೋರಿಸಲಾಗಿದೆಯಂತೆ. ಇದೊಂದು ಪ್ರಯೋಗಾತ್ಮಕ ಅಂಶಗಳೊಂದಿಗೆ ತಯಾರಾದ ಚಿತ್ರವಾಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸ ಚಿತ್ರತಂಡದ್ದು. ಇನ್ನು, ಪ್ರಯೋಗಾತ್ಮಕ ಎಂದಾಕ್ಷಣ ಚಿತ್ರದ ತುಂಬಾ ಸಂದೇಶವೇ ತುಂಬಿಕೊಂಡಿದೆಯಾ ಎಂದರೆ, ಖಂಡಿತಾ ಇಲ್ಲ ಎಂಬ ಉತ್ತರ ನಿರ್ದೇಶಕರಿಂದ ಬರುತ್ತದೆ.
“ಇಲ್ಲಿ ಬರೀ ಬೋಧನೆಯೇ ಇಲ್ಲ. ಇಲ್ಲೊಂದು ಕ್ಯೂಟ್ ಲವ್‌ಸ್ಟೋರಿ ಇದೆ. ಸದಾ ಬಿಝಿ ಇರುವ ನಿರುದ್ಯೋಗಿ ಯುವಕನ ಕಥೆ ಇದೆ. ಪ್ರಯೋಗಾತ್ಮಕವಾಗಿದ್ದರೂ ಇಂದಿನ ಟ್ರೆಂಡ್‌ಗೆ ಏನು ಬೇಕೋ ಆ ಎಲ್ಲಾ ಅಂಶಗಳು ಈ ಚಿತ್ರದಲ್ಲಿವೆ’ ಎನ್ನಲು ನಿರ್ದೇಶಕರು ಮರೆಯೋದಿಲ್ಲ. ಇನ್ನು, ಚಿತ್ರ ನೋಡಿದ ಹಿರಿಯ ಲೇಖಕ, ಸಂಭಾಷಣೆಕಾರ ಜೆ.ಕೆ.ಭಾರವಿಯವರು ಒಂದಷ್ಟು ಸಲಹೆ ಸೂಚನೆ ಕೊಡುವ ಜೊತೆಗೆ ಚಿತ್ರದ ರೀಮೇಕ್ ರೈಟ್ಸ್ ಕೂಡಾ ಪಡೆದುಕೊಂಡಿದ್ದಾರಂತೆ. ಈ ಮೂಲಕ ಚಿತ್ರ ಬಿಡುಗಡೆಗೂ ಮುನ್ನವೇ ಖುಷಿಯಾಗಿದೆ.
ಚಿತ್ರದಲ್ಲಿ ಪ್ರವೀಣ್ ನಾಯಕರಾಗಿ ನಟಿಸಿದ್ದಾರೆ. ಆರಂಭದಲ್ಲಿ ಸಿನಿಮಾ ಬಿಡುಗಡೆ ಮುಂದಕ್ಕೆ ಹೋದಾಗ ಅವರಿಗೆ ಬೇಸರವಾಯಿತಂತೆ. ಆದರೆ, ಈಗ ಹಬ್ಬದ ಸೀಸನ್‌ನಲ್ಲಿ ಬಿಡುಗಡೆಯಾಗುತ್ತಿರುವುದರಿಂದ ಸಿನಿಮಾಕ್ಕೆ ಜನ ಬರುತ್ತಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ. “ನಾನು “ಸಿಂಪಲ್ಲಾಗ್ ಇನ್ನೊಂದ್ ಲವ್‌ಸ್ಟೋರಿ’ ನಂತರ ಅನೇಕ ಕಥೆಗಳನ್ನು ಕೇಳಿದೆ. ಅದರಲ್ಲಿ ತುಂಬಾ ಕಾಡಿದ ಕಥೆ ಇದು. ಇಲ್ಲಿ ನೋಟು ನಿಜವಾದ ಹೀರೋ ಎಂದರೆ ತಪ್ಪಲ್ಲ. ಎಲ್ಲರೂ ಚಿಂತಿಸಬೇಕಾದ ವಿಚಾರವನ್ನು ಇಂದಿನ ಟ್ರೆಂಡ್‌ಗೆ ತಕ್ಕಂತೆ ಹೇಳಿದ್ದಾರೆ’ ಎನ್ನುವುದು ಪ್ರವೀಣ್ ಮಾತು.
ಚಿತ್ರಕ್ಕೆ ಶ್ರೀಧರ್ ಸಂಭ್ರಮ್ ಸಂಗೀತ ನೀಡಿದ್ದಾರೆ. ವಿ.ನಾಗೇಂದ್ರ ಪ್ರಸಾದ್ ಅವರು “ಬಾಪು ಬಾಪು ಎಲ್ಲಿದ್ದೀಯಾ …’ ಎಂಬ ಹಾಡು ಬರೆದಿದ್ದಾರೆ. ಚಿತ್ರದ ವಿಭಿನ್ನತೆಯಿಂದಾಗಿ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸ ಅವರಿಗಿದೆಯಂತೆ. ಈ ಚಿತ್ರವನ್ನು ಜಗದೀಶ್ ನಿರ್ಮಿಸಿದ್ದಾರೆ. ಚಿತ್ರಕ್ಕೆ ನಿಧಿ ಸುಬ್ಬಯ್ಯ ನಾಯಕಿ.