Advertisement
ಹವಾಮಾನ ವೈಪರೀತ್ಯದ ದುಷ್ಪರಿಣಾಮದಿಂದ ಬರ ಮತ್ತು ನೆರೆ ಸಂಕಷ್ಟಕ್ಕೆ ಈಡಾಗುವ ದೇಶಗಳಲ್ಲಿ ಭಾರತವೂ ಒಂದು ಎಂದು ಅಜೀಂ ಪ್ರೇಮ್ ಜಿ ವಿವಿಯು ಹವಾಮಾನ ವೈಪರೀತ್ಯದ ಬಗ್ಗೆ ನಡೆಸಿದ ಸಂಶೋಧನ ವರದಿಯಲ್ಲಿ ಈ ಎಚ್ಚರಿಕೆ ನೀಡಿದೆ.
Related Articles
Advertisement
ಕೃಷಿ ಆಧಾರಿತ ಆರ್ಥಿಕತೆ ಮೇಲೆ ಪ್ರಭಾವ: 1986 ರಿಂದ 2015ರ ನಡುವಿನ ಮುಂಗಾರು ಪೂರ್ವದ ಅವಧಿಯಲ್ಲಿ ಭಾರತದ ವಾರ್ಷಿಕ ಸರಾಸರಿ, ಗರಿಷ್ಠ ಮತ್ತು ಕನಿಷ್ಠ ತಾಪಮಾನಗಳಲ್ಲಿ ವಿಪರೀತ ಏರಿಕೆಯ ಪ್ರವೃತ್ತಿ ದಾಖಲಾಗಿದೆ. ಭಾರತದಲ್ಲಿ ತೀವ್ರ ಶಾಖದ ಆವರ್ತನವು 1950-2015ರ ನಡುವಿನ ಅವಧಿಯಲ್ಲಿ ಹೆಚ್ಚಳ ಕಂಡಿದ್ದು, ಕಳೆದ 3 ದಶಕಗಳಲ್ಲಿ ಅತಿ ವೇಗವಾಗಿ ಹೆಚ್ಚಾಗಿದೆ. ಮುಂದೆ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ವರದಿ ಹೇಳಿದೆ.ಭಾರತದ ಒಟ್ಟು ಮಳೆಯಲ್ಲಿ ಶೇ. 70 ಮುಂಗಾರು ಮಳೆಯದ್ದೇ ಪಾಲು. ದೇಶದ ಪಶ್ಚಿಮ ಭಾಗದಲ್ಲಿ ನೈಋತ್ಯ ಮುಂಗಾರು ಮಳೆ ಗಣನೀಯ ಪ್ರಮಾಣದಲ್ಲಿ ಹೆಚ್ಚಲಿದೆ. ಈಶಾನ್ಯ ಮುಂಗಾರು ಮಳೆಯ ಪ್ರಮಾಣ ಈಶಾನ್ಯ ಭಾರತದಲ್ಲಿ ಕಡಿಮೆ ಆಗಲಿದೆ. ಆದರೆ ಕರ್ನಾಟಕ ಸೇರಿದಂತೆ ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಲಡಾಕ್ನಲ್ಲಿ ಹಿಂಗಾರು ಮಳೆಯಲ್ಲಿ ಶೇ. 20ರಿಂದ ಶೇ. 60 ಹೆಚ್ಚಳವಾಗಲಿದೆ ಎಂದು ವರದಿ ವಿಶ್ಲೇಷಿಸಿದೆ. ಭೂ ಕುಸಿತ ಹೆಚ್ಚಳ: ಪಶ್ಚಿಮ ಘಟ್ಟಗಳು, ಲಡಾಕ್, ಅರುಣಾಚಲ ಪ್ರದೇಶ, ಮೇಘಾಲಯ ಮುಂತಾದ ಎತ್ತರದ ಪ್ರದೇಶಗಳಲ್ಲಿ ಅಧಿಕ ಮಳೆಯ ಘಟನೆಗಳು ಹೆಚ್ಚುವ ಕಾರಣ ಹಿಮ ಕರಗುವಿಕೆ ಯಲ್ಲಿ ಹೆಚ್ಚಳ ಮತ್ತು ಭೂಕುಸಿತದಂತಹ ಹವಾಗುಣ ಪ್ರೇರಿತ ವಿಕೋಪಗಳು ಕಾಣಿಸಿಕೊಳ್ಳಬಹುದು. ಈ ಪ್ರದೇಶದಲ್ಲಿ ಅಧಿಕ ಮಳೆ ಉಂಟಾಗುವ ಕಾರಣ ತೋಟಗಾರಿಕೆ ಬೆಳೆಗಳು ಹಾನಿ ಗೀಡಾಗಲಿವೆ ಎಂದು ವರದಿ ವಿವರಿಸಿದೆ. ದಕ್ಷಿಣಕ್ಕಿಂತ ಉತ್ತರ ಭಾರತದಲ್ಲೇ ಹೆಚ್ಚು ಅವಘಡ
ಪಳೆಯುಳಿಕೆ (ಫಾಸಿಲ್) ಇಂಧನದ ಬಳಸುವಿಕೆಯ ಆಧಾರದಲ್ಲಿ ಅಂದರೆ ಮಧ್ಯಮ ಪ್ರಮಾಣದಲ್ಲಿ ಬಳಸುವಿಕೆ ಮತ್ತು ವಿಪರೀತ ಬಳಕೆಯ ಆಧಾರದಲ್ಲಿ ಅಧ್ಯಯನ ಮಾಡಲಾಗಿದೆ. ಫಾಸಿಲ್ ಇಂಧನವನ್ನು ಮಧ್ಯಮ ಪ್ರಮಾಣದಲ್ಲಿ ಬಳಸಿದರೆ ಸರಾಸರಿ ತಾಪಮಾನ 2043ರ ಹೊತ್ತಿಗೆ 1.5 ಡಿ.ಸೆ ಮತ್ತು ವಿಪರೀತ ಬಳಸಿದರೆ 2041ರ ಹೊತ್ತಿಗೆ ಗರಿಷ್ಠ ತಾಪಮಾನ 1.5 ಡಿ.ಸೆ. ಹೆಚ್ಚಳಗೊಳ್ಳಲಿದೆ. ಲಡಾಕ್ನಲ್ಲಿ ಗರಿಷ್ಠ 1.65 ಡಿ.ಸೆ, ಜಮ್ಮು ಮತ್ತು ಕಾಶ್ಮೀರದಲ್ಲಿ 1.30 ಡಿ.ಸೆ, ಹಿಮಾಚಲ ಪ್ರದೇಶದಲ್ಲಿ 1.19 ಮತ್ತು ಉತ್ತರಾಖಂಡ 1.02 ಡಿಗ್ರಿ ತಾಪಮಾನದಲ್ಲಿ ಏರಿಕೆ ಆಗುವ ಸಂಭವವಿದೆ ಎಂದು ವರದಿ ಹೇಳಿದೆ. ಭಾರತದ ದಕ್ಷಿಣ ಭಾಗಕ್ಕೆ ಹೋಲಿಸಿದರೆ ಪಶ್ಚಿಮ, ಪೂರ್ವ, ಈಶಾನ್ಯ ಮತ್ತು ಉತ್ತರ ಭಾಗದಲ್ಲಿ ಹೆಚ್ಚು ಅನಾಹುತ ಘಟಿಸುವ ಸಂಭವವಿದೆ ಎಂದು ವರದಿ ಸೂಚ್ಯವಾಗಿ ಸೂಚಿಸಿದೆ.