Advertisement

ಪತ್ರಿಕೆಗಳೇ ಜನರಿಂದ ದೂರವಾಗುತ್ತಿವೆ

09:03 PM Feb 17, 2020 | Lakshmi GovindaRaj |

ಮೈಸೂರು: ಆದರ್ಶ ಭಾರತ ನಿರ್ಮಾಣವಾಗಲು ಆದರ್ಶ ಗ್ರಾಮಗಳು ನಿರ್ಮಾಣವಾಗಬೇಕು ಎಂಬುದು ಗಾಂಧೀಜಿಯವರ ಉದ್ದೇಶವಾಗಿತ್ತು ಎಂದು ಲೇಖಕಿ ರೂಪಾ ಹಾಸನ ಹೇಳಿದರು. ನಗರದ ಕಲಾಮಂದಿರದ ಕಿರುರಂಗ ಮಂದಿರ ಆವರಣದಲ್ಲಿ ರಂಗಾಯಣವು ಗಾಂಧಿ ಪಥ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ಆಯೋಜಿಸಿದ್ದ ಗೋಷ್ಠಿಯಲ್ಲಿ ಗಾಂಧಿ – ಗ್ರಾಮ ಭಾರತ ವಿಷಯ ಮಂಡಿಸಿ ಮಾತನಾಡಿದರು.

Advertisement

ಈಡೇರದ ಗಾಂಧಿ ಕನಸು: ಮಹತ್ಮ ಗಾಂಧೀಜಿ, ಗ್ರಾಮ ಸ್ವರಾಜ್ಯದ ಕಲ್ಪನೆ ಹೊಂದಿದ್ದರು. ಸುಸ್ಥಿರ ಬದುಕು, ಗುಡಿ ಕೈಗಾರಿಕೆಗೆ ಆದ್ಯತೆ ನೀಡಬೇಕು ಎಂಬುದು ಉದ್ದೇಶವಾಗಿತ್ತು. ಆದರೆ ಗ್ರಾಮೀಣ ಪ್ರದೇಶದಲ್ಲಿ ಯಾಂತ್ರೀಕರಣ ಹೆಚ್ಚಾಗಿದೆ. ಹಳ್ಳಿಗಳಿಗೆ ತಕ್ಕ ಸ್ಥಾನ ನೀಡಬೇಕು ಎಂಬುದು ಮರೀಚಿಕೆಯಾಗಿ, ನಗರಗಳು ಉತ್ಪಾದಿಸುವ ತ್ಯಾಜ್ಯ ತುಂಬಿಕೊಳ್ಳುವ ಡಸ್ಟ್‌ಬಿನ್‌ಗಳಂತೆ ಹಳ್ಳಿಗಳು ರೂಪುಗೊಳ್ಳುತ್ತಿವೆ. ಹಳ್ಳಿಗಳಲ್ಲಿ ಬಾವಿ, ದೇವಸ್ಥಾನ, ಗೋಮಾಳ, ಶಾಲೆ, ಸಹಕಾರಿ ತತ್ವದಡಿ ಸಂತೆಮಾಳಗಳು ಎಲ್ಲರಿಗೂ ದೊರೆಯಬೇಕು ಎಂಬುದು ಗಾಂಧೀಜಿ ಆಶಯವಾಗಿತ್ತು. ಆದರೆ ಇಂದಿಗೂ ಆ ಕನಸು ಈಡೇರಿಲ್ಲ ಎಂದು ತಿಳಿಸಿದರು.

ನಿಜವಾಗಿದೆ ಡಾ.ಅಂಬೇಡ್ಕರ್‌ ಆತಂಕ: ಆದರ್ಶ ಭಾರತ ನಿರ್ಮಾಣವಾಗಲು ಆದರ್ಶ ಗ್ರಾಮಗಳು ನಿರ್ಮಾಣವಾಗಬೇಕು ಎಂಬುದು ಅವರ ಉದ್ದೇಶವಾಗಿತ್ತು. ಆರ್ಥಿಕ ಮತ್ತು ರಾಜಕೀಯ ಅಧಿಕಾರ ಕೆಲವೇ ಮಂದಿಯ ಕಪಿಮುಷ್ಟಿಯಲ್ಲಿ ಇರಬಾರದು ಅಂದುಕೊಂಡಿದ್ದರು. ಆದೂ ಕೂಡ ಸಾಧ್ಯವಾಗಿಲಿಲ್ಲ. ಅಂತೆಯೇ ಡಾ.ಅಂಬೇಡ್ಕರ್‌ ಸಂವಿಧಾನದಲ್ಲಿ ಅಧಿಕಾರ ವಿಕೇಂದ್ರೀಕರಣವಾದಾಗ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂದು ಪ್ರತಿಪಾದಿಸಿದ್ದರು.

ಇದರಿಂದಾಗಿ 1992ರಲ್ಲಿ ಸಂವಿಧಾನಕ್ಕೆ 73ನೇ ತಿದ್ದುಪಡಿ ತಂದು ಪಂಚಾಯತ್‌ ರಾಜ್‌ ವ್ಯವಸ್ಥೆ ಜಾರಿಗೊಳಿಸಲಾಯಿತು. ಒಂದು ಹಂತದವರೆಗೆ ಅಧಿಕಾರ ವಿಕೇಂದ್ರೀಕರಣವೇನೋ ಆಯಿತು. ಆದರೆ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಸಾಧ್ಯವಾಗಲಿಲ್ಲ. ಅಧಿಕಾರ ಆಳುವವರ ಕಪಿಮುಷ್ಟಿಯಲ್ಲಿ ಸಿಕ್ಕಿದರೆ ಕಷ್ಟ ಎಂಬ ಅಂಬೇಡ್ಕರ್‌ ಆತಂಕ ನಿಜವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ಕಂದಾಚಾರದಂತಹ ಪ್ರಕರಣ ನಡೆಯುತ್ತಿದೆ. ಮದ್ಯಪಾನ ಮಾರಾಟ ಎಂಬುದು ನಿರಂತರವಾಗಿ ನಡೆಯುತ್ತಿದೆ. ಸರ್ಕಾರಿ ಕಚೇರಿಯ ಗಾಂಧೀಜಿಯ ಭಾವಚಿತ್ರದ ಕಳೆಗೆ ಕುಳಿತು ಬಾರ್‌ ತೆರೆಯಲು ಅನುಮತಿ ನೀಡುತ್ತಿರುವುದು ಗಾಂಧಿಯನ್ನು ಅಣಕಿಸಿದಂತಾಗುತ್ತಿದೆ. ಪ್ರತಿ ವರ್ಷ ಶೇ.18 ರಷ್ಟು ಮಂದಿ ಮದ್ಯಪ್ರಿಯರ ಸಂಖ್ಯೆ ಹೆಚ್ಚುತ್ತಿದೆ.

Advertisement

ಏಡ್ಸ್‌ ನಿಯಂತ್ರಣ ಯೋಜನೆಯಡಿ ಪುನರ್ವಸತಿ ಕಲ್ಪಿಸಿ, ಅದೇ ಮಹಿಳೆಯರನ್ನು ಬಳಸಿಕೊಂಡು ಉಚಿತ ಕಾಂಡೋಮ್‌ ಹಂಚಿಸುವ ಮೂಲಕ ಸರ್ಕಾರಿ ಪ್ರಾಯೋಜಿತ ವೇಶ್ಯಾವಾಟಿಕೆಯಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಾಮಾಜಿಕ ಕಾರ್ಯಕರ್ತ ಕಾಡಶೆಟ್ಟಿಹಳ್ಳಿ ಸತೀಶ್‌ ಪ್ರಿತಿಕ್ರಿಯಿಸಿದರು. ಪ್ರಜಾವಾಣಿ ಕಾರ್ಯಕಾರಿ ಸಂಪಾದಕ ರವೀಂದ್ರ ಭಟ್‌ ಅಧ್ಯಕ್ಷತೆ ವಹಿಸಿದ್ದರು.

ಸಬ್‌ಹೆಡ್‌ ಆಗಿ ಬೇರೆ ಬಳಸಿ ಜನರಿಂದ ದೂರವಾಗುತ್ತಿವೆ ಪತ್ರಿಕೆಗಳು: ಗಾಂಧಿ-ಪತ್ರಿಕೋದ್ಯಮ ಕುರಿತು ವಿಷಯ ಮಂಡಿಸಿದ ಪತ್ರಕರ್ತ ಹೃಷಿಕೇಶ್‌ ಬಹದ್ದೂರ್‌ ದೇಸಾಯಿ ಮಾತನಾಡಿ, ಮೊಬೈಲ್‌, ಟೀ, ಸೋಸಿಯಲ್‌ ಮೀಡಿಯಾಗಳಿಂದಾಗಿ ಪತ್ರಿಕೆಗಳನ್ನು ಜನರು ದೂರ ಮಾಡುತ್ತಿದ್ದಾರೆ ಎಂಬುದು ಸುಳ್ಳು. ಜನರಿಂದ ಪತ್ರಿಕೆಗಳು ದೂರವಾಗುತ್ತಿವೆ. ಜನರಿಗೆ ಬೇಕಾದ ವಿಷಯವನ್ನು ನಾವು ನೀಡುತ್ತಿಲ್ಲ.

ಕೇವಲ ಪ್ರಸರಣವನ್ನು ದ್ವಿಗುಣಗೊಳಿಸಬೇಕು ಅಥವಾ ಹೆಚ್ಚು ಮಾಡಬೇಕು ಎಂಬ ಕಲ್ಪನೆಯಲ್ಲಿದ್ದೇವೆ. ಹಾಗೆ ನೋಡಿದರೆ ಸ್ವಾತಂತ್ರ ಪೂರ್ವದಲ್ಲಿ ಗಾಂಧೀಜಿ ಅವರು ನಡೆಸುತ್ತಿದ್ದ ಹರಿಜನ ಪತ್ರಿಕೆಯು ಕೇವಲ 4 ಸಾವಿರ ಪ್ರಸರಣ ಸಂಖ್ಯೆ ಹೊಂದಿತ್ತು. ಆದರೂ ದೇಶದ ಮೂಲೆ ಮೂಲೆಗೂ ಅವರ ವಿಚಾರ ತಲುಪಿತಿತ್ತು. ಅಷ್ಟರ ಮಟ್ಟಿಗೆ ಅದರ ಪರಿಣಾಮ ಬೀರುತಿತ್ತು. ಆದರೆ ಲಕ್ಷ ಲಕ್ಷ ಪ್ರಸರಣ ಹೊಂದಿರುವ ಪತ್ರಿಕೆಗಳ ಫ‌‌ಲಶ್ರುತಿ ಏನಿದೆ ಎಂದು ಪ್ರಶ್ನಿಸಿದರು.

ದೃಶ್ಯ ಮಾಧ್ಯಮಗಳು ಟಿಆರ್‌ಪಿ ಗಣತಿ ಮಾಡುತ್ತವೆ. ದೇಶದಲ್ಲಿ 130 ಕೋಟಿ ಜನಸಂಖ್ಯೆಯಿದೆ. ಶೋ ರೂಂಗಳಲ್ಲಿರುವ ಟೀವಿಯನ್ನೂ ಸೇರಿ 50 ಕೋಟಿ ಟೀವಿಯಿದೆ. ಆದರೆ ಅವರು ಗಣತಿಗೆ ಒಳಪಡಿಸುವುದು ಕೇವಲ ಐದಾರು ಸಾವಿರ ಟೀವಿಯನ್ನು ಮಾತ್ರ. ತನ್ನ ಬೊಜ್ಜು, ಮಧುಮೇಹ ಕರಗಿಸಿಕೊಳ್ಳಲಾಗದ ಜ್ಯೋತಿಷಿ, ಆಸ್ಪತ್ರೆಗೆ ರೋಗಿಗಳೇ ಬಾರದ ವೈದ್ಯರು ಬಂದು ಟಿವಿ ಮುಂದೆ ಕೂರುತ್ತಾರೆ.

ರಾತ್ರಿಯಾದರೆ ಮನೆಯನ್ನು ಮುರಿಯುವ ಧಾರಾವಾಹಿ ಬರುತ್ತವೆ. ವೈನ್‌ ಮೇಳದ ಕುರಿತ ವರದಿ ಪ್ರಸಾರ ಮಾಡಲು ನಿರೂಪಕಿಯ ಕೈಯಲ್ಲಿ ವೈನ್‌ ಹಿಡಿಸುತ್ತಾರೆ. ಸ್ಮಶಾನದ ಸುದ್ದಿ ಪ್ರಕಟಿಸುವಾಗ ನಿರೂಪಕಿಗೆ ಬಿಳಿ ಸೀರೆ ತೊಡಿಸಿ ಸಮಾಧಿಯ ಮೇಲೆ ಕೂರಿಸುತ್ತಾರೆ. ಇದೆಲ್ಲವೂ ಟಿಆರ್‌ಪಿಗಾಗಿ ಎಂದು ವ್ಯಂಗ್ಯವಾಡಿದರು. ಮಾಧ್ಯಮಗಳು ಬಳಸುವ ಪದಗಳು ಸರಳವಾಗಿರಬೇಕು. ವಿವಿಗಳಲ್ಲಿ ನಡೆಯುವ ವಿಚಾರ ಸಂಕಿರಣದಂತೆ ಕ್ಲಿಷ್ಟವಿರಬಾರದು.

ಆದರೆ ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳಲ್ಲಿಯೂ ಕೂಡ ಕ್ಲಿಷ್ಟ ಪದಬಳಕೆ, ವಿದ್ವತ್‌ಪೂರ್ವ ಲೇಖನಗಳು ಪ್ರಕಟವಾಗುತ್ತಿರುವುದೂ ಕೂಡ ಪತ್ರಿಕೆಗಳಿಂದ ಜನ ದೂರವಾಗಲು ಕಾರಣ ಎಂಬುದನ್ನು ಮರೆಯಬಾರದು ಎಂದರು. ಫ್ಯಾಶನ್‌ ಷೋನಲ್ಲಿ ಬಳಸುವ ಬಟ್ಟೆ ಮತ್ತು ವಿಚಾರ ಸಂಕಿರಣದಲ್ಲಿ ಬಳಸುವ ಭಾಷೆ ಎರಡೂ ನಿಜ ಜೀವನದಲ್ಲಿ ಉಪಯೋಗಕ್ಕೆ ಬರುವುದಿಲ್ಲ. ಏಕೆಂದರೆ ಯಾವಾಗಲೂ ಆ ಮಾದರಿಯ ಬಟ್ಟೆಯನ್ನಾಗಲಿ,

ಆ ಮಾದಿರಯಲ್ಲಿ ಮಾತನಾಡುವುದಾಗಲಿ ಸಾಧ್ಯವಾಗುವುದಿಲ್ಲ. ಅಂತೆಯೇ ಸಮಾಜದಲ್ಲಿ ನಾವು ಮತ್ತು ಅವರು ಎಂಬ ವರ್ಗ ಸೃಷ್ಟಿಯಾಗಿದೆ. ನಾವು ಏಕೆ ಅವರ ಸುದ್ದಿ ಬರೆಯಬೇಕು ಎಂದು ಪ್ರಶ್ನಿಸುವಂತಾಗಿದೆ. ಪತ್ರಕರ್ತರಾದವರಿಗೆ ಅದು ಇರಬಾರದು. ಇಷ್ಟಕ್ಕೂ ಮಹತ್ಮ ಗಾಂಧೀಜಿ ಅವರು 45 ವರ್ಷ ಪತ್ರಿಕೆಗಳಲ್ಲಿ ಕೆಲಸ ಮಾಡಿದರೂ ಕೂಡ ಅವರು ಜನರಿಗೆ ಪೂರಕವಾಗಿದ್ದರು. ನಾವು ವೃತ್ತಿಯಾಗಿಸಿಕೊಂಡಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next