ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿ ಮತ್ತೆ ವಾಯುಮಾಲಿನ್ಯದ ಕೂಪದೊಳಕ್ಕೆ ಬಿದ್ದಿದೆ. ದೆಹಲಿಯ ಹಲವು ಪ್ರದೇಶಗಳಲ್ಲಿ ನಿಷೇಧದ ಹೊರತಾಗಿಯೂ ಜನರು ಪಟಾಕಿಗಳನ್ನು ಸಿಡಿಸುತ್ತಾ ದೀಪಾವಳಿ ಆಚರಿಸಿದ ಪರಿಣಾಮ ಹಾಗೂ ನೆರೆಯ ರಾಜ್ಯಗಳಲ್ಲಿ ಬೆಳೆ ಕಳೆಗಳಿಗೆ ರೈತರು ಬೆಂಕಿ ಹಚ್ಚಿದ ಪರಿಣಾಮ ಶನಿವಾರ ಸಂಜೆಯಾಗುತ್ತಲೇ ವಾಯುಮಾಲಿನ್ಯವು “ಗಂಭೀರ’ ಮಟ್ಟಕ್ಕೆ ತಲುಪಿದೆ.
ಒಟ್ಟಾರೆ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ(ಎಕ್ಯೂಐ) 414 ಆಗಿದ್ದು, “ಗಂಭೀರ’ ಕೆಟಗರಿಯನ್ನು ತಲುಪಿದೆ. ಹಲವು ಪ್ರದೇಶಗಳಲ್ಲಿ ಇದು 500ರ ಗಡಿ ದಾಟಿದೆ. ಈ ಸೂಚ್ಯಂಕ 60ರ ಮೇಲೇರಿದರೆ ಅನಾರೋಗ್ಯಕರ ಎಂದೇ ಅರ್ಥ.
ವಾಯುಗುಣಮಟ್ಟ ಕ್ಷೀಣಿಸಿದ ಪರಿಣಾಮ, ದೆಹಲಿಯಲ್ಲಿ ದಪ್ಪ ಹೊಗೆಯ ಪದರ ಸೃಷ್ಟಿಯಾಗಿದ್ದು, ಗೋಚರತೆ ಕೂಡ ಕುಗ್ಗಿ ಹೋಗಿದೆ.
ಇದನ್ನೂ ಓದಿ:ಮೈತ್ರಿಯ ಪ್ರಶ್ನೆಯೇ ಇಲ್ಲ, ಕಾಂಗ್ರೆಸ್-ಬಿಎಸ್ಪಿಗೆ ಗುಡ್‌ಬೈ! ಅಖೀಲೇಶ್ ಯಾದವ್ ಸ್ಪಷ್ಟನೆ
ನಾಗರಿಕರಲ್ಲಿ ಕಣ್ಣು ಉರಿ, ಗಂಟಲು ನೋವು, ಉಸಿರಾಟದ ಸಮಸ್ಯೆಯೂ ಕಾಣಿಸಿಕೊಂಡಿದೆ. ಹೀಗಾಗಿ, ಕೊರೊನಾ ಸೋಂಕಿನ ವ್ಯಾಪಿಸುವಿಕೆ ಅಧಿಕವಾಗುವ ಆತಂಕವೂ ಎದುರಾಗಿದೆ.