“ಅನಿಸುತಿದೆ ಯಾಕೋ ಇಂದು…’ ಎಂಬ ಪದಗಳಿಂದ ಶುರುವಾಗುವ ಜಯಂತ ಕಾಯ್ಕಣಿ ಸಾಹಿತ್ಯದ ಈ ಹಾಡು ಕೇಳದವರಿಲ್ಲ ಬಿಡಿ. ಇಂದಿಗೂ ಈ ಹಾಡು ಅನೇಕರ ಬಾಯಲ್ಲಿ, ಸೆಲ್ ಪೋನ್‌ಗಳ ರಿಂಗ್ ಟೋನ್‌ಗಳಲ್ಲಿ ಆಗಾಗ್ಗೆ ಗುನುಗುಡುತ್ತಿರುತ್ತದೆ. ಈಗ ಇದೇ “ಅನಿಸುತಿದೆ’ ಎಂಬ ಪದ ಚಿತ್ರವೊಂದರ ಶೀರ್ಷಿಕೆಯಾಗಿ ತೆರೆಮೇಲೆ ಬರುತ್ತಿದೆ. ಅಂದಹಾಗೆ “ಅನಿಸುತಿದೆ’ ಚಿತ್ರದ ಶೀರ್ಷಿಕೆಗೆ “ಎ ಲವ್ ಸ್ಟೋರಿ ಆಫ್ ಎ ಫೈಟರ್’ ಎಂಬ ಅಡಿಬರಹವಿದ್ದು, ತ್ರಿಕೋನ ಪ್ರೇಮಕಥೆಯೊಂದನ್ನು ತೆರೆ ಮೇಲೆ ಹೇಳಲು ಚಿತ್ರತಂಡ ಸಜ್ಜಾಗಿದೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಟೀಸರ್ ಮತ್ತು ಲಿರಿಕಲ್ ವಿಡಿಯೋವನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ.
“ಅನಿಸುತಿದೆ’ ಚಿತ್ರಕ್ಕೆ ಅರ್ಜುನ್ ವಿರಾಟ್ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ರಚಿಸಿ, ನಿರ್ದೇಶನವನ್ನೂ ಮಾಡಿದ್ದಾರೆ. ಜೊತೆಗೆ ಚಿತ್ರದಲ್ಲಿ ನಾಯಕ ನಟನಾಗಿ ಬೆಳ್ಳಿತೆರೆಗೂ ಪರಿಚಯವಾಗುತ್ತಿದ್ದಾರೆ.
ತಮ್ಮ ಈ ಪ್ರಯತ್ನದ ಬಗ್ಗೆ ಮಾತನಾಡುವ ಅರ್ಜುನ್ ವಿರಾಟ್, “ಸುಮಾರು ಐದು ವರ್ಷಗಳ ಹಿಂದೆ ಚಿಕ್ಕದಾಗಿ ಶುರುವಾದ ಈ ಸಿನಿಮಾ ಈಗ ತೆರೆಗೆ ಬರುವ ಹಂತ ತಲುಪಿದೆ. ಮೊದಲು ಇದೇ ಹೆಸರಿನ ಮೇಲೆ ಕಥೆ ರೆಡಿ ಮಾಡಿಕೊಂಡು ನಟ ಗಣೇಶ್ ಬಳಿ ಹೋದಾಗ ಒಂದು ಬಾರಿ ನಿರ್ದೇಶನ ಮಾಡಿರುವವರಿಗೆ ಕಾಲ್‌ಶೀಟ್ ಕೊಡುವುದಾಗಿ ಹೇಳಿದ್ದರು. ಗಣೇಶ್ ಅವರನ್ನು ಬಿಟ್ಟು ಬೇರೆ ಯಾರೂ ಈ ಕಥೆಗೆ ಹೊಂದಾಣಿಕೆಯಾಗುತ್ತಿರಲಿಲ್ಲ. ಕೊನೆಗೆ ಈ ಚಿತ್ರದಲ್ಲಿ ನಾನೇ ಅಭಿನಯಿಸುವ ನಿರ್ಧಾರಕ್ಕೆ ಬಂದೆ. ಒಬ್ಬ ಕುರುಡ ತನಗೆ ಇಷ್ಟವಾದ ಕಲಾವಿದರನ್ನು ಸಿನಿಮಾದಲ್ಲಿ ಹೇಗೆ ನೋಡುತ್ತಾನೆ, ಕೊನೆಗೆ ಅವನು ಇಷ್ಟಪಡುವವರು ಹೇಗೆ ಕಾಣಿಸುತ್ತಾರೆಂದು ತನ್ನ ಮನದಾಳದಲ್ಲಿ ಊಹೆ ಮಾಡಿಕೊಳ್ಳುತ್ತಾನೆ. ಅವನ ಮನಸ್ಥಿತಿಯೊಂದಿಗೆ ತ್ರಿಕೋನ ಪ್ರೇಮಕಥೆ ತೆರೆದುಕೊಳ್ಳುತ್ತದೆ. ಮುಂದೆ ಏನಾಗುತ್ತದೆ ಅನ್ನೋದನ್ನು ಚಿತ್ರಮಂದಿರದಲ್ಲಿ ನೋಡಬೇಕು’ ಎನ್ನುತ್ತಾರೆ ಅವರು.
ಚಿತ್ರದಲ್ಲಿ ನಾಯಕ ಅರ್ಜುನ್ ವಿರಾಟ್‌ಗೆ ನಾಯಕಿಯಾಗಿ ಆರೋಹಿತಾ ಮತ್ತು ಅಂಜನಾ ಗೌಡ ಜೋಡಿಯಾಗಿದ್ದಾರೆ. ಆರೋಹಿತಾ ಹಳ್ಳಿ ಹುಡುಗಿಯಾಗಿ ಮತ್ತು ಅಂಜನಾ ಗೌಡ ಸಿಟಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಕೆಂಪೇಗೌಡ, ಶಶಿಕಲಾ, ಲಕ್ಷೀಪತಿ ಮೊದಲಾದ ಕಲಾವಿದರ ತಾರಾಗಣ ಚಿತ್ರದಲ್ಲಿದೆ. ಚಿತ್ರಕ್ಕೆ ರಮೇಶ್ ಕೊಯಿರ ಛಾಯಾಗ್ರಹಣ, ಕುಮಾರ್ ಸಿ.ಹೆಚ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು, ಎಸ್.ಆರ್.ಪ್ರಭು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. “ಕನ್ನಡದ ಮನೆ ಚಿತ್ರ’ ಬ್ಯಾನರ್‌ನಲ್ಲಿ ಜಯಮ್ಮ ಶ್ರೀನಿವಾಸ್ ಮತ್ತು ಎನ್. ಹೇಮಂತ್ ಕುಮಾರ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದ ದೃಶ್ಯಗಳಿಗೆ ಮಂಡ್ಯ, ಮೈಸೂರು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಮುಂದಿನ ಮಾರ್ಚ್ ಅಂತ್ಯದೊಳಗೆ “ಅನಿಸುತಿದೆ’ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.