ಜಗತ್ತು ಎಷ್ಟೇ ಮುಂದುವರೆದಿದ್ದರೂ, ಸಮಾಜದಲ್ಲಿ ಹೆಣ್ಣಿನ ಮೇಲೆ ಆಗುತ್ತಿರುವ ಶೋಷಣೆ, ಅತ್ಯಾಚಾರದಂತಹ ಘಟನೆಗಳು ಕಡಿಮೆಯಾಗುತ್ತಿಲ್ಲ. ಹೆಣ್ಣಿನ ಮೇಲಿನ ಇಂಥದ್ದೇ ಶೋಷಣೆಯ ಬಗ್ಗೆ ಬೆಳಕು ಚೆಲ್ಲುವ ಚಿತ್ರವೊಂದು ತಯಾರಾಗಿದ್ದು, ಅದುವೇ “ಮಾಜರ್’.
ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ಮಾಜರ್’ ಚಿತ್ರ ಸಂಪೂರ್ಣಗೊಂಡು, ಈಗ ಬಿಡುಗಡೆ ಹಂತಕ್ಕೆ ಬಂದಿದೆ. “ಸಂಗೀತಾ ಸಿನಿ ಹೌಸ್’ ಬ್ಯಾನರಿನಲ್ಲಿ ಡಾ. ಮುರುಗನಂದನ್ ಎಂ ನಿರ್ಮಾಣದಲ್ಲಿ ತಯಾರಾಗಿರುವ “ಮಾಜರ್’ ಚಿತ್ರಕ್ಕೆ ಲೋಕಲ್ ಲೋಕಿ ನಿರ್ದೇಶನವಿದೆ.
ಚಿತ್ರದ ಪ್ರಚಾರದ ಮೊದಲ ಹಂತವಾಗಿ ಚಿತ್ರತಂಡ ಇತ್ತೀಚೆಗೆ ಚಿತ್ರದ ಹಾಡುಗಳನ್ನು ಬಿಡುಗಡೆಗೊಳಿಸಿತು. ಅಬಕಾರಿ ಸಚಿವ ಕೆ. ಗೋಪಾಲಯ್ಯ, ನಟ ಶ್ರೀನಗರ ಕಿಟ್ಟಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ ಹರೀಶ್ ಮೊದಲಾದ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದು, “ಮಾಜರ್’ ಚಿತ್ರದ ಹಾಡುಗಳನ್ನು ಬಿಡುಗಡೆಗೊಳಿಸಿ ಚಿತ್ರ ತಂಡಕ್ಕೆ ಶುಭಕೋರಿದರು.
ಇದೇ ವೇಳೆ ಮಾತನಾಡಿದ ನಿರ್ದೇಶಕ ಲೋಕಿ, “”ಮಾಜರ್’ ಅಂದರೆ ಅದು ಆಡು ಭಾಷೆಯಲ್ಲಿ ಮಹಜರು ಎಂದರ್ಥ. ಚಿತ್ರದಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರ ಮಾಡಿದವರಿಗೆ ಸರಿಯಾದ ಶಿಕ್ಷೆ ಆಗಬೇಕು. ಇಂದು ಹೆಣ್ಣು ಮಕ್ಕಳಿಗೆ ಎಷ್ಟು ಅಭದ್ರತೆ ಕಾಡುತ್ತಿದೆ ಎಂದು ತೋರಿಸಿದ್ದೇವೆ. ಚಿತ್ರದಲ್ಲಿ ಒಂದು ಮರ್ಡರ್, ಸಸ್ಪೆನ್ಸ್, ಲವ್ ಸ್ಟೋರಿ ಎಲ್ಲವೂ ಇದೆ. ಚಿತ್ರದ ಕೆಲಸಗಳು ಮುಗಿದಿದೆ. ಶೀಘ್ರದಲ್ಲಿ ಚಿತ್ರ ಬಿಡುಗಡೆ ಮಾಡಲಿದ್ದೇವೆ’ ಎಂದರು.
ನಿರ್ಮಾಪಕ ಮುರುಗನಂದನ್ ಮಾತನಾಡಿ, “ಒಬ್ಬಬ್ಬರಿಗೂ ಒಂದು ರೀತಿಯ ಪ್ಯಾಶನ್ ಇರುತ್ತೆ. ಅದೇ ರೀತಿ ನನಗೆ ಒಂದು ಸಿನಿಮಾ ಮಾಡಬೇಕು. ಅದರಲ್ಲೂ ಕನ್ನಡದಲ್ಲೇ ಮಾಡಬೇಕು ಎಂದು. ಕರೊನಾ ಸಮಯದಲ್ಲಿ ಆರಂಭವಾದ ಚಿತ್ರ ಎಲ್ಲ ಅಡೆತಡೆ ಮೀರಿ ಇಲ್ಲಿಯವರೆಗೆ ಬಂದಿದೆ. ಇನ್ನು ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರವನ್ನು ಸಹ ಮಾಡಿದ್ದೇನೆ’ ಎಂದರು.
ರಾಜೇಶ್ ರಮಾನಾಥ್‌ಮತ್ತು ಎ.ಟಿ ರವೀಶ್ ಸಂಗೀತ ಸಂಯೋಜನೆಯ ಮೂರು ಹಾಡುಗಳಿಗೆ ಸಂತೋಷ್ ವೆಂಕಿ, ಶಶಾಂಕ್ ಶೇಷಗಿರಿ, ಹುಚ್ಚಾ ವೆಂಕಟ್ ಧ್ವನಿಯಾಗಿದ್ದಾರೆ. ಉಗ್ರಂ ರವಿ, ಸಂಭ್ರಮಶ್ರೀ, ಅರ್ಜುನ್ ಪುಲಿ ಮುರುಗನ್, ಲೋಕಲ್ ಲೋಕಿ, ಹರೀಶ್, ರಾಜು, ವಿಶ್ವ, ಸಚಿನ್, ಗಂಗಾ ಮುಂತಾದವರು “ಮಾಜರ್’ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.