Advertisement

ಏಕದಿನ: ಕಿವೀಸ್‌ ಕ್ಲೀನ್‌ ಸ್ವೀಪ್‌ ಸಾಹಸ

12:30 AM Feb 21, 2019 | |

ಡ್ಯುನೆಡಿನ್: ಬೃಹತ್‌ ಮೊತ್ತದ ಸವಾಲಿನೊಂದಿಗೆ ಬಾಂಗ್ಲಾದೇಶವನ್ನು 3ನೇ ಪಂದ್ಯದಲ್ಲೂ ಬಗ್ಗುಬಡಿದ ನ್ಯೂಜಿಲ್ಯಾಂಡ್‌, ಏಕದಿನ ಸರಣಿಯನ್ನು 3-0 ಅಂತರದಿಂದ ಕ್ಲೀನ್‌ ಸ್ವೀಪ್‌  ಆಗಿ ವಶಪಡಿಸಿಕೊಂಡಿದೆ. ಬುಧವಾರ ಡ್ಯುನೆಡಿನ್‌ನಲ್ಲಿ ನಡೆದ ಮುಖಾಮುಖೀಯಲ್ಲಿ ಆತಿಥೇಯ ಕಿವೀಸ್‌ 88 ರನ್ನುಗಳ ಜಯ ಸಾಧಿಸಿತು.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ನ್ಯೂಜಿಲ್ಯಾಂಡ್‌ 6 ವಿಕೆಟಿಗೆ 330 ರನ್‌ ಪೇರಿಸಿದರೆ, ಬಾಂಗ್ಲಾದೇಶ 47.2 ಓವರ್‌ಗಳಲ್ಲಿ 242ಕ್ಕೆ ಆಲೌಟ್‌ ಆಯಿತು. ರಾಸ್‌ ಟಯ್ಲರ್‌ ನ್ಯೂಜಿಲ್ಯಾಂಡ್‌ ಏಕದಿನ ಇತಿಹಾಸದಲ್ಲಿ ಸರ್ವಾಧಿಕ ರನ್‌ ಗಳಿಸಿದ್ದು, ಪರಾಜಿತ ತಂಡದ ಬ್ಯಾಟ್ಸ್‌ಮನ್‌ ಶಬ್ಬೀರ್‌ ರೆಹಮಾನ್‌ ಮೊದಲ ಶತಕ ಬಾರಿಸಿದ್ದೆಲ್ಲ ಈ ಪಂದ್ಯದ ವಿಶೇಷಗಳಾಗಿದ್ದವು. ನ್ಯೂಜಿಲ್ಯಾಂಡ್‌ ಪರ ರಾಸ್‌ ಟಯ್ಲರ್‌ 69, ಹೆನ್ರಿ ನಿಕೋಲ್ಸ್‌ 64, ಟಾಮ್‌ ಲ್ಯಾಥಂ 59 ರನ್‌ ಹೊಡೆದರು.

ಟಯ್ಲರ್‌ ನೂತನ ಮೈಲುಗಲ್ಲು
47ನೇ ಅರ್ಧ ಶತಕದೊಂದಿಗೆ ಮಿಂಚಿದ ರಾಸ್‌ ಟಯ್ಲರ್‌ ತಮ್ಮ ಒಟ್ಟು ರನ್‌ ಗಳಿಕೆಯನ್ನು 8,026ಕ್ಕೆ ಏರಿಸಿದರು. ಇದರೊಂದಿಗೆ 8,007 ರನ್‌ ಮಾಡಿದ ಸ್ಟೀಫ‌ನ್‌ ಫ್ಲೆಮಿಂಗ್‌ ಅವರ ಕಿವೀಸ್‌ ದಾಖಲೆ ಪತನಗೊಂಡಿತು. ಇದು 34ರ ಹರೆಯದ ಟಯ್ಲರ್‌ ಪಾಲಿನ 203ನೇ ಇನ್ನಿಂಗ್ಸ್‌. 82 ಎಸೆತ ಎದುರಿಸಿದ ಟಯ್ಲರ್‌ 7 ಬೌಂಡರಿ ಹೊಡೆದರು.

ಶಬ್ಬೀರ್‌ ಏಕಾಂಗಿ ಹೋರಾಟ
ಚೇಸಿಂಗ್‌ ವೇಳೆ ಬಾಂಗ್ಲಾ 61 ರನ್ನಿಗೆ 5 ವಿಕೆಟ್‌ ಕಳೆದುಕೊಂಡು ದೊಡ್ಡ ಸೋಲಿನತ್ತ ಮುಖ ಮಾಡಿತ್ತು. ಆದರೆ 6ನೇ ಕ್ರಮಾಂಕದಲ್ಲಿ ಆಡಲಿಳಿದ ಶಬ್ಬೀರ್‌ ರೆಹಮಾನ್‌ ಅಮೋಘ ಶತಕವೊಂದನ್ನು ಬಾರಿಸಿ ಬಾಂಗ್ಲಾ ಮೊತ್ತವನ್ನು 250ರ ಗಡಿ ಸಮೀಪಿಸುವಂತೆ ಮಾಡಿದರು. 110 ಎಸೆತ ಎದುರಿಸಿದ ಶಬ್ಬೀರ್‌ 12 ಬೌಂಡರಿ, 2 ಸಿಕ್ಸರ್‌ ನೆರವಿನಿಂದ 102 ರನ್‌ ಹೊಡೆದರು. ಇದು ಅವರ ಮೊದಲ ಏಕದಿನ ಶತಕ.

ಬಾಂಗ್ಲಾ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಮಧ್ಯಮ ವೇಗಿ ಟಿಮ್‌ ಸೌಥಿ. ಅವರ ಸಾಧನೆ 65ಕ್ಕೆ 6 ವಿಕೆಟ್‌. ಸೌಥಿ ಏಕದಿನದಲ್ಲಿ 5 ಪ್ಲಸ್‌ ವಿಕೆಟ್‌ ಉರುಳಿಸಿದ 3ನೇ ಸಂದರ್ಭ ಇದಾಗಿದೆ.

Advertisement

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲ್ಯಾಂಡ್‌-6 ವಿಕೆಟಿಗೆ 330 (ಟಯ್ಲರ್‌ 69, ನಿಕೋಲ್ಸ್‌ 64, ಲ್ಯಾಥಂ 59, ಮುಸ್ತಫಿಜುರ್‌ 93ಕ್ಕೆ 2). ಬಾಂಗ್ಲಾದೇಶ-47.2 ಓವರ್‌ಗಳಲ್ಲಿ 242 (ಶಬ್ಬೀರ್‌ 102, ಸೈಫ‌ುದ್ದೀನ್‌ 44, ಮೆಹಿದಿ ಹಸನ್‌ 37, ಸೌಥಿ 65ಕ್ಕೆ 6). ಪಂದ್ಯಶ್ರೇಷ್ಠ: ಟಿಮ್‌ ಸೌಥಿ. ಸರಣಿಶ್ರೇಷ್ಠ: ಮಾರ್ಟಿನ್‌ ಗಪ್ಟಿಲ್‌.

“ದೇಶವನ್ನು ಸುದೀರ್ಘ‌ ಕಾಲ ಪ್ರತಿನಿಧಿಸಿದರೆ ಇಂಥ ದಾಖಲೆ ಒಲಿಯುವುದು ಸಹಜ. ನಮ್ಮ ಮುಂದಿನ ಸಾಧಕನಿಗೊಂದು ಇದೊಂದು ಟಾರ್ಗೆಟ್‌. ಆದರೆ ಇನ್ನೂ ಕೆಲವು ವರ್ಷ ಈ ದಾಖಲೆ ನನ್ನ ಹೆಸರಲ್ಲೇ ಉಳಿಯಲಿದೆ’
– ರಾಸ್‌ ಟಯ್ಲರ್‌

Advertisement

Udayavani is now on Telegram. Click here to join our channel and stay updated with the latest news.

Next