Advertisement

ಏಕೈಕ ಟಿ-20 ಮುಖಾಮುಖೀ ತಾಹಿರ್‌ ಅಬ್ಬರ; ಕಿವೀಸ್‌ ತತ್ತರ

03:45 AM Feb 18, 2017 | |

ಆಕ್ಲೆಂಡ್‌: ಸರಣಿಯ ಏಕೈಕ ಟಿ-20 ಮೇಲಾಟದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ನ್ಯೂಜಿಲ್ಯಾಂಡನ್ನು 78 ರನ್ನುಗಳ ಭಾರೀ ಅಂತರದಿಂದ ಕೆಡವಿದೆ.

Advertisement

ಮಳೆ ಭೀತಿಯಿಲ್ಲದೆ ಸಾಗಿದ ಶುಕ್ರವಾರದ ಸ್ಪರ್ಧೆಯಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ 6 ವಿಕೆಟಿಗೆ 185 ರನ್‌ ಪೇರಿಸಿದರೆ, ನ್ಯೂಜಿಲ್ಯಾಂಡ್‌ ಕೇವಲ 14.5 ಓವರ್‌ಗಳಲ್ಲಿ 107 ರನ್ನಿಗೆ ಗಂಟುಮೂಟೆ ಕಟ್ಟಿತು. 62 ರನ್‌ ಬಾರಿಸಿದ ಆರಂಭಕಾರ ಹಾಶಿಮ್‌ ಆಮ್ಲ, 24ಕ್ಕೆ 5 ವಿಕೆಟ್‌ ಹಾರಿಸಿ ಜೀವನಶ್ರೇಷ್ಠ ಸಾಧನೆಗೈದ ಇಮ್ರಾನ್‌ ತಾಹಿರ್‌ ದಕ್ಷಿಣ ಆಫ್ರಿಕಾ ಗೆಲುವಿನ ರೂವಾರಿಗಳಾಗಿ ಮೂಡಿಬಂದರು.

ಆಫ್ರಿಕಾಕ್ಕೆ ಹಾಶಿಮ್‌ ಆಮ್ಲ-ಫಾ ಡು ಪ್ಲೆಸಿಸ್‌ ಜೋಡಿಯಿಂದ ಅಬ್ಬರದ ಆರಂಭ ಲಭಿಸಿತು. ಅಪಾಯಕಾರಿ ಓಪನರ್‌ ಕ್ವಿಂಟನ್‌ ಡಿ ಕಾಕ್‌ ಖಾತೆ ತೆರೆಯದೆ ಮರಳಿದರೂ ದ್ವಿತೀಯ ವಿಕೆಟಿಗೆ ಜತೆಗೂಡಿದ ಆಮ್ಲ-ನಾಯಕ ಡು ಪ್ಲೆಸಿಸ್‌ ಸೇರಿಕೊಂಡು ಸ್ಫೋಟಕ ಆಟಕ್ಕೆ ಮುಂದಾದರು. ಆತಿಥೇಯರ ದಾಳಿಯನ್ನು ಪುಡಿಗುಟ್ಟುತ್ತ 8.3 ಓವರ್‌ಗಳಿಂದ 87 ರನ್‌ ಪೇರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಎಬಿ ಡಿ ವಿಲಿಯರ್, ಜೀನ್‌ಪಾಲ್‌ ಡ್ಯುಮಿನಿ ಅವರಿಂದಲೂ ಉತ್ತಮ ಪ್ರದರ್ಶನ ಕಂಡುಬಂತು.

ಆಮ್ಲ ಅವರಿಂದ ಅರ್ಧ ಶತಕದ ಕೊಡುಗೆ ಸಂದಾಯವಾಯಿತು. 43 ಎಸೆತ ನಿಭಾಯಿಸಿದ ಅವರು 9 ಬೌಂಡರಿ, ಒಂದು ಸಿಕ್ಸರ್‌ ನೆರವಿನಿಂದ 62 ರನ್‌ ಹೊಡೆದರು. ಇದು ಆಮ್ಲ ಅವರ 6ನೇ ಫಿಫ್ಟಿ. ಬಿರುಸಿನ ಆಟವಾಡಿದ ಡು ಪ್ಲೆಸಿಸ್‌ 25 ಎಸೆತಗಳಿಂದ 36 ರನ್‌ ಹೊಡೆದರು. ಇದರಲ್ಲಿ 3 ಸಿಕ್ಸರ್‌, ಒಂದು ಬೌಂಡರಿ ಒಳಗೊಂಡಿತ್ತು.

ಡಿ ವಿಲಿಯರ್ 17 ಎಸೆತಗಳಿಂದ 26 ರನ್‌ (3 ಬೌಂಡರಿ, 1 ಸಿಕ್ಸರ್‌), ಡ್ಯುಮಿನಿ 16 ಎಸೆತಗಳಿಂದ 29 ರನ್‌ (2 ಬೌಂಡರಿ, 2 ಸಿಕ್ಸರ್‌) ಬಾರಿಸಿದರು.

Advertisement

ತಾಹಿರ್‌ ಜೀವನಶ್ರೇಷ್ಠ ಸಾಧನೆ
ದೊಡ್ಡ ಮೊತ್ತವನ್ನು ಬೆನ್ನಟ್ಟಲಿಳಿದ ನ್ಯೂಜಿಲ್ಯಾಂಡಿಗೆ ಆರಂಭದಲ್ಲಿ ಕ್ರಿಸ್‌ ಮಾರಿಸ್‌, ಆ್ಯಂಡಿಲ್‌ ಫೆಲುಕ್ವಾಯೊ ಬೆದರಿಕೆಯೊಡ್ಡಿದರು. ಬಳಿಕ ಲೆಗ್‌ಸ್ಪಿನ್ನರ್‌ ಇಮ್ರಾನ್‌ ತಾಹಿರ್‌ ಸಿಂಹಸ್ವಪ್ನರಾದರು. 10 ರನ್‌ ಆಗುವಷ್ಟರಲ್ಲಿ 2 ವಿಕೆಟ್‌ ಉದುರಿಸಿಕೊಂಡ ಕಿವೀಸ್‌ ಕುಸಿಯುತ್ತಲೇ ಹೋಯಿತು.

ಲೆಗ್‌ಸ್ಪಿನ್ನರ್‌ ತಾಹಿರ್‌ ಟಿ-ಟ್ವೆಂಟಿಯಲ್ಲಿ ಮೊದಲ ಸಲ 5 ವಿಕೆಟ್‌ ಕಿತ್ತು ಮಿಂಚಿದರು. ಈ ಸಾಧನೆಯ ವೇಳೆ ಅವರು 50 ವಿಕೆಟ್‌ ಬೇಟೆಯನ್ನೂ ಪೂರ್ತಿಗೊಳಿಸಿದರು. ಇದು ಅವರ 31ನೇ ಪಂದ್ಯ. ಈ ಲೆಕ್ಕಾಚಾರದಲ್ಲಿ ತಾಹಿರ್‌ ಅವರದು 2ನೇ ಅತೀ ವೇಗದ ಸಾಧನೆ. ಲಂಕೆಯ ಅಜಂತ ಮೆಂಡಿಸ್‌ 26 ಪಂದ್ಯಗಳಲ್ಲಿ 50 ವಿಕೆಟ್‌ ಸಾಧನೆ ಮಾಡಿದ್ದರು. ಇತ್ತಂಡಗಳಿನ್ನು ಏಕದಿನ ಸರಣಿಯಲ್ಲಿ ಸೆಣಸಲಿದ್ದು, ಮೊದಲ ಪಂದ್ಯ ಫೆ. 19ರಂದು ಹ್ಯಾಮಿಲ್ಟನ್‌ನಲ್ಲಿ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್‌: ದಕ್ಷಿಣ ಆಫ್ರಿಕಾ-6 ವಿಕೆಟಿಗೆ 185 (ಆಮ್ಲ 62, ಡು ಪ್ಲೆಸಿಸ್‌ 36, ಡ್ಯುಮಿನಿ 29, ಬೌಲ್ಟ್ 8ಕ್ಕೆ 2, ಗ್ರ್ಯಾಂಡ್‌ಹೋಮ್‌ 22ಕ್ಕೆ 2). ನ್ಯೂಜಿಲ್ಯಾಂಡ್‌-14.5 ಓವರ್‌ಗಳಲ್ಲಿ 107 (ಬ್ರೂಸ್‌ 33, ಸೌಥಿ 20, ತಾಹಿರ್‌ 24ಕ್ಕೆ 5, ಫೆಲುಕ್ವಾಯೊ 19ಕ್ಕೆ 3, ಮಾರಿಸ್‌ 10ಕ್ಕೆ 2). ಪಂದ್ಯಶ್ರೇಷ್ಠ: ಇಮ್ರಾನ್‌ ತಾಹಿರ್‌.

Advertisement

Udayavani is now on Telegram. Click here to join our channel and stay updated with the latest news.

Next