ಕ್ರೈಸ್ಟ್‌ಚರ್ಚ್: ಆಕ್ಲಂಡ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ನಾಟಕೀಯ ಕುಸಿತ ಕಂಡಿದ್ದ ಇಂಗ್ಲೆಂಡ್ ತಂಡವು ಶುಕ್ರವಾರದಿಂದ ಆರಂಭವಾದ ದ್ವಿತೀಯ ಟೆಸ್ಟ್ ಆರಂಭದಲ್ಲಿ ಕುಸಿತ ಕಂಡಿತ್ತು. ಆದರೆ ಜಾನಿ ಬೇರ್‌ಸ್ಟೋ ಮತ್ತು ಮಾರ್ಕ್ ವುಡ್ ಅವರ ಜವಾಬ್ದಾರಿಯ ಆಟದಿಂದಾಗಿ ಇಂಗ್ಲೆಂಡ್ ಚೇತರಿಸಿಕೊಂಡಿದ್ದು ದಿನದಾಟದ ಅಂತ್ಯಕ್ಕೆ 8 ವಿಕೆಟಿಗೆ 290 ರನ್ ಪೇರಿಸಿದೆ.
ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಇಂಗ್ಲೆಂಡ್ ಆರಂಭದಲ್ಲಿಯೇ ಆಘಾತ ಅನುಭವಿಸಿತು. ಆದರೆ ಸ್ಟೋನ್‌ಮ್ಯಾನ್ ಅವರ ಉತ್ತಮ ಆಟದಿಂದಾಗಿ ಚೇತರಿಸಿಕೊಂಡಿತು. ತಂಡದ ಮೊತ್ತ 94 ತಲುಪಿದಾಗ ಐವರು ಪ್ರಮುಖ ಆಟಗಾರರು ಕಳೆದುಕೊಂಡ ಇಂಗ್ಲೆಂಡ್ ಮತ್ತೆ ಅಲ್ಪ ಮೊತ್ತಕ್ಕೆ ಕುಸಿಯಬಹುದೆಂದು ಭಾವಿಸಲಾಗಿತ್ತು. ಆದರೆ ಬೇರ್‌ಸ್ಟೋ ಇತರ ಮೂವರು ಆಟಗಾರರ ಉತ್ತಮ ಬೆಂಬಲದಿಂದ ತಂಡವನ್ನು ಸುಸ್ಥಿತಿಗೆ ತಲುಪಿಸಿದರು.
ತಂಡದ ಮೊತ್ತ 94 ರನ್ ತಲುಪಿದಾಗ ಆರಂಭಿಕ ಸ್ಟೋನ್‌ಮ್ಯಾನ್ ಔಟಾದರು. ಅವರು 111 ಎಸೆತ ಎದುರಿಸಿ 35 ರನ್ ಗಳಿಸಿದ್ದರು. ಆಬಳಿಕ ಬೇರ್‌ಸ್ಟೋ ಜವಾಬ್ದಾರಿಯ ಆಟವಾಡಿ ಪಂದ್ಯದ ಗತಿಯನ್ನು ಬದಲಿಸಿದರು. ಮೊದಲಿಗೆ ಬೆನ್ ಸ್ಟೋಕ್ಸ್ ಜತೆ 6ನೇ ವಿಕೆಟಿಗೆ 57 ರನ್ ಪೇರಿಸಿದ ಬೇರ್‌ಸ್ಟೋ 8ನೇ ವಿಕೆಟಿಗೆ ವುಡ್ ಜತೆ 95 ರನ್ನುಗಳ ಉತ್ತಮ ಜತೆಯಾಟ ನಡೆಸಿದರು. ವುಡ್ 52 ರನ್ ಗಳಿಸಿದರು.
ವಿಕೆಟ್‌ನ ಒಂದು ಕಡೆ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತ ಬೇರ್‌ಸ್ಟೋ ಮುರಿಯದ 9 ವಿಕೆಟಿಗೆ 31 ರನ್ ಪೇರಿಸಿದ್ದಾರಲ್ಲದೇ ವೈಯಕ್ತಿಕವಾಗಿ 5ನೇ ಶತಕ ದಾಖಲಿಸುವ ಸನಿಹ ಬಂದಿದ್ದಾರೆ. 154 ಎಸೆತ ಎದುರಿಸಿರುವ ಅವರು 97 ರನ್ ಗಳಿಸಿ ಆಡುತ್ತಿದ್ದಾರೆ. ಬಿಗು ದಾಳಿ ಸಂಘಟಿಸಿದ ಟಿಮ್ ಸೌಥಿ 60 ರನ್ನಿಗೆ 5 ವಿಕೆಟ್ ಉರುಳಿಸಿದರೆ ಬೌಲ್ಟ್ 79 ರನ್ನಿಗೆ 3 ವಿಕೆಟ್ ಪಡೆದಿದ್ದಾರೆ.
ಸಂಕ್ಷಿಪ್ತ ಸ್ಕೋರು
ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್ 8 ವಿಕೆಟಿಗೆ 290 (ಸ್ಟೋನ್‌ಮ್ಯಾನ್ 35, ಜೋ ರೂಟ್ 37, ಬೆನ್ ಸ್ಟೋಕ್ಸ್ 25, ಬೇರ್‌ಸ್ಟೋ 97 ಬ್ಯಾಟಿಂಗ್, ವುಡ್ 52, ಬೌಲ್ಟ್ 79ಕ್ಕೆ 3, ಸೌಥಿ 60ಕ್ಕೆ 5).