Advertisement

ಹೊಸ ಟ್ಯಾಂಕ್‌ ನಿರ್ಮಾಣ: ಜನರ ಬೇಡಿಕೆಗೆ ಇನ್ನಾದರೂ ಸಿಗಲಿ ಮನ್ನಣೆ

12:06 PM Mar 08, 2018 | Team Udayavani |

ಸವಣೂರು: ಗ್ರಾಮೀಣ ಭಾಗದ ಜನತೆಯ ಮೂಲ ಸೌಕರ್ಯಗಳ ಪೂರೈಕೆಗೆ ಸರಕಾರ ಎಷ್ಟೇ ಕ್ರಮ ಕೈಗೊಂಡರೂ ಅದು ಜನತೆಗೆ ಸರಿಯಾಗಿ ಸಿಗುವುದು ಕಷ್ಟ. ಸವಣೂರು ಗ್ರಾ.ಪಂ. ವ್ಯಾಪ್ತಿಯ ಸವಣೂರು ವಾರ್ಡ್‌ 2ರ ಮಾಂತೂರುನಲ್ಲಿರುವ ಕುಡಿಯುವ ನೀರಿನ ಟ್ಯಾಂಕ್‌ನ ಸ್ಥಿತಿಯನ್ನು ನೋಡಿದರೆ ಇದು ತಿಳಿಯುತ್ತದೆ.

Advertisement

ಸುಮಾರು 25 ವರ್ಷಗಳ ಹಿಂದೆ ಕಟ್ಟಿದ ಟ್ಯಾಂಕ್‌ನಿಂದ ಗ್ರಾಮಸ್ಥರು ಈಗಲೂ ನೀರು ಬಳಸಿಕೊಳ್ಳುತ್ತಿದ್ದಾರೆ. ಆದರೆ ಇಂದು ಈ ಟ್ಯಾಂಕ್‌ ಸ್ಥಿತಿ ತೀರಾ ಅಪಾಯಕಾರಿಯಾಗಿದೆ. ಹೊಸ ಟ್ಯಾಂಕ್‌ ನಿರ್ಮಿಸಬೇಕೆಂಬ ಜನರ ಕೂಗಿಗೆ ಇನ್ನೂ ಬೆಲೆ ಸಿಕ್ಕಿಲ್ಲ.

ಕಬ್ಬಿಣ ಕಾಣುತ್ತಿದೆ
ಟ್ಯಾಂಕ್‌ನ ಸಿಮೆಂಟ್‌ ಪದರ ಕಿತ್ತು ಬೀಳುತ್ತಿದೆ. ಹೀಗಾಗಿ, ಟ್ಯಾಂಕ್‌ ನಿರ್ಮಾಣ ಸಂದರ್ಭದಲ್ಲಿ ಅಳವಡಿಸಲಾದ ಕಬ್ಬಿಣ ಹೊರಗೆ ಕಾಣಿಸುತ್ತಿದೆ. ಈ ಸ್ಥಿತಿಯನ್ನು ಗಮನಿಸಿದರೆ, ಟ್ಯಾಂಕ್‌ ಅಪಾಯದಲ್ಲಿರುವುದು ತಿಳಿಯುತ್ತದೆ. ಪಕ್ಕದಲ್ಲೇ ವಾಸದ ಮನೆಗಳು ಇರುವುದರಿಂದ ಜನರು ಭಯದಲ್ಲೇ ಬದುಕುವಂತಾಗಿದೆ.

ರಾತ್ರಿ ಫುಲ್‌, ಮರುದಿನ ಖಾಲಿ!
ರಾತ್ರಿ ನೀರು ತುಂಬಿಸಿದರೂ ಬೆಳಗ್ಗೆದ್ದು ನೋಡುವಾಗ ಟ್ಯಾಂಕ್‌ನಲ್ಲಿ ಅರ್ಧದಷ್ಟು ಮಾತ್ರವೇ ಉಳಿಯುತ್ತಿದೆ. ಟ್ಯಾಂಕ್‌ ಸೋರುತ್ತಿರುವುದೇ ಇದಕ್ಕೆ ಕಾರಣ. ಟ್ಯಾಂಕನ್ನು ಪೂರ್ಣವಾಗಿ ತುಂಬಿಸಲೂ ಕಷ್ಟವಾಗುತ್ತಿದೆ. ವಿದ್ಯುತ್‌ ಕೈಕೊಟ್ಟರಂತೂ ಈ ಭಾಗದ ಜನತೆಯ ಪಾಡು ಹೇಳತೀರದು. ಹೀಗಾಗಿ, ಸ್ಥಳೀಯರು ನೀರಿಗಾಗಿ ಹಪಾಹಪಿಸುತ್ತಿದ್ದಾರೆ.

ಟ್ಯಾಂಕ್‌ ನಿರ್ಮಾಣವಾಗಿ ಹಲವು ವರ್ಷಗಳು ಕಳೆದಿವೆ. ಇನ್ನು ಇದರ ಬಾಳಿಕೆ ಕೆಲವೇ ವರ್ಷಗಳು. ಅದು ಕುಸಿದು ಬೀಳುವ ಮುನ್ನ ದುರಸ್ತಿ ಅಥವಾ ಹೊಸ ಟ್ಯಾಂಕ್‌ ನಿರ್ಮಾಣಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನ ಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

120ಕ್ಕೂ ಅಧಿಕ ಸಂಪರ್ಕ
ಈ ಟ್ಯಾಂಕ್‌ನಿಂದ ಸವಣೂರು ವಾರ್ಡ್‌ 2 ಮತ್ತು 3ರ ಪರಿಸರದ 120ಕ್ಕೂ ಹೆಚ್ಚಿನ ಮನೆಗಳಿಗೆ ನೀರಿನ ಸಂಪರ್ಕವಿದೆ. ಆದುದರಿಂದ ಈ ಟ್ಯಾಂಕ್‌ ಕುಸಿದು ಬೀಳುವ ಮುಂಚೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಕುರಿತು ಗಮನಹರಿಸಬೇಕಾದ ಆವಶ್ಯಕತೆ ಇದೆ. ಈ ಟ್ಯಾಂಕ್‌ನ ಅವ್ಯವಸ್ಥೆಯಿಂದ ಇದರಲ್ಲಿ ಪೂರ್ತಿ ನೀರು ಶೇಖರಣೆಯಾಗುತ್ತಿಲ್ಲ. ಇದರಿಂದ ಪ್ರತಿದಿನ ಎಲ್ಲರಿಗೂ ನೀರು ಸರಬರಾಜಾಗುವಂತೆ ಮಾಡಲು ಹರಸಾಹಸ ಮಾಡಬೇಕಿದೆ. ಇಲ್ಲಿ ಹೊಸ ಟ್ಯಾಂಕ್‌ ನಿರ್ಮಾಣ ಮಾಡಿದರೆ ಸಮಸ್ಯೆ ಪರಿಹರಿಸಬಹುದು.

ಗ್ರಾ.ಪಂ. ಸಭೆಯಲ್ಲಿ ಪ್ರಸ್ತಾವ
ಕುಡಿಯುವ ನೀರಿನ ಟ್ಯಾಂಕ್‌ನ ಸ್ಥಿತಿಯ ಬಗ್ಗೆ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಈ ಭಾಗದ ಸದಸ್ಯನಾಗಿ, ಏಳು ವರ್ಷಗಳಿಂದ ಪ್ರಸ್ತಾವಿಸುತ್ತಿದ್ದೇನೆ. ಜಿ.ಪಂ.ಗೆ ಬರೆದುಕೊಂಡರೂ ಯಾವುದೇ ಪ್ರಯೋಜನ ಆಗಿಲ್ಲ. ಇದು ಯಾವ ಸಮಯದಲ್ಲಿ ಕುಸಿದು ಬೀಳಬಹುದು ಎಂಬ ಭಯ ಈ ಭಾಗದ ಜನತೆಯಲ್ಲಿದೆ. ಈಗ ಇರುವ ಟ್ಯಾಂಕಿ ತೆರವಿಗೆ ಜಿ.ಪಂ.ನಿಂದ ಆದೇಶ ಬಂದಿದೆ. ಆದರೆ ಬದಲಿ ವ್ಯವಸ್ಥೆಯಾಗದೆ ಟ್ಯಾಂಕ್‌ ತೆರವು ಮಾಡಿದರೆ ಜನತೆಗೆ ನೀರಿನ ಸಮಸ್ಯೆ ಇನ್ನಷ್ಟು ಹೆಚ್ಚಳವಾಗಲಿದೆ.
– ಅಬ್ದುಲ್‌ ರಝಾಕ್‌
ಸವಣೂರು ಗ್ರಾ.ಪಂ. 2ನೇ ವಾರ್ಡ್‌ ಸದಸ್ಯ

ಹೊಸ ಟ್ಯಾಂಕ್‌ ನಿರ್ಮಾಣವಾಗಲಿ
ಇಲ್ಲಿ ಹೊಸ ಟ್ಯಾಂಕ್‌ ರಚನೆಯ ಕುರಿತು ಹಲವು ಬಾರಿ ಗ್ರಾ.ಪಂ.ಗೆ ಮನವಿ ಮಾಡಿದ್ದು, ಗ್ರಾ.ಪಂ.ನ ಸೀಮಿತ ಅನುದಾನದಲ್ಲಿ ಇದು ಅಸಾಧ್ಯ ಎಂದು ಮಾಹಿತಿ ನೀಡಿದ್ದಾರೆ. ತಾ.ಪಂ., ಜಿ.ಪಂ.ಗೆ ಒತ್ತಡ ಹಾಕಿದರೆ ಇದು ಸಾಧ್ಯವಾಗಬಹುದೆಂಬ ಆಶಾ ಭಾವನೆ ನಮ್ಮದು. ಇಲ್ಲಿ ಹೊಸ ಟ್ಯಾಂಕ್‌ ನಿರ್ಮಾಣವಾಗುವುದು ಆವಶ್ಯ.
ಅಶ್ರಫ್‌ ಜನತಾ ಶಾಂತಿನಗರ
   ಗ್ರಾಮಸ್ಥ 

ಜಿ.ಪಂ.ಗೆ ಕಳುಹಿಸಲಾಗಿದೆ
ಇಲ್ಲಿನ ಜನತೆಯ ಬೇಡಿಕೆ ಮೇರೆಗೆ ಟ್ಯಾಂಕ್‌ ನಿರ್ಮಾಣ ಕುರಿತು ಅಂದಾಜು ಪಟ್ಟಿ ತಯಾರಿಸಿ ಈ ಹಿಂದೆಯೇ ಜಿ.ಪಂ.ಗೆ ಕಳುಹಿಸಲಾಗಿದೆ. ಅಂದಾಜು 10 ಲಕ್ಷ ರೂ ಅನುದಾನ ಬೇಕಾಗುವುದು. ಅನುದಾನ ಲಭ್ಯವಾದ ಕೂಡಲೇ ಹೊಸ ಟ್ಯಾಂಕ್‌ ನಿರ್ಮಾಣ ಮಾಡಲಾಗುವುದು. ಈ ಕುರಿತು ಗ್ರಾಮಸಭೆಯಲ್ಲಿಯೂ ಜನರಿಂದ ಒತ್ತಾಯ ಕೇಳಿಬಂದಿತ್ತು .
– ಗೋವರ್ಧನ್‌
ಜಿ.ಪಂ. ಎಂಜಿನಿಯರ್‌

ಪ್ರವೀಣ್‌ ಚೆನ್ನಾವರ 

Advertisement

Udayavani is now on Telegram. Click here to join our channel and stay updated with the latest news.

Next