ಪುತ್ತೂರು: ಜನತೆಗೆ ಸುಲಭ ದರದಲ್ಲಿ ಮರಳು ಸಿಗುವಂತಾಗಬೇಕು ಎನ್ನುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಇದೀಗ “ಹೊಸ ಮರಳು ನೀತಿ’ಯನ್ನು ಜಾರಿಗೆ ತಂದಿದೆ. ಕಟ್ಟಡ ನಿರ್ಮಾಣ ಮಾಡುವ ಹಾಗೂ ಸರಕಾರಿ ಯೋಜನೆಗಳಿಗೆ ಮರಳಿನ ಕೊರತೆ ಕಾಡುವುದಿಲ್ಲ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.
ಕೈಗೆಟಕುವ ದರದಲ್ಲಿ ಮರಳು ಲಭ್ಯತೆ
ಕಳೆದ 2 ವರ್ಷಗಳಿಂದ ಮರಳು ನೀತಿಯ ಕ್ಲಿಷ್ಟತೆಯಿಂದಾಗಿ ಜನಸಾಮಾನ್ಯರ ಅಗತ್ಯ ಕಾಮಗಾರಿಗಳಿಗೆ ಮರಳಿನ ಕೊರತೆ ಕಾಡಿದ್ದು, ಸರಕಾರದ ವಸತಿ ಯೋಜನೆಗಳ ನಿರ್ಮಾಣಕ್ಕೂ ಸಮಸ್ಯೆ ಉಂಟಾಗಿತ್ತು. ರಾಜ್ಯದ ಜನತೆಗೆ ಸುಲಭ ದರದಲ್ಲಿ ಮರಳು ದೊರೆಯುವಂತಾಗಲು ಸಚಿವ ಸಂಪುಟ ಉಪ ಸಮಿತಿಯ ಶಿಫಾರಸಿನ ಅನ್ವಯ ರಚಿಸಲಾದ ಹೊಸ ಮರಳು ನೀತಿ ತತ್‌ಕ್ಷಣದಿಂದ ಆನ್ವಯವಾಗುವಂತೆ ಜಾರಿಗೊಳಿಸಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆದೇಶಿಸಿದೆ. ಮುಂದಿನ ದಿನಗಳಲ್ಲಿ ಕೈಗೆಟಕುವ ದರದಲ್ಲಿ ಮರಳು ಸಿಗಲಿದೆ ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಇಲಾಖಾಧಿಕಾರಿಗಳ ಸಭೆಯಲ್ಲಿ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಮತ್ತು ಪಾರದರ್ಶಕವಾಗಿ ಮರಳು ದೊರೆಯುವಂತೆ ಮಾಡುವ ಉದ್ದೇಶ ದಿಂದ ಹೊಸ ಮರಳು ನೀತಿ-2020ನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ, ಪ್ರಸ್ತಾವನೆಗಾಗಿ ಅನುಮೋದನೆ ಪಡೆದು ಜಾರಿಗೊಳಿಸಲು ತೀರ್ಮಾನಿಸಲಾಗಿತ್ತು. ಇದೀಗ ಮರಳು ನೀತಿ 2020ರನ್ನು ಅನುಷ್ಠಾನದಿಂದ ಮರಳಿನ ಅಭಾವ ಹಾಗೂ ಹೆಚ್ಚು ದರ ನೀಡಿ ಮರಳು ಪಡೆಯಬೇಕಾಗಿದ್ದ ಜನರ ಬವಣೆಗೆ ಪರಿಹಾರ ದೊರೆತಂತಾಗಿದೆ ಎಂದು ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.