Advertisement

ಪಶುವೈದ್ಯ ಕಾಲೇಜಿಗೆ ಹೊಸ ರಸ್ತೆ: ಭೂ ಮಾಲಿಕರ ವಿರೋಧ

02:36 PM Nov 18, 2021 | Team Udayavani |

ಹಾಸನ: ನಗರದ ಹೊರ ವಲಯ ಚಿಕ್ಕ ಹೊನ್ನೇನಹಳ್ಳಿ ಬಳಿಯಿರುವ ಸರ್ಕಾರಿ ಪಶುವೈದ್ಯಕೀಯ ಕಾಲೇಜಿಗೆ ವರ್ತುಲ ರಸ್ತೆಯಿಂದ ನೇರ ರಸ್ತೆ ನಿರ್ಮಾಣಕ್ಕೆ ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಪ್ರಯತ್ನ ನಡೆಸಿದೆ. ಆದರೆ, ಈ ರಸ್ತೆ ನಿರ್ಮಾಣಕ್ಕೆ ಭಾರೀ ಪ್ರಮಾಣದ ಭೂಮಿ ಬಳಕೆಯಾಗಲಿದ್ದು, ಭೂ ಮಾಲೀಕರಿಂದ ವಿರೋಧವೂ ವ್ಯಕ್ತವಾಗಿದೆ. ಪಶುವೈದ್ಯಕೀಯ ಕಾಲೇಜಿಗೆ ಈಗ ನೇರ ರಸ್ತೆಯಿಲ್ಲ.

Advertisement

ಈಗ ವರ್ತುಲ ರಸ್ತೆಯಿಂದ ವಿಜಯಾ ಸ್ಕೂಲ್‌ ಮುಂಭಾಗ ಪಶುವೈದ್ಯಕೀಯ ಕಾಲೇಜು ಕ್ಯಾಂಪಸ್‌ಗೆ ರಸ್ತೆ ಇದೆ. ಆದರೆ, ಆ ರಸ್ತೆ ತುಂಬಾ ಕಿರಿದಾಗಿದೆ. ಹಾಗಾಗಿ ವರ್ತುಲ ರಸ್ತೆಯಿಂದ ಕಾಲೇಜಿಗೆ ನೇರ ರಸ್ತೆ ಬೇಕು ಎಂದು ಈ ಹಿಂದೆ ನಡೆಸಿದ್ದ ಪ್ರಯತ್ನ ಕೈಗೂಡಿರಲಿಲ್ಲ. ಕೆಲವು ನಿವೇಶನ ಹಾಗೂ ಮನೆಗಳನ್ನು ಸ್ವಾಧೀನಪಡಿಸಿಕೊಂಡು ರಸ್ತೆ ನಿರ್ಮಾಣಕ್ಕೆ ಪ್ರಯತ್ನ ನಡೆದಾಗ ನಿವೇಶನಗಳ ಹಾಗೂ ಮನೆಗಳ ಮಾಲಿಕರು ನ್ಯಾಯಾಲಯದ ಮೊರೆ ಹೋಗಿದ್ದರು.

ನ್ಯಾಯಾಲಯದಲ್ಲಿ ವಿಚಾರಣೆಯ ನಂತರ ಕಾಲೇಜಿಗೆ ಈಗ ರಸ್ತೆ ಇರುವುದರಿಂದ ಹೊಸ ರಸ್ತೆ ನಿರ್ಮಾಣದ ಅಗತ್ಯವಿಲ್ಲ ಎಂದು ನ್ಯಾಯಾಲಯವು 2007 – 08 ರಲ್ಲಿ ಅಭಿಪ್ರಾಯಪಟ್ಟಿತ್ತು. ಹಾಗಾಗಿ ಹೊಸ ರಸ್ತೆ ನಿರ್ಮಾಣದ ಪ್ರಸ್ತಾಪವನ್ನು ಕೈಬಿಡಲಾಗಿತ್ತು. ಆದರೆ ಈಗ ಮತ್ತೆ ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಹೊಸ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ ಎಂದು ಕೆಲವು ಭೂ ಮಾಲಿಕರು ಆರೋಪಿಸಿದ್ದಾರೆ.

ಹಾಸನದ ಕುವೆಂಪು ನಗರ 2ನೇ ಹಂತದಿಂದ ವರ್ತುಲ ರಸ್ತೆ ಸೇರುವ ( ಮಾಸ್ಟರ್ ಪಿ.ಯು.ಕಾಲೇಜು ಮುಂಭಾಗದ ರಸ್ತೆ ) ರಸ್ತೆ ಏಳೆಂಟು ವರ್ಷಗಳ ಹಿಂದೆ ನಿರ್ಮಾಣವಾಗಿದೆ.

ಆ ರಸ್ತೆ ವರ್ತುಲ ರಸ್ತೆಯನ್ನು ಸೇರುವ ಸ್ಥಳದಿಂದ ಉಲ್ಲಾಸ್‌ ಬಾರ್‌ ಪಕ್ಕದಲ್ಲಿ ಸತ್ಯಮಂಗಲ ಕೆರೆಯ ಉದ್ಯಾನವನದ ಪಕ್ಕದಲ್ಲಿ ( ಉದ್ಭವ ಗಣಪತಿ ದೇವಾಲಯದ ಪಕ್ಕ) ಸಾಗಿ ಎಡೆಯೂರು ರಸ್ತೆ ಸಂಪರ್ಕಿಸಿ , ಅಲ್ಲಿಂದ ನೇರವಾಗಿ ಪಶುವೈದ್ಯ ಕಾಲೇಜಿಗೆ ಸಂಪರ್ಕ ಕಲ್ಪಿಸುವ ಹೊಸ ರಸ್ತೆ ನಿರ್ಮಿಸಲು ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಉದ್ದೇಶಿಸಿದೆ ಎಂದು ತಮ್ಮ ನಿವೇಶನ ಹಾಗೂ ಕೃಷಿ ಭೂಮಿ ರಸ್ತೆ ನಿರ್ಮಾಣಕ್ಕೆ ಕಳೆದುಕೊಳ್ಳಬೇಕಾದೀತೆಂದು ಆತಂಕ ಪಡುತ್ತಿರುವ ಕೆಲವರು ಶಂಕಿಸಿದ್ದಾರೆ.

Advertisement

ಸಿಡಿಪಿ ಅಸ್ತ್ರ: ರಸ್ತೆ ನಿರ್ಮಿಸಲು ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಉದ್ದೇಶಿಸಿರುವ ಪ್ರದೇಶದಲ್ಲಿ ಸಿಡಿಪಿ ಪ್ರಕಾರ ರಸ್ತೆ ಗುರ್ತಿಸಲಾಗಿದೆ. ಅದರಂತೆ ರಸ್ತೆ ನಿರ್ಮಿಸಲು ಪ್ರಾಧಿಕಾರ ಯೋಜನೆ ರೂಪಿಸಿಕೊಂಡಿದೆ. ಸಿಡಿಪಿ ಅಸ್ತ್ರ ಬಳಸಿ ರಸ್ತೆ ನಿರ್ಮಿಸುವುದಾದರೆ ಭೂ ಸ್ವಾಧೀನ ಪ್ರಕ್ರಿಯೆ, ಭೂ ಪರಿಹಾರದ ಗೋಜು ಇರುವುದಿಲ್ಲ ಎಂದು ಪ್ರಾಧಿಕಾರ ಭಾವಿಸಿದೆ ಎಂಬುದು ಭೂಮಿ ಅಥವಾ ನಿವೇಶನ ಕಳೆದುಕೊಳ್ಳಬೇಕಾದವರ ಆರೋಪ.

ನಿರ್ದೇಶನ: ಈ ಹಿಂದೆ ನ್ಯಾಯಾಲಯವೇ ಪಶುವೈದ್ಯಕೀಯ ಕಾಲೇಜಿಗೆ ಹೊಸ ರಸ್ತೆಯ ಅಗತ್ಯವಿಲ್ಲ ಎಂದು ನಿರ್ದೇಶನ ನೀಡಿರುವುದರಿಂದ ಈಗ ಹೊಸದಾಗಿ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದು ನ್ಯಾಯಾಂಗದ ನಿಂದೆಯೂ ಆಗುತ್ತದೆ. ಪಶುವೈದ್ಯ ಕಾಲೇಜು ರಸ್ತೆ ನಿರ್ಮಾಣಕ್ಕೆ ಸಂಬಂಧಪಟ್ಟ ಇಲಾಖೆಗೆ 2.58 ಕೋಟಿ ರೂ. ಠೇವಣಿ ಇರಿಸಿದೆ. ಆ ಹಣವನ್ನು ಖರ್ಚು ಮಾಡಿ ಪ್ರಭಾವಿಗಳು ಖರೀದಿಸಿರುವ ಬೇನಾಮಿ ಆಸ್ತಿಗೆ ಮೌಲ್ಯ ತಂದು ಕೊಡುವ ಉದ್ದೇಶದಿಂದ ಪಶುವೈದ್ಯಕೀಯ ಕಾಲೇಜಿಗೆ ಹೊಸ ರಸ್ತೆ ನಿರ್ಮಾಣಕ್ಕೆ ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಗುಟ್ಟಾಗಿ ಪ್ರಯತ್ನ ರೂಪಿಸಿದೆ ಎಂದು ನಿವೇಶನದಾರರು ದೂರಿದ್ದಾರೆ.

ಯೋಜನೆ ರೂಪಿಸಿಲ್ಲ: ಪಶುವೈದ್ಯಕೀಯ ಕಾಲೇಜಿಗೆ ಹೊಸ ರಸ್ತೆ ನಿರ್ಮಿಸುವ ಯೋಜನೆಯನ್ನು ರೂಪಿಸಿಲ್ಲ ಎಂದು ಲೋಕೋಪಯೋಗಿ ಇಲಾಖೆಯು ಸ್ಪಷ್ಟಪಡಿಸಿದೆ. ಈ ಸಂಬಂಧ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿಯಲ್ಲಿಯೂ ಸ್ಪಷ್ಟಪಡಿಸಿದೆ ಎಂದು ತಿಳಿಸಿರುವ ಭೂಮಿ ಮತ್ತು ನಿವೇಶನ ಮಾಲಿಕರು, ಹಾಸನ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿಯೂ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯಲ್ಲಿ ಸರ್ಕಾರದಿಂದ ಅನುಮೋದನೆಯಾಗಿರುವ ಮಹಾ ಯೋಜನೆ ನಕ್ಷೆಯಲ್ಲಿ ಸಿಡಿಪಿ ಪ್ಲಾನ್‌ ಸರ್ವೆ ನಂ.110, 111, 112, 113,114 ರಲ್ಲಿ ರಸ್ತೆಗೆ ಕಾಯ್ದಿರಿಸಲಾಗಿದೆ ಮತ್ತು ರಸ್ತೆ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ ಎಂದು ಮಾಹಿತಿಯನ್ನು ನೀಡಿದೆ ಎಂದು ದಾಖಲೆಯನ್ನು ದೂರುದಾರರು ನೀಡಿದ್ದಾರೆ.

ಇದನ್ನೂ ಓದಿ:- ಅಜೇಯ ಶತಕ: ಬಿಬಿಎಲ್ ನಲ್ಲಿ ಹೊಸ ದಾಖಲೆ ಬರೆದ ಸ್ಮೃತಿ ಮಂಧನಾ

2006- 07 ರ ಸಾಲಿನಲ್ಲಿ ವರ್ತುಲ ರಸ್ತೆಯಿಂದ ಪಶುವೈದ್ಯಕೀಯ ಕಾಲೇಜಿಗೆ ರಸ್ತೆ ನಿರ್ಮಾಣಕ್ಕೆ 2.08 ಎಕರೆಯನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿತ್ತು. ಆದರೆ ಈಗ ವರ್ತುಲ ರಸ್ತೆ, ಉಲ್ಲಾಸ್‌ ಬಾರ್‌ ಪಕ್ಕದಿಂದ ಸತ್ಯಮಂಗಲ ಕೆರೆ ಅಚ್ಚುಕಟ್ಟು ಪ್ರದೇಶ, ಉದ್ಯಾನವನ ಮಾರ್ಗ ಎಡೆಯೂರು ರಸ್ತೆ ಮೂಲಕ ಪಶುವೈದ್ಯ ಕಾಲೇಜಿಗೆ 110 ಎಕರೆ ಭೂಮಿ ಬಳಸಿಕೊಳ್ಳಲಾಗುತ್ತಿದೆ. ಇಷ್ಟು ಭೂಮಿಯಲ್ಲಿ ನೂರಾರು ಮಂದಿ ನಿವೇಶನ ಖರೀದಿಸಿ ಮನೆ ನಿರ್ಮಿಸಲು ಯೋಜಿಸಿರುವ ಹೊತ್ತಿನಲ್ಲಿ ಈಗ ರಸ್ತೆ ನಿರ್ಮಿಸಲು ಮುಂದಾಗಿರುವುದು ಸರಿಯಲ್ಲ. ಸಂಬಂಧಪಟ್ಟ ಜನ ಪ್ರತಿನಿಧಿಗಳು , ಅಧಿಕಾರಿಗಳು 2.08 ಕೋಟಿ ರೂ. ಹಣ ದುರ್ಬಳಕೆಯಾಗದಂತೆ ಹಾಗೂ ನೂರಾರು ಮಂದಿ ನಿವೇಶನದಾರರ ಕನಸು ಭಗ್ನಗೊಳಿಸುವ ರಸ್ತೆ ನಿರ್ಮಾಣಕ್ಕೆ ಅವಕಾಶ ಕೊಡಬಾರದು ಎಂದೂ ಮನವಿ ಮಾಡಿದ್ದಾರೆ.

“ ಪಶುವೈದ್ಯಕೀಯ ಕಾಲೇಜಿಗೆ 110 ಭೂಮಿ ಬಳಸಿಕೊಂಡು ರಸ್ತೆ ನಿರ್ಮಾಣಕ್ಕೆ ಹಾಸನ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಯೋಜನೆ ರೂಪಿಸಿಲ್ಲ. ಸಿಡಿಪಿ ಪ್ಲಾನ್‌ನಲ್ಲಿ ರಸ್ತೆ ನಿರ್ಮಾಣಕ್ಕೆ ಕಾಯ್ದಿರಿ ಸಲಾಗಿದೆ. ಆದರೆ, ರಸ್ತೆ ನಿರ್ಮಾಣಕ್ಕೆ ಇದುವರೆಗೂ ಯೋಜನೆ ರೂಪಿಸಿಲ್ಲ.”  – ರಮೇಶ್‌, ಹಾಸನ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next