ದೇವನಹಳ್ಳಿ: ಜಿಲ್ಲಾ ರಾಜಕಾರಣದಲ್ಲಿ ನಡೆದ ದಿಢೀರ್ ಬೆಳವಣಿಗೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಪಂ ನೂತನ ಅಧ್ಯಕ್ಷರಾಗಿ ಸೂಲಿಬೆಲೆ ಕ್ಷೇತ್ರದ ಸದಸ್ಯ ವಿ.ಪ್ರಸಾದ್ ಅವಿರೋಧವಾಗಿ ಆಯ್ಕೆಯಾದರು.
ಜಿಪಂನ 21 ಸದಸ್ಯ ಬಲದಲ್ಲಿ ಕಾಂಗ್ರೆಸ್ 13, ಜೆಡಿಎಸ್ 5, ಬಿಜೆಪಿ 3 ಸ್ಥಾನ ಹೊಂದಿದೆ. ಜಿಪಂ ಅಧ್ಯಕ್ಷರಾಗಿದ್ದ ಜಯಮ್ಮ ಲಕ್ಷ್ಮೀ ನಾರಾಯಣ್ ವಿರುದ್ಧ 17 ಸದಸ್ಯರು ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡಿಸಿದ್ದರು. ಗೊತ್ತುವಳಿ ನಿರ್ಣಯಕ್ಕೂ ಮೊದಲೇ ಜಯಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿಗೆ ಸೇರ್ಪಡೆಗೊಂಡರು.
ಕೆಲವರು ಪಕ್ಷಾಂತರ: ಕಾಂಗ್ರೆಸ್‌ನಿಂದ ಗೆದ್ದಿದ್ದ ನಂದಗುಡಿ ಜಿಪಂ ಕ್ಷೇತ್ರದ ಸದಸ್ಯ ನಾಗ ರಾಜು, ಎಂಟಿಬಿ ನಾಗರಾಜ್ ಅವರ ಜತೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ.ಜಯಮ್ಮ ಸಹ ಕಾಂಗ್ರೆಸ್‌ನಲ್ಲಿ ಗೆದ್ದು, ಈಗ ಬಿಜೆಪಿ ಸೇರಿದ್ದಾರೆ. ಹೊಸಕೋಟೆ ತಾಲೂಕಿನ ಜಿಪಂ ಸದಸ್ಯರಾದ ಕೃಷ್ಣಮೂರ್ತಿ, ಜಯಕುಮಾರಿ ಬಿಜೆಪಿಯಿಂದ ಗೆದ್ದು, ಈಗ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಜತೆ ಗುರುತಿಸಿಕೊಂಡಿದ್ದಾರೆ.
ಕಾಂಗ್ರೆಸ್‌ನ 11, ಜೆಡಿಎಸ್‌ನ 5, ಶರತ್ ಬಚ್ಚೇಗೌಡ ಜತೆ ಗುರ್ತಿಸಿಕೊಂಡಿರುವ ಇಬ್ಬರು ಸೇರಿ 17 ಸದಸ್ಯರು ವಿ.ಪ್ರಸಾದ್ ಅವರ ಪರ ಸಹಿ ಹಾಕುವುದರ ಮೂಲಕ ಬೆಂಬಲ ಸೂಚಿಸಿದರು. ಜಿಪಂ ಸದಸ್ಯರಾದ ಚನ್ನಸಂದ್ರ ಸಿ.ನಾಗರಾಜು, ಜಯಮ್ಮ, ನಂಜುಂಡಪ್ಪ, ಜೆಡಿಎಸ್‌ನ ಸದಸ್ಯೆಪುಷ್ಪ ಸಂಪತ್ ಗೈರು ಹಾಜರಿಯಾಗಿದ್ದರು.ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿಅಧ್ಯಕ್ಷ ಸ್ಥಾನಕ್ಕೆ ವಿ.ಪ್ರಸಾದ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಯಾರು ಸಹ ನಾಮಪತ್ರ ಸಲ್ಲಿಸದ ಕಾರಣ ವಿ.ಪ್ರಸಾದ್ ಅವರನ್ನು ನೂತನ ಅಧ್ಯಕ್ಷರಾಗಿ ಅವಿರೋಧವಾಗಿಆಯ್ಕೆಗೊಂಡಿದ್ದಾರೆಎಂದು ಚುನಾವಣಾಧಿಕಾರಿ ಹಾಗೂ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್ ಘೋಷಿಸಿದರು.
ಅಲ್ಪಾವಧಿಯಲ್ಲೇ ಅಭಿವೃದ್ಧಿಗೆ ಶ್ರಮ: ನೂತನ ಅಧ್ಯಕ್ಷ ವಿ.ಪ್ರಸಾದ್ ಮಾತನಾಡಿ, ಸ್ಪಷ್ಟ ಬಹುಮತ ಹಾಗೂ ಸದಸ್ಯರ ಬೆಂಬಲ ಇದ್ದಿದ್ದರಿಂದ ಎರಡನೇ ಬಾರಿಗೆ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಅಲ್ಪಾವಧಿಯಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತೇನೆ. ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಾಗುತ್ತದೆ. ಜಿಲ್ಲೆಯಲ್ಲಿ ಜನಾರೋಗ್ಯ, ಶಿಕ್ಷಣ, ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಇರುವ ಕಡಿಮೆ ಅವಧಿಯಲ್ಲಿ ವೇಗ ಹೆಚ್ಚಿಸಲು ಶಕ್ತಿ ಮೀತಿ ಪ್ರಯತ್ನಿಸಲಾಗುತ್ತದೆ ಎಂದು ಹೇಳಿದರು.
ಬೆಂಬಲಿಸಿದವರಿಗೆ ಚಿರಋಣಿ: ಜಿಲ್ಲೆಯ ಆಡಳಿತಯಂತ್ರವನ್ನು ಚುರುಕುಗೊಳಿಸಲಾಗುವುದು. ಜಿಲ್ಲೆಯ ಅಭಿವೃದ್ಧಿ ಕುಂಠಿತ ವಾಗಿರುವುದನ್ನು ತ್ವರಿತವಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಕೋವಿಡ್ ಗೆ ಔಷಧಿ ಬಂದಿಲ್ಲ. ಅದನ್ನು ತಡೆ ಗಟ್ಟಲು ಇರುವಂತಹ ಮಾರ್ಗೋಪಾಯಗಳಪಾಲಿಸುವಂತೆ ಎಲ್ಲಾ ರೀತಿಯಲ್ಲಿ ಸಹಕಾರನೀಡಲಾಗುತ್ತದೆ. ನನ್ನನ್ನು ಬೆಂಬಲಿಸಿ, ಅಧ್ಯಕ್ಷರನ್ನಾಗಿ ಮಾಡಿದ ಎಲ್ಲರಿಗೂ ಚಿರಋಣಿಯಾಗಿರುತ್ತೇನೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪಕ್ಷದ ಶಾಸಕರು, ಮುಖಂಡರು, ಕಾರ್ಯಕರ್ತರು ಮತ್ತೆ ಅಧ್ಯಕ್ಷರಾಗಲು ಸಹಕಾರ ನೀಡಿದ್ದರಿಂದ ಅವರನ್ನು ಅಭಿನಂದಿಸುತ್ತೇನೆ ಎಂದರು.ಶಾಸಕರಾದ ಕೃಷ್ಣಬೈರೇಗೌಡ, ವೆಂಕಟರಮಣಯ್ಯ, ಬೈರತಿ ಸುರೇಶ್, ಶರತ್ ಬಚ್ಚೇಗೌಡ, ಮಾಜಿ ಶಾಸಕ ಮುನಿನರಸಿಂಹಯ್ಯ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಶಾಮಪ್ಪ, ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀ ನಾರಾಯಣ್, ಕೈಗಾರಿಕೆ ಮತ್ತು ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷೆ ಕನ್ಯಾಕುಮಾರಿ ಇದ್ದರು.