ಮಡಿಕೇರಿ: ಕಳೆದ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮಡಿಕೇರಿಯ ನೂತನ ಖಾಸಗಿ ಬಸ್ ನಿಲ್ದಾಣದ ನಿರ್ಮಾಣ ಕಾರ್ಯಕ್ಕೆ ಕೊನೆಗೂ ಚಾಲನೆ ದೊರಕಿದೆ. ಮುಂದಿನ ಒಂದು ವರ್ಷದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಜನರ ಸೇವೆಗೆ ಲಭ್ಯವಾಗಲಿದೆ.
ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕೃಷಿ ಸಂಶೋಧನಾ ಕೇಂದ್ರದಿಂದ ನಗರಸಭೆಗೆ ಹಸ್ತಾಂತರಗೊಂಡಿರುವ ಸುಮಾರು 3 ಎಕರೆ ಪ್ರದೇಶದಲ್ಲಿ ಬಸ್ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕಳೆದ 15 ವರ್ಷಗಳಿಂದ ಯೋಜನೆಯ ಬಗ್ಗೆ ಪ್ರಸ್ತಾವಗಳು ನಡೆಯುತ್ತಿತ್ತಾದರೂ ಅನೇಕ ಅಡ್ಡಿ-ಆತಂಕಗಳು ಎದುರಾಗಿ ಕಾಮಗಾರಿ ಆರಂಭಗೊಂಡಿರಲಿಲ್ಲ. ಯೋಜನೆಯ ಅನುಷ್ಠಾನ ಕ್ಕಾಗಿ ಮುಖ್ಯಮಂತ್ರಿಯಾದಿಯಾಗಿ ಅನೇಕರು ಶಂಕು ಸ್ಥಾಪನೆ ನೆರವೇರಿಸಿದ್ದರು.
ಆದರೆ, ಯೋಜನೆಗೆ ಅಂತಿಮ ರೂಪ ದೊರಕದೆ ಮತ್ತು ನಗರಸಭೆಯಲ್ಲಿ ಒಮ್ಮತದ ಅಭಿಪ್ರಾಯ ಮೂಡದೆ ಯೋಜನೆ ಅನುಷ್ಠಾನ ತಡವಾಗಿದೆ.
ಸುಮಾರು 4.99 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ಇ-ಟೆಂಡರ್ ಮೂಲಕ ಗುತ್ತಿಗೆ ನೀಡಲಾಗಿದ್ದು, ಜಿಲ್ಲಾಧಿಕಾರಿ ಅನುಮತಿಯೊಂದಿಗೆ ತಡವಾಗಿಯಾದರು ಕಾಮಗಾರಿ ಆರಂಭಗೊಂಡಿದೆ. ನಗರದ ಹೃದಯ ಭಾಗದಲ್ಲಿ ಕಿಷ್ಕಿಂಧೆಯಾಗಿದ್ದ ಖಾಸಗಿ ಬಸ್ ನಿಲ್ದಾಣಕ್ಕೆ ಇನ್ನೊಂದು ವರ್ಷದಲ್ಲಿ ಮುಕ್ತಿ ದೊರಕಲಿದ್ದು, ರೇಸ್ ಕೋರ್ಸ್ ರಸ್ತೆಯಲ್ಲಿ ಖಾಸಗಿ ಬಸ್‌ಗಳ ಸಂಚಾರ ಆರಂಭಗೊಳ್ಳಲಿದೆ. ಬಸ್ ನಿಲ್ದಾಣಕ್ಕಾಗಿ 3 ಎಕರೆ ಜಾಗ ಮಂಜೂರಾಗಿದ್ದರು ಪ್ರಥಮ ಹಂತದಲ್ಲಿ 1.50 ಎಕರೆ ಜಾಗದಲ್ಲಿ ಬಸ್ ನಿಲ್ದಾಣ ನಿರ್ಮಾಣಗೊಳ್ಳಲಿದೆ. ಮಧ್ಯಬಾಗದಲ್ಲಿ ತಂಗುದಾಣ ಮತ್ತು ಎರಡೂ ಬದಿಗಳಲ್ಲಿ ತಲಾ 9 ರಂತೆ ಒಟ್ಟು 18 ಬಸ್‌ಗಳು ಏಕಕಾಲದಲ್ಲಿ ನಿಲುಗಡೆ ಗೊಳ್ಳಬಹುದಾಗಿದೆ.
ವಾಣಿಜ್ಯ ಮಳಿಗೆಗಳು ಸೇರಿದಂತೆ ಪ್ರಯಾಣಿಕರ ಅನುಕೂಲಕ್ಕಾಗಿ ಮೂಲ ಸೌಕರ್ಯಗಳಿರುತ್ತವೆ. ಬೆಂಗಳೂರಿನ ಬಸಂತ್ ಕನ್ಸಲ್ಟೆನ್ಸಿ ನಕಾಶೆ ತಯಾರಿಸಿದ್ದು, ಮೈಸೂರಿನ ನಾಗರಾಜು ಎಂಬವವರು ಗುತ್ತಿಗೆ ಪಡೆದಿದ್ದಾರೆ. ಈ ಹಿಂದೆ ಉದ್ದೇಶಿತ ಜಾಗದಲ್ಲಿ ರಾಶಿ ಹಾಕಲಾಗಿದ್ದ ಮಣ್ಣನ್ನು ಇದೀಗ ತೆರವುಗೊಳಿಸಿ ಸಮತಟ್ಟು ಮಾಡಲಾಗಿದೆ.
ಬಸ್ ನಿಲ್ದಾಣ ನಿರ್ಮಾಣಗೊಂಡು ಬಸ್‌ಗಳ ಓಡಾಟಕ್ಕೆ ಚಾಲನೆ ದೊರಕಿದ ಅನಂತರ ರೇಸ್‌ಕೋರ್ಸ್ ರಸ್ತೆ ಮತ್ತು ರಾಜಾಸೀಟು ರಸ್ತೆಗಳನ್ನು ವಿಸ್ತರಿಸುವ ಸಾಧ್ಯತೆಗಳಿವೆ.
ಖಾಸಗಿ ಬಸ್ ಮಾಲಕರಿಗೆ ಉದ್ದೇಶಿತ ಯೋಜನೆಯ ಪ್ರದೇಶ ಇಷ್ಟವಿಲ್ಲದಿದ್ದರೂ ಅನಿವಾ ರ್ಯವಾಗಿ ನಗರದ ಜನರ ಅಪೇಕ್ಷೆಯಂತೆ ಖಾಸಗಿ ಬಸ್ ನಿಲ್ದಾಣದ ಕಾಮಗಾರಿ ನಡೆಯಲೇ ಬೇಕಾಗಿರವುದರಿಂದ ಈ ಯೋಜನೆಯನ್ನು ಬಸ್ ಮಾಲಕರು ಒಪ್ಪಿಕೊಳ್ಳಲೇಬೇಕಾಗಿದೆ.