ಬೆಂಗಳೂರು: ಡೀಸೆಲ್ ಬಳಕೆಯ ಜನರೇಟರ್‌ಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನೈಸರ್ಗಿಕ ಅನಿಲ ಬಳಕೆಯನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಹೊಸ ನೀತಿಯೊಂದನ್ನು ರೂಪಿಸುವ ಅಗತ್ಯವಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಸಲಹೆ ನೀಡಿದ್ದಾರೆ.
ಎಚ್‌ಎಸ್‌ಆರ್ ಬಡವಾಣೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ಮನೆ ಮನೆಗೆ ಅಡುಗೆ ಅನಿಲ’ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, “ಬೆಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ. ಪರಿಸರ ಸಂರಕ್ಷಣೆಯ ಜತೆಗೆ ನೈಸರ್ಗಿಕ ಅನಿಲ ಬಳಕೆಗೆ ಉತ್ತೇಜನ ನೀಡಬೇಕಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಹೊಸ ನೀತಿ ರೂಪಿಸಿ, ಅನುಷ್ಠಾನ ಮಾಡಬೇಕು,’ ಎಂದರು.
ದೇಶಾದ್ಯಂತ ಅಡುಗೆ ಹೊಗೆ ಸೇವಿಸಿ ಸಾವಿರಾರು ಮಹಿಳೆಯರು ಮೃತಪಡುತ್ತಿದ್ದಾರೆ. ಪೈಪ್‌ಲೈನ್ ಮೂಲಕ ಮನೆ ಮನೆಗೆ ಅಡುಗೆ ಅನಿಲ ಪೂರೈಕೆ ಮಾಡುವುದರಿಂದ ಎಲ್ಲಾ ರೀತಿಯ ಉಳಿತಾಯ ಹಾಗೂ ಹಸಿರು ಪರಿಸರ ನಿರ್ಮಾಣ ಸಾಧ್ಯವಾಗಲಿದೆ. ಕಂಪೆನಿಗಳು ಕೂಡ ಇದನ್ನು ಬಳಸಿಕೊಳ್ಳಬಹುದು. ಇದರಿಂದ ಯಾವುದೇ ತೈಲ ಕಂಪೆನಿಗಳಿಗೂ ಸಮಸ್ಯೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸಚಿವ ಅನಂತ್ ಕುಮಾರ್ ಮಾತನಾಡಿ, ಬೆಂಗಳೂರಿನಲ್ಲಿ 60 ಸಿಎನ್‌ಜಿ ಕೇಂದ್ರ ಆರಂಭವಾಗಲಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ಬಸ್‌ಗಳಿಗೂ ಸಿಎನ್‌ಜಿ ಮೂಲಕ ಅನಿಲ ಪೂರೈಕೆ ಮಾಡುವಂತಾಗಬೇಕು. ಪ್ರಾಯೋಗಿಕವಾಗಿ ಬಿಎಂಟಿಸಿ ಬಸ್‌ಗಳಿಗೆ ಇದನ್ನು ಅಳವಡಿಸಬೇಕು. ಆನಂತರ ಕೆಎಸ್‌ಆರ್‌ಟಿಸಿ ಎಲ್ಲಾ ಬಸ್, ಸಾರ್ವಜನಿಕರ ಟೆಂಪೋ, ಕಾರಿಗೂ ಇದೇ ಅನಿಲ ಬಳಸುವಂತಾಗಬೇಕು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.
ಹಸಿರು ಅನಿಲ ಬೆಂಗಳೂರಿಗೆ ಬಂದಿದೆ. ಪೆಟ್ರೋಲ್ ಮತ್ತು ಡಿಸೇಲ್ ಬಳಕೆ ಕಡಿಮೆ ಮಾಡಿ ಸಿಎನ್‌ಜಿ ಅನಿಲ ಬಳಸುವಂತೆ ಮಾಡಬೇಕು. ಕರ್ನಾಟಕಕ್ಕೆ ಎಷ್ಟು ಸಿಎನ್‌ಜಿ ಎಷ್ಟಿ ಬೇಕೋ ಅಷ್ಟನ್ನು ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ. ಇದರಿಂದ ಬೆಂಗಳೂರಿನ ವಾತಾವಣವನ್ನು ಮತ್ತೆ ಸಹಜ ಸ್ಥಿತಿಗೆ ತರಲು ಸಾಧ್ಯವಿದೆ ಎಂದು ಹೇಳಿದರು.
ಕೇಂದ್ರ ಯೋಜನೆ ಅನುಷ್ಠಾನ ಹಾಗೂ ಸಾಂಖೀಕ ಸಚಿವ ಡಿ.ವಿ. ಸದಾನಂದ ಗೌಡ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಟಿಯಾ, ಸಂಸದ ಪಿ.ಸಿ.ಮೋಹನ್, ರಾಜ್ಯ ಸಭಾ ಸದಸ್ಯ ಡಿ.ಕುಪೇಂದ್ರ ರೆಡ್ಡಿ, ಶಾಸಕ ಎಂ.ಸತೀಶ್ ರೆಡ್ಡಿ, ಗೇಲ್ (ಗ್ಯಾಸ್ ಇಂಡಿಯಾ ಸಂಸ್ಥೆ) ಅಧ್ಯಕ್ಷ ಬಿ.ಸಿ. ತ್ರಿಪಾಠಿ ಉಪಸ್ಥಿತರಿದ್ದರು.
ಗ್ಯಾಸ್ ಸಿಲಿಂಡರ್‌ಗಿಂತ ಪೈಪ್‌ಲೈನ್ ಅಡುಗೆ ಅನಿಲ ಪೂರೈಕೆ ಹೆಚ್ಚು ಸುರಕ್ಷಿತವಾಗಿದೆ. ಆಗಾಗ ಸಿಲಿಂಡರ್ ಬದಲಾಯಿಸಬೇಕೆಂದೇನು ಇಲ್ಲ. ಹಳೇ ವಿಧಾನಕ್ಕಿಂತ ಇದು ತುಂಬಾ ಚೆನ್ನಾಗಿದೆ ಮತ್ತು ಪರಿಸರ ಸ್ನೇಹಿಯಾಗಿದೆ
-ಜಯಮ್ಮರೆಡ್ಡಿ, ಪೈಪ್‌ಲೈನ್ ಅಡುಗೆ ಅನಿಲ ಸೇವೆ ಪಡೆದ ಗೃಹಿಣಿ