Advertisement
ಬೆರಳುಗಳ ಸೌಂದರ್ಯ ಹೆಚ್ಚಿಸುವಲ್ಲಿ ಉಗುರು ಪ್ರಮುಖ ಪಾತ್ರವಹಿಸುತ್ತವೆ. ಅದರಲ್ಲೂ ಹೆಣ್ಣು ಮಕ್ಕಳು ತಮ್ಮ ಉಗುರುಗಳಿಗೆ ಆಕರ್ಷಕ ಬಣ್ಣಗಳನ್ನು ಹಚ್ಚಿಕೊಂಡು ತಮ್ಮ ಸೌಂದರ್ಯವನ್ನು ಉಗುರುಗಳಿಂದ ಮತ್ತಷ್ಟು ಮೆರುಗುಗೊಳಿಸಿಕೊಳ್ಳುತ್ತಾರೆ. ಆದರೆ ಉಗುರುಗಳ ಮಹತ್ವ ಕೇವಲ ಅಲಂಕಾರಕ್ಕೆ ಸೀಮಿತವಾಗುವುದಿಲ್ಲ. ಪ್ರಾಚೀನ ಕಾಲದ ಮಾನವ ಉಗುರುಗಳನ್ನು ಆಯುಧವಾಗಿ ಬಳಸಿಕೊಳ್ಳುತ್ತಿದ್ದ. ಅಷ್ಟು ಮಾತ್ರವಲ್ಲ, ಮರ ಏರಲು, ವಸ್ತುಗಳನ್ನು ಹಿಡಿದುಕೊಳ್ಳಲು ಉಗುರುಗಳು ಸಹಕರಿಸುತ್ತಿದ್ದವು. ಆ ಕಾಲಘಟ್ಟದಿಂದ ಮಾವನ ಬಹಳ ದೂರ ಸಾಗಿ ಬಂದಿದ್ದಾನೆ.
ಉಗುರುಗಳು ಕೆರಾಟಿನ್ ಎಂಬ ವಸ್ತುವಿನಿಂದ ರೂಪಿಸಲ್ಪಟ್ಟಿದೆ. ಅದೇ ಕೆರಾಟಿನ್‌ನಿಂದ ನಮ್ಮ ಕೂದಲು ಕೂಡಾ ರೂಪಿಸಲ್ಪಟ್ಟಿದೆ. ಕೆರಾಟಿನ್ ಎನ್ನುವುದು ಜೀವರಹಿತವಾದ ವಸ್ತು ಎಂದು ಪರಿಗಣಿಸಲ್ಪಟ್ಟಿದೆ. ಆದರೆ, ಇವು ಶುರುವಿನಲ್ಲಿ ಜೀವವುಳ್ಳ ಕೋಶಗಳೇ ಆಗಿರುತ್ತವೆ. ಈ ಕೋಶಗಳೇ ಅಗತ್ಯ ಪೋಷಕಾಂಶಗಳನ್ನು ಪಡೆದುಕೊಂಡು ಮುಂದೆ ಉಗುರುಗಳಾಗಿ ಮಾರ್ಪಾಡಾಗುತ್ತವೆ. ಇವುಗಳು ನರಮಂಡಲದೊಂದಿಗೆ ಸಂಪರ್ಕ ಹೊಂದಿರುತ್ತವೆ. ಅದರಿಂದಲೇ ಉಗುರು ತನ್ನ ಬೆಳವಣಿಗೆಗೆ ಬೇಕಾದ ಪೋಷಕಾಂಶಗಳನ್ನು ಪಡೆದುಕೊಳ್ಳುವುದು. ಅಂದ ಹಾಗೆ ಉಗುರು ಬೆಳೆಯಲು ಬೇಕಾದ ಅಗತ್ಯ ಪೋಷಕಾಂಶ ಎಂದರೆ ಗ್ಲುಕೋಸ್. ದಿನಕ್ಕೆ 0.1 ಮಿಲಿಮೀಟರ್‌ನಷ್ಟು ಬೆಳೆವುದಂತೆ.
Related Articles
ನಮ್ಮಲ್ಲಿ ಅದೊಂದು ನಂಬಿಕೆ ಇದೆ. ಸತ್ತ ನಂತರವೂ ಉಗುರು ಬೆಳೆಯುತ್ತದೆ ಎಂದು. ಆದರೆ, ಅದು ಸುಳ್ಳು ಎಂದು ಸಂಶೋಧಕರು ದೃಢಪಡಿಸಿದ್ದಾರೆ. ಭೂಮಿಯಲ್ಲಿ ಹೂತು ಹಾಕಿದ್ದ ದೇಹದ ಉಗುರುಗಳು ನೀಳವಾಗಿರುವಂತೆ ಕಂಡದ್ದರಿಂದಲೇ ಉಗುರು ಬೆಳೆಯುತ್ತೆ ಎಂಬ ಪುಕಾರು ಹರಡಿತ್ತು. ಆದರೆ ವಸ್ತುಸ್ಥಿತಿಯೇ ಬೇರೆ. ಮೃತ ದೇಹ ದಿನ ಕಳೆದಂತೆ ಕೃಶವಾಗುತ್ತಾ, ಚಪ್ಪಟೆಯಾಗುತ್ತಾ ಹೋಗುತ್ತದೆ. ಆಗ ಚರ್ಮದ ಅಡಿ ಸೇರಿ ಹೋಗಿದ್ದ ಉಗುರಿನ ಭಾಗ ಹೊರಗೆ ಕಾಣಲು ಶುರುವಾಗುತ್ತದೆ. ಇದರಿಂದಾಗಿ ಉಗುರು ಬೆಳೆಯುತ್ತಿರುವಂತೆ ತೋರುತ್ತದೆ. ಅಲ್ಲದೆ ಅದರ ಬೆಳವಣಿಗೆಗೆ ಬೇಕಾದ ಪೋಷಕಾಂಶ ಸತ್ತ ನಂತರ ಸಿಗದಿರುವುದರಿಂದ ಉಗುರು ಬೆಳೆಯಲು ಸಾಧ್ಯವೇ ಇಲ್ಲ ಎಂದು ತಜ್ಞರು ಖಡಾಖಂಡಿತವಾಗಿ ಹೇಳುತ್ತಾರೆ.
Advertisement
– ಯೋಗೇಶ್ ಎಂ. ಜಿ.