Advertisement

ವಿನೂತನ ಸಂಗೀತ ಕಛೇರಿ

12:30 AM Mar 01, 2019 | |

 ಸುನಾದ ಸಂಗೀತ ಕಲಾ ಶಾಲೆ ಸುಳ್ಯದಲ್ಲಿ ಆಯೋಜಿಸಿದ ಸುನಾದ ಸಂಗೀತೋತ್ಸವದಲ್ಲಿ ವಿ| ಮಹಾದೇವನ್‌ ಶಂಕರನಾರಾಯಣನ್‌ ಚೆನ್ನೈ ಅವರು ನಡೆಸಿಕೊಟ್ಟ ಕಛೇರಿ ಶ್ರೋತೃಗಳನ್ನು ಸಂಗೀತ ಲೋಕದಲ್ಲಿ ವಿಹರಿಸುವಂತೆ ಮಾಡಿತು. 

Advertisement

ಮೊದಲಿಗೆ ಹಂಸಧ್ವನಿ ರಾಗದ ಆಲಾಪನೆಯೊಂದಿಗೆ ಇಂದಿರಾ ನಟೇಶನ್‌ ವಿರಚಿತ ಮಹಾಗಣಪತೇ ನಮೋ ನಮೋ ಕೃತಿಯನ್ನು ಎತ್ತಿಕೊಂಡು ಮೋಹಕವಾದ ಕಲ್ಪನಾ ಸ್ವರಗಳೊಂದಿಗೆ ನಿರೂಪಿಸಿ ಚಾಲನೆ ನೀಡಿದರು. ಮುಂದೆ ಶುದ್ಧ ಬಂಗಾಳ ರಾಗದ ರಾಮಭಕ್ತಿ ಸಾಮ್ರಾಜ್ಯಂ ತ್ಯಾಗರಾಜರ ಕೀರ್ತನೆಯನ್ನು ಪ್ರಸ್ತುತಪಡಿಸಿ ಪ್ರಬುದ್ಧತೆಯನ್ನು ಪರಿಚಯಿಸಿದರು. ಬಳಿಕ ಸಾವೇರಿ ರಾಗದ ಬಾರಯ್ನಾ ವೆಂಕಟರಮಣ ಭಕ್ತರ ನಿಧಿಯೇ ಮತ್ತು ಶ್ರೀರಂಜನಿ ರಾಗದ ಆಲಾಪನೆಯೊಂದಿಗೆ ಪಾಲಿಸೆಮ್ಮ ಮುದ್ದು ಶಾರದೆ ಪುರಂದರ ದಾಸರ ಪದಗಳನ್ನು ಹಾಡಿದರು. ಮುಂದೆ ಕಲ್ಯಾಣಿ ರಾಗದ ದೀರ್ಘ‌ ಆಲಾಪನೆಯೊಂದಿಗೆ ವೀಣೆ ಶೇಷಣ್ಣ ವಿರಚಿತ ಶಾರದೆ ವರದೇ ಸಾರಿದೆ ಬರಿದೇ ವಿಸ್ತಾರವಾದ ಸ್ವರ ಪ್ರಸ್ತಾರದೊಡನೆ ಮೂಡಿ ಬಂತು. ಭೈರವಿ ರಾಗದ ಆಲಾಪನೆಯೊಂದಿಗೆ ಓಡಿ ಬಾರಯ್ಯ ವೈಕುಂಠ ಪತಿ ದೇವರ ನಾಮವನ್ನು ಹಾಡಿದರು. ನಂತರ ಶಹನ ರಾಗದಲ್ಲಿ ವೆಂಕಟೇಶ ದಯಮಾಡೊ ಮೂಡಿ ಬಂತು. ಆ ಬಳಿಕ ಷಣ್ಮಖ ಪ್ರಿಯ ರಾಗದ ಭಾವ ಪ್ರಧಾನ ಆಲಾಪನೆಯೊಂದಿಗೆ ಮರಿವೇರೆ ದಿಕ್ಕೆವರಯ್ನಾ ರಾಮ ಕೃತಿಯನ್ನು ನೆರವಲ್‌ ಮತ್ತು ಸ್ವರ ಪ್ರಸ್ತಾರದೊಂದಿಗೆ ಹೃದ್ಯವಾಗಿ ನಿರೂಪಿಸಿದರು. 

ಕಾಂಭೋಜಿ ರಾಗವನ್ನು ಪ್ರಧಾನವಾಗಿ  ಆಯ್ದುಕೊಂಡು ಮುತ್ತುಸ್ವಾಮಿ ದೀಕ್ಷಿತರ ರಚನೆ ಮರಕತ ವಲ್ಲೀಂ ಮನಸಾ ಸ್ಮರಾಮಿ ಕೃತಿಯನ್ನು ಆಲಾಪನೆ ,ನೆರವಲ್‌ ಮತ್ತು ವಿಸ್ತಾರವಾದ ಕಲ್ಪನಾ ಸ್ವರಗುತ್ಛಗಳಿಂದ ಪೂರ್ಣಪ್ರಮಾಣದಲ್ಲಿ ಶೃಂಗರಿಸಿ, ರಾಗದ ವಿವಿಧ ಮಜಲುಗಳನ್ನು ರೋಚಕವಾಗಿ ಹಾಡಿ ಮನಸೆಳೆದರು. ಪ್ರಮುಖ ಆಕರ್ಷಣೆಯಾಗಿ ರಾಗಮಾಲಿಕೆ- ರಾಗಂ ತಾನಂ ಪಲ್ಲವಿಯನ್ನು ಬೃಂದಾವನ ಸಾರಂಗ ರಾಗದಲ್ಲಿ ರಾಗಾಲಾಪನೆ, ತಾನಂ, ನೆರವಲ…, ಕಲ್ಪನಾ ಸ್ವರಗಳೊಂದಿಗೆ ವಿಸ್ತರಿಸಿ,ನಂತರ ಬೇಹಾಗ್‌ ಮತ್ತು ಸಿಂಧು ಭೈರವಿ ರಾಗಗಳಲ್ಲಿ ಪ್ರಸ್ತುತ ಪಡಿಸಿದ ಕಲಾವಿದರು ಉನ್ನತವಾದ ಸ್ವರ ಗುತ್ಛಗಳನ್ನು ಹೊಮ್ಮಿಸಿ ಅನುಪಮ ಮನೋಧರ್ಮದ ಶ್ರೇಷ್ಠತೆಯನ್ನು ಪರಿಚಯಿಸಿದ್ದು ಆಹ್ಲಾದಕರವಾಗಿತ್ತು. ಪೂರಕವಾದ ಮೃದಂಗವಾದನ , ವಯೊಲಿನ್‌ ಹಾಗೂ ಘಟಂ ಸೃಜನಾತ್ಮಕ ಸಂಗೀತದಲೆಗಳನ್ನು ಸೃಷ್ಟಿಸಿತು. ಬಳಿಕ ತಮ್ಮ ಸ್ವರಚಿತ ಎಳಿಮಯಿನ್‌ ವಡಿಮಮೆ ಎಂಬ ಕೃತಿಯನ್ನು ಸ್ವಯಂ ಸಂಯೋಜಿಸಿ ಜೋಗ್‌ ರಾಗದಲ್ಲಿ ಹಾಡುವ ಮೂಲಕ ಪ್ರತಿಭೆಯನ್ನು ಅಭಿವ್ಯಕ್ತಿಗೊಳಿಸಿದ್ದು ಗಮನಾರ್ಹವೆನ್ನಿಸಿತು. 

ನಂತರ ಎಪ್ಪೊ ವರುವಾರೋ- ಶೇಂಜುರುಟ್ಟಿ / ಜೋನ್‌ ಪುರಿ ರಾಗದಲ್ಲಿ ಭಾವಪೂರ್ಣವಾಗಿ ಹಾಡಿದ್ದು ರೋಮಾಂಚಕಾರಿಯಾಗಿತ್ತು. ಬಳಿಕ ವೆಸ್ಟರ್ನ್ ನೋಟ್‌-ನೋಟುಸ್ವರಗಳನ್ನು ಗಳನ್ನು ಶಂಕರಾಭರಣ ರಾಗದಲ್ಲಿ ತ್ವರಿತ ಗತಿಯಲ್ಲಿ ಹಾಡಿದ್ದು ವೈಶಿಷ್ಟ್ಯಪೂರ್ಣವಾಗಿತ್ತು. ಕೊನೆಯಲ್ಲಿ ಸೌರಾಷ್ಟ್ರಂ ರಾಗದಲ್ಲಿ ಪವಮಾನ ಮಂಗಳಮ್‌ ಕೃತಿಯೊಂದಿಗೆ ಸ್ಪೂರ್ತಿದಾಯಕ ಕಛೇರಿ ಸಂಪನ್ನಗೊಂಡಿತು. 
 
ಮಮತಾ ದೇವ 

Advertisement

Udayavani is now on Telegram. Click here to join our channel and stay updated with the latest news.

Next