ವೆಲ್ಲಿಂಗ್ಟನ್: ಪ್ರಸ್ತುತ ನ್ಯೂಜಿಲೆಂಡ್ 50 ಲಕ್ಷ ಜನಸಂಖ್ಯೆ ಹೊಂದಿರುವ ಒಂದು ಪುಟ್ಟ ದ್ವೀಪರಾಷ್ಟ್ರ. ಆದರೆ 85 ಮಿಲಿಯನ್ ವರ್ಷಗಳ ಹಿಂದೆ ಅದು ಕೂಡ ದೊಡ್ಡ ಖಂಡವಾಗಿತ್ತು. ಆದರೆ, ಆಗ ಜಿಲ್ಯಾಂಡಿಯಾ ಎಂದು ಕರೆಸಿಕೊಳ್ಳುತ್ತಿದ್ದ ಪ್ರದೇಶದ ದೊಡ್ಡ ಪ್ರಮಾಣದ ಭೂಭಾಗ ಸಮುದ್ರದ ನೀರಿನಲ್ಲಿ ಮುಳುಗಿ ಹೋಗಿ, ಈಗ ನ್ಯೂಜಿಲೆಂಡ್ ಇರುವಷ್ಟು ಭೂಖಂಡ ಮಾತ್ರ ಉಳಿದುಕೊಂಡಿದೆ. ಈ ಅಂಶವನ್ನು ಸಾಬೀತು ಪಡಿಸುವ ಎರಡು ನಕ್ಷೆಗಳನ್ನು ಹಾಗೂ ಇಂಟರ್ಯಾಕ್ಟಿವ್ ವೆಬ್‌ಸೈಟ್ ಒಂದನ್ನು ಆ ದೇಶದ ಸಂಶೋಧನಾ ಸಂಸ್ಥೆ, ಜಿಎನ್‌ಎಸ್ ಸೈನ್ಸ್ ಬಿಡುಗಡೆ ಮಾಡಿದೆ. ನಕ್ಷೆಗಳು ಸಾಗರ ತಳದ ಆಕಾರ ಮತ್ತು ಜಿಲ್ಯಾಂಡಿಯಾದ ಟೆಕ್ಟಾನಿಕ್ ರೇಖಾ ಕೃತಿಯನ್ನು ಒಳಗೊಂಡಿದ್ದು, ಅವುಗಳು ಮೂಲ ದೇಶದ ಕತೆ ಹೇಳುತ್ತವೆ. ಜೊತೆಗೆ ನೀರಿನಲ್ಲಿ ಮುಳುಗಿರುವ ಭೂಭಾಗದಲ್ಲಿ ಹಿಂದೆ ಡೈನೋಸಾರ್‌ಗಳು ಸಹ ಜೀವಿಸುತ್ತಿದ್ದವು ಎಂಬ ಅಂಶದ ಮೇಲೆ ಹೊಸ ನಕ್ಷೆಗಳು ಬೆಳಕು ಚೆಲ್ಲುತ್ತವೆ. ಡೈನೋ ಸಾರ್‌ಗಳ ಚಲನವಲನಗಳ ವರ್ಚುವಲ್ ಅನುಭೂತಿ ಪಡೆಯಬಹುದಾಗಿದೆ.