ದೇಶದಲ್ಲಿ ಜಾರಿಯಲ್ಲಿದ್ದ ಹತ್ತಾರು ರೀತಿಯ ತೆರಿಗೆಗಳು ಸರಕು ಮತ್ತು ಸೇವಾ ತೆರಿಗೆ ಜಾರಿಯಾಗುವುದರೊಂದಿಗೆ ಮರೆಗೆ ಸರಿದಿವೆ. ಒಂದು ದೇಶ-ಒಂದು ತೆರಿಗೆ ಎಂಬ ಧ್ಯೇಯ ಘೋಷದೊಂದಿಗೆ ಜಾರಿಯಾಗಿ ರುವ ಜಿಎಸ್‌ಟಿ ತೆರಿಗೆ ತಾರತಮ್ಯವನ್ನು ನಿವಾರಿಸುವಲ್ಲಿ ಮಹತ್ವದ ಹೆಜ್ಜೆ. ಜಿಎಸ್‌ಟಿಯಡಿಯಲ್ಲೂ ಕೆಲವು ತೆರಿಗೆ ತಾರತಮ್ಯಗಳಿದ್ದರೂ ಕ್ರಮೇಣ ಇವುಗಳು ನಿವಾರಣೆಯಾಗುವ ನಿರೀಕ್ಷೆಯಿದೆ. ಜಿಎಸ್‌ಟಿ ಮತ್ತು ನೋಟು ರದ್ದು ಕ್ರಮಗಳಿಂದಾಗಿ ದೇಶದ ಅರ್ಥ ವ್ಯವಸ್ಥೆಯಲ್ಲಿ ಭಾರೀ ಪ್ರಮಾಣದ ಬದಲಾವಣೆಗಳಾಗಿರುವುದು ಈಗಾಗಲೇ ಅನುಭವಕ್ಕೆ ಬರತೊಡಗಿದೆ. ಕಪ್ಪುಹಣದ ಸೃಷ್ಟಿ ಮತ್ತು ಹರಿವು ಕಡಿಮೆ ಯಾಗಿದೆ ಹಾಗೂ ತೆರಿಗೆ ಪ್ರಾಮಾಣಿಕತೆಯಲ್ಲಿ ಪ್ರಾಮಾಣಿಕತೆ ಬರುತ್ತಿದೆ. ಹೀಗೆ ಸರಕು ಮತ್ತು ಸೇವೆಗಳ ಮೇಲಿನ ತೆರಿಗೆಯ ಜಾರಿಯಿಂದ ಪ್ರಾರಂಭವಾಗಿರುವ ಸುಧಾರಣಾ ಪ್ರಕ್ರಿಯೆಯನ್ನು ಆದಾಯ ತೆರಿಗೆಯತ್ತ ವಿಸ್ತರಿಸುವ ಇರಾದೆ ಸರಕಾರಕ್ಕಿದೆ. ಇದಕ್ಕಾಗಿ ಆದಾಯ ತೆರಿಗೆಗೆ ಸಂಬಂಧಿಸಿ ಹೊಸ ಕಾಯಿದೆ ರಚಿಸುವ ಚಿಂತನಮಂಥನ ನಡೆದಿದೆ.
ಇದರ ಮೊದಲ ಹೆಜ್ಜೆಯಾಗಿ ಈ ಕಾಯಿದೆಯ ಸ್ವರೂಪವನ್ನು ನಿರ್ಧರಿಸುವ ಸಲುವಾಗಿ ಆರು ಮಂದಿ ಸದಸ್ಯರನ್ನು ಹೊಂದಿರುವ ಕಾರ್ಯಪಡೆಯನ್ನು ರಚಿಸಲಾಗಿದೆ. ಕೆಲ ತಿಂಗಳ ಹಿಂದೆಯೇ ಪ್ರಧಾನಿ ನರೇಂದ್ರ ಮೋದಿ ಆದಾಯ ತೆರಿಗೆ ಕಾಯಿದೆ ಬದಲಾವಣೆಯಾಗುವ ಸುಳಿವು ನೀಡಿದ್ದರು. ಸೆಪ್ಟೆಂಬರ್‌ನಲ್ಲಿ ನಡೆದ ಆದಾಯ ತೆರಿಗೆ ಅಧಿಕಾರಿಗಳ ಸಮ್ಮೇಳನದಲ್ಲಿ ಮಾತನಾಡುತ್ತಾ 50 ವರ್ಷ ಹಿಂದಿನ ಕಾಯಿದೆ ಈಗಿನ ಅರ್ಥ ವ್ಯವಸ್ಥೆಗೆ ಸರಿ ಹೊಂದುತ್ತಿಲ್ಲ. ಅರ್ಥ ವ್ಯವಸ್ಥೆ ಸ್ವತ್ಛವಾಗಲು ಈ ಮಾದರಿಯ ಹಳೇ ಕಾಯಿದೆಗಳಿಗೆ ಕಾಯಕಲ್ಪ ನೀಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು. ತನ್ನ ಮಾತನ್ನೀಗ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಮುಂದಡಿಯಿಟ್ಟಿದ್ದಾರೆ.
ಪ್ರಸ್ತುತ ನಾವು ಆದಾಯ ತೆರಿಗೆ ಪಾವತಿಸುತ್ತಿರುವುದು 1961ರಲ್ಲಿ ರಚನೆಯಾಗಿರುವ ಕಾಯಿದೆಯಡಿಯಲ್ಲಿ. ಕಾಲಕಾಲಕ್ಕೆ ಈ ಕಾಯಿದೆಗೆ ಸಾಕಷ್ಟು ತಿದ್ದುಪಡಿಗಳಾಗಿದ್ದರೂ ಮೂಲ ಸ್ವರೂಪ ಮಾತ್ರ ಅದೇ ರೀತಿ ಇದೆ. ದೇಶದ ಅರ್ಥ ವ್ಯವಸ್ಥೆಯ ಗತಿ, ಚಿಂತನೆ ಮತ್ತು ಸ್ವರೂಪ ಈಗ ಬದಲಾಗಿದೆ. ಹೊಸ ರೀತಿಯ ಆದಾಯ ವರ್ಗವೊಂದು ಸೃಷ್ಟಿಯಾಗಿದೆ ಹಾಗೂ ಮಧ್ಯಮ ವರ್ಗದ ಪರಿಕಲ್ಪನೆ ಬದಲಾಗಿದೆ. ಈ ಹೊಸ ಅರ್ಥ ವ್ಯವಸ್ಥೆಗೆ ಹಳೇ ಕಾಯಿದೆ ಸರಿಹೊಂದುತ್ತಿಲ್ಲ ಎನ್ನುವ ದೂರು ಬಹಳ ಸಮಯದಿಂದ ಕೇಳಿ ಬರುತ್ತಿದೆ. ಹಿಂದಿನ ಸರಕಾರಗಳು ಕೂಡ ಆದಾಯ ತೆರಿಗೆ ಕಾಯಿದೆಯನ್ನುಬದಲಾಯಿಸಲು ಪ್ರಯತ್ನಗಳನ್ನು ಮಾಡಿದ್ದರೂ ಅದರಲ್ಲಿ ಯಶಸ್ವಿಯಾಗಿರಲಿಲ್ಲ. ಈಗಿರುವ ಆದಾಯ ತೆರಿಗೆ ಕಾಯಿದೆ ತೆರಿಗೆ ಕಟ್ಟುವುದಕ್ಕಿಂತಲೂ ತೆರಿಗೆ ತಪ್ಪಿಸುವುದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂಬ ಆರೋಪ ಉತ್ಪ್ರೇಕ್ಷಿತವಲ್ಲ.
ಈ ಕಾಯಿದೆ ಎಷ್ಟು ಜಟಿಲವಾಗಿದೆ ಎಂದರೆ ಸಿಎಗಳ ನೆರವಿಲ್ಲದೆ ಇದರ ಒಂದು ವಾಕ್ಯವನ್ನೂ ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗು ವುದಿಲ್ಲ. ಹೀಗಾಗಿ ಜನರು ಆದಾಯ ತೆರಿಗೆ ಕಟ್ಟುವುದಕ್ಕಿಂತ ಕಟ್ಟದೆ ಇರುವುದಕ್ಕೆ ಇರುವ ಮಾರ್ಗಗಳನ್ನು ಹುಡುಕುತ್ತಾರೆ. ಕೃಷಿ ಹೊರತುಪಡಿಸಿ ಮಿಕ್ಕೆಲ್ಲ ಮೂಲಗಳಿಂದ ಬರುವ ಆದಾಯಕ್ಕೆ ತೆರಿಗೆ ಪಾವತಿಸಬೇಕೆನ್ನುವುದು ನಿಯಮ. ಆದರೆ 125 ಕೋಟಿ ಜನರಲ್ಲಿ ಆದಾಯ ತೆರಿಗೆ ಪಾವತಿಸುವವರು ಇರುವುದು ಬರೀ 6.26 ಕೋಟಿ. ಅಂದರೆ ಜನಸಂಖ್ಯೆಯ ಶೇ. 1.5 ಮಂದಿ ಮಾತ್ರ. ಇಷ್ಟು ಮಂದಿಯಾದರೂ ತೆರಿಗೆ ವ್ಯಾಪ್ತಿಗೆ ಬಂದಿರುವುದು ನೋಟು ರದ್ದು ಕ್ರಮದ ಬಳಿಕ. ಇದಕ್ಕೂ ಮೊದಲು ತೆರಿಗೆ ಪಾವತಿಸುವವರ ಸಂಖ್ಯೆ ಬರೀ 4 ಕೋಟಿಯಷ್ಟಿತ್ತು. ಆದರೂ ಆದಾಯ ತೆರಿಗೆ ಸರಕಾರದ ವರಮಾನದ ಮೂರನೇ ಮುಖ್ಯ ಮೂಲ. ಪ್ರಸ್ತುತ ವಾರ್ಷಿಕ ಆದಾಯಕ್ಕನುಗುಣವಾಗಿ ಶೇ. 5, ಶೇ. 20 ಮತ್ತು ಶೇ. 30 ಸ್ಲಾéಬ್‌ನಲ್ಲಿ ತೆರಿಗೆ ವಸೂಲು ಮಾಡಲಾಗುತ್ತದೆ. ಪ್ರತಿ ಬಜೆಟ್‌ನಲ್ಲಿ ಆದಾಯ ತೆರಿಗೆ ಸ್ಲಾಬ್‌ನಲ್ಲಿ ಏನಾದರೂ ಬದಲಾವಣೆಯಾಗಿದೆಯೇ ಎನ್ನುವುದೇ ಕುತೂಹಲದ ಅಂಶವಾಗಿರುತ್ತದೆಯೇ. ಬಹುತೇಕ ನೌಕರಶಾಹಿ ಶೇ. 5ರ ಸ್ಲಾಬ್‌ನಲ್ಲಿ ಬರುವುದರಿಂದ ಸರಕಾರಕ್ಕೆ ಅವರ ಮತಗಳನ್ನು ಸೆಳೆಯಲು ಇದೂ ಒಂದು ದಾರಿಯಾಗಿದೆ. ಬಜೆಟ್‌ನಲ್ಲಿ ಆದಾಯ ಮಿತಿಯನ್ನು ಹೆಚ್ಚಿಸುತ್ತಾ ಹೋಗಿ ಹೆಚ್ಚೆಚ್ಚು ಮಂದಿಯನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡುವ ಮೂಲಕ ಖುಷಿಪಡಿಸುವ ಪರಂಪರೆಯನ್ನು ಬಹುತೇಕ ಎಲ್ಲ ಸರಕಾರಗಳು ಪಾಲಿಸಿಕೊಂಡು ಬಂದಿವೆ. ಹೊಸ ಕಾಯಿದೆಯಲ್ಲಿ ಇಂತಹ ತಕ್ಷಣದ ಲಾಭದ ಆಸೆಗೆ ವರಾಮ ನೀಡುವ ಅಂಶಗಳಿರಬೇಕು. ಅಂತೆಯೇ ತೆರಿಗೆ ವ್ಯಾಪ್ತಿಯನ್ನು ವಿಸ್ತರಿಸುವ ಜತೆಗೆ ತೆರಿಗೆ ಕಳ್ಳತನವನ್ನು ತಪ್ಪಿಸಲು ಪರಿಣಾಮಕಾರಿ ನಿಯಮಗಳಿರಬೇಕು. ಎಲ್ಲವನ್ನೂ ಸರಕಾರವೇ ಮಾಡಬೇಕೆಂದು ನಿರೀಕ್ಷಿಸುವ ಜನರು ಕಾಲಕಾಲಕ್ಕೆ ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವುದು ತಮ್ಮ ಕರ್ತವ್ಯ ಎಂದು ಭಾವಿಸದಿರುವುದು ಈ ದೇಶದ ದುರಂತ.