Advertisement

Desi Swara: ನ್ಯೂಜೆರ್ಸಿ- ಕನ್ನಡ ಕಂದಮ್ಮಗಳ ಚಿಲಿಪಿಲಿ “ಕನ್ನಡ ಕಲಿ’

01:24 PM Jul 20, 2024 | Team Udayavani |

ಹುಟ್ಟೂರಿನಿಂದ ದೂರವಿದ್ದಾಗ, ಅದು ದೇಶದ ಒಳಗಿರಲಿ ಅಥವಾ ವಿದೇಶದಲ್ಲಿರಲಿ, ಹುಟ್ಟಿದ ಊರಿನ ಬಗ್ಗೆ ತುಡಿತ ಸಹಜ. ಅಷ್ಟಿಲ್ಲದೆ “ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎಂದು ಸುಮ್ಮನೆ ಹೇಳಿಲ್ಲ. ಅಂತಹ ಬಾಂಧವ್ಯವನ್ನು ನೆನಪಿಸುವ ಅಪರೂಪದ ಸಂಘಟನೆಯೊಂದು ಅಮೆರಿಕದ ನ್ಯೂಜೆರ್ಸಿಯಲ್ಲಿದೆ.

Advertisement

ಅದುವೇ ಮಕ್ಕಳಿಗೆ ಎಳವೆಯಿಂದಲೇ ಕನ್ನಡ ಕಲಿಕಾ ಕಾರ್ಯಕ್ರಮ, “ಕನ್ನಡ ಕಲಿ’ 1995ರಲ್ಲಿ ನ್ಯೂಜೆರ್ಸಿಯ ದೇವಸ್ಥಾನದ ಪ್ರಾಂಗಣದಲ್ಲಿ ಆರಂಭವಾದ ಈ ಸಂಘಟನೆ ವಿದೇಶದಲ್ಲಿ ಇರುವ ಕನ್ನಡಿಗರಿಗೆ ಮಾತ್ರವಲ್ಲದೆ, ಕನ್ನಡ ಕಲಿಯುವ ಆಸಕ್ತಿ ಇರುವ ಯಾರಿಗೇ ಆದರೂ ಕನ್ನಡವನ್ನು ಅಕ್ಷರಾಭ್ಯಾಸದಿಂದ ಸ್ವತಂತ್ರವಾಗಿ ಓದಲು, ಬರೆಯಲು ಮತ್ತು ಮಾತನಾಡಲು ಬರುವಷ್ಟರ ಮಟ್ಟಿಗೆ ಕಲಿಸುವ ಯೋಜನೆ ಇದು. ಇಲ್ಲಿ ಕಲಿತವರಲ್ಲಿ ಹೆಚ್ಚಿನವರು ಸ್ವತಂತ್ರವಾಗಿ ಚಿಕ್ಕ ಪುಟ್ಟ ಕಥೆ-ಕವನಗಳನ್ನು ಬರೆಯುವಷ್ಟರ ಮಟ್ಟಿಗೂ ಪ್ರತಿಭಾವಂತರಾಗಿದ್ದಾರೆಂದು ಈ ಸಂಘಟನೆಯ ಅಧ್ಯಕ್ಷೆ ಸೀಮಾ ಮೂರ್ತಿಯವರು ಹೆಮ್ಮೆಯಿಂದ ಹೇಳುತ್ತಾರೆ.

1995ರಲ್ಲಿ ಆರಂಭವಾದ ಸಂಘಟನೆಯಲ್ಲಿ ಬೆರಳೆಣಿಕೆಯಷ್ಟು ಬೋಧಕರು ಮತ್ತು ಸೀಮಿತ ಸಂಖ್ಯೆಯ ವಿದ್ಯಾರ್ಥಿಗಳು ಮಾತ್ರ ಇದ್ದರು. 2004ರ ಅನಂತರ ಇದರ ಚಟುವಟಿಕೆಗಳು ವೇಗ ಪಡೆದುಕೊಂಡವು. ಈಗ ಸುಮಾರು 19 ಶಿಕ್ಷಕರು ಮತ್ತು 10 ಪೂರಕ ಸಿಬಂದಿ ಇದ್ದಾರೆ. ಇವರೆಲ್ಲರೂ ಸಂಪೂರ್ಣವಾಗಿ ಸ್ವಯಂ ಪ್ರೇರಣೆಯಿಂದ ಉಚಿತವಾಗಿ ಸೇವೆ ಸಲ್ಲಿಸುವವರು ಎನ್ನುವುದೇ ಇದರಲ್ಲಿನ ವಿಶೇಷ. ಇಂತಹ ಅಪರೂಪದ ಸಂಘಟನೆಯ ಚಟುವಟಿಗಳ ಬಗ್ಗೆ ಸಂಘಟಕರ ಅನಿಸಿಕೆ ಹೀಗಿದೆ:

ಸುಮಾರು 20 ವರ್ಷಗಳಿಂದ ನಡೆದು ಬಂದಿರುವ ಈ “ಕನ್ನಡ ಕಲಿಕಾ’ ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಮಕ್ಕಳು ನಿರಂತರ 5 ರಿಂದ 8 ವರ್ಷಗಳ ಕಾಲ ಕನ್ನಡ ಕಲಿಯುತ್ತಾರೆ. ಒಟ್ಟು ಹತ್ತು ಹಂತಗಳಿರುವ ಈ ಕಾರ್ಯಕ್ರಮದಲ್ಲಿ ಶಿಕ್ಷಕರು ಮಕ್ಕಳಿಗೆ ಕನ್ನಡ ಕಲಿಸುವ ಜತೆಗೆ, ಪ್ರತಿಯೊಂದು ಹೆಜ್ಜೆಯಲ್ಲೂ ಸಾಹಿತ್ಯದ ಸೊಗಸು, ಭಾಷೆ ಮತ್ತು ನಾಡಿನ ಸಾಂಸ್ಕೃತಿಕ ಹಿರಿಮೆಯ ಬಗ್ಗೆ ಅಭಿಮಾನ ಮೂಡಿಸುವ ವಾತಾವರಣ ಸೃಷ್ಟಿಸುತ್ತಾರೆ.

ಹಂತಗಳಿಗೆ ಸಾಮಾನ್ಯವಾಗಿ ಪ್ರಥಮ, ದ್ವಿತೀಯ ಎಂದು ಹೆಸರಿಡುವುದು ವಾಡಿಕೆ. ಆದರೆ ಇಲ್ಲಿ ನಮ್ಮ ನಾಡಿನ ನದಿಗಳ ಹೆಸರನ್ನು ಬಳಸಲಾಗಿದೆ. ಹೀಗೆ ಕಲಿತ ಮಕ್ಕಳು ಲೇಖನಗಳನ್ನು ಓದಿ ಗ್ರಹಿಸಿಕೊಳ್ಳಬಲ್ಲರು, ಸಣ್ಣ ಕಥೆ ಅಥವಾ ಲೇಖನವನ್ನು ಬರೆಯಬಲ್ಲರು, ನಾಟಕಗಳನ್ನು ರಚಿಸಬಲ್ಲರು, ಅಷ್ಟೇ ಅಲ್ಲದೆ ಸರಾಗವಾಗಿ ಇತರ ಕನ್ನಡಿಗರೊಂದಿಗೆ ಸಂವಹನ ಕೂಡಾ ನಡೆಸಬಲ್ಲರು!

Advertisement

ಕಾರ್ಯಕ್ರಮದ ಬುನಾದಿಯಾಗಿ ಮೂರು ಸ್ತಂಭಗಳಿವೆ – ಭಾಷೆ, ಸಂಸ್ಕೃತಿ ಮತ್ತು ಕುಶಲ ವಿದ್ಯೆ. ಭಾಷೆಯ ಜತೆ ನಾಡಿನ ಸಂಸ್ಕೃತಿಯ ಮತ್ತು ಗಣ್ಯರ ಪರಿಚಯ ಮಾಡಿಸಲಾಗುತ್ತದೆ. ಕರ್ನಾಟಕದ ವಿಶೇಷ ಹಬ್ಬಗಳ ಬಗ್ಗೆ, ನಾಡಿನ ಸಂಸ್ಕೃತಿಯ ಬಗ್ಗೆ, ಅಲ್ಲಿನ ಸಾಹಿತ್ಯ ಮತ್ತು ಪ್ರಸಿದ್ಧ ಹಾಡಿನ ಬಗ್ಗೆ ಕಲಿತವರು “ಕನ್ನಡಿಗರು’ ಎಂಬ ಬಿರುದಿಗೆ ಅರ್ಹರಾಗುತ್ತಾರೆ ಈ ವಿದ್ಯಾರ್ಥಿಗಳು.

ಕಾರ್ಯಕ್ರಮದಿಂದ ಪ್ರೇರಿತಗೊಂಡ ಪೋಷಕರಾದ ಗುರುಪ್ರಸಾದ ದತ್ತಾತ್ರಿ ಮತ್ತು ಸೌಮ್ಯ ಭಟ್‌, ಈ ಶಾಲೆಗಾಗಿಯೇ ಬರೆದು, ಸ್ವರ ಸಂಯೋಜನೆ ಮಾಡಿದ “ಕನ್ನಡ ಕಲಿ ಕನ್ನಡ ನುಡಿ’ ಎಂಬ ಹಾಡು ನಮ್ಮ “ಶಾಲಾ ಗೀತೆ’ ಎಂದು ಹೆಸರುವಾಸಿಯಾಗಿದೆ. ಹೀಗೆ ಪೋಷಕರ ಬೆಂಬಲ, ಮಕ್ಕಳ ಆಸಕ್ತಿ ಮತ್ತು ಶಿಕ್ಷಕರ ನಿಷ್ಠೆಯಿಂದ ಬೆಳೆದು ಬಂದ ಕಾರ್ಯಕ್ರಮ ಇದು. ಎರಡು ದಶಕಗಳ ಇತಿಹಾಸವಿರುವ ಕಾರ್ಯಕ್ರಮವಾದರೂ ಇದರ ಬಗ್ಗೆ ಹೆಚ್ಚಾಗಿ ಎಲ್ಲಿಯೂ ಪ್ರಚಾರ ಕಂಡುಬಂದಿಲ್ಲದಿರುವುದು ಆಶ್ಚರ್ಯ ಅನಿಸಬಹುದು; ಕಾರಣವಿಷ್ಟೇ. ಇದರ ಕಾರ್ಯಕರ್ತರು ಕಾರ್ಯಕ್ರಮದ ಧ್ಯೇಯೋದ್ದೇಶಗಳ ಯಶಸ್ಸಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಹೊರತು- ಪ್ರಚಾರ, ಪ್ರಸಿದ್ಧಿಗಾಗಿ ಅಲ್ಲ! ಕೆಲಸದಲ್ಲಿ ನಮ್ಮ ಸಾಮರ್ಥ್ಯವನ್ನು ತೋರಿಸೋಣ, ಎಂಬುದು ಅವರೆಲ್ಲರ ದೃಢ ನಂಬಿಕೆ. ನಿಷ್ಠಾವಂತರಾದ ಶಿಕ್ಷಕ ವೃಂದ ಹುದ್ದೆಗಾಗಲಿ, ಪ್ರಶಂಸೆಗ ಅಥವಾ ಖ್ಯಾತಿಗಾಗಲಿ ಕೆಲಸ ಮಾಡುವ ಜನರಲ್ಲ!

ವೃಂದದಲ್ಲಿರುವ ಶಿಕ್ಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಬಂದವರು, ಕಾರ್ಯಕ್ರಮದ ರೂಪ, ನಕ್ಷೆ ನೋಡಿ ಪ್ರೇರಿತರಾಗಿ ತಾವೂ ಪಾಠ ಮಾಡಲು ಉತ್ಸಾಹ ತೋರಿಸಿದ ಉದಾಹರಣೆಗಳಿವೆ! ಪೋಷಕರ ಬೆಂಬಲದಿಂದ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡು ಸಫಲತೆ ಕಂಡಿದೆ ಈ ಸಂಘಟನೆ. ಇದರ ವಿದ್ಯಾರ್ಥಿಗಳು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿರುವುದಲ್ಲದೆ “ಕರ್ನಾಟಕ ದರ್ಶನ’ ಎಂಬ ಸಾಂಸ್ಕೃತಿಕ ಮೇಳವನ್ನು ನ್ಯೂಜೆರ್ಸಿಯ ಪುತ್ತಿಗೆ ಮಠದ ಆಡಳಿತಕ್ಕೆ ಒಳಪಟ್ಟ ಶ್ರೀ ಕೃಷ್ಣ ದೇವಸ್ಥಾನದಲ್ಲಿ, ಶ್ರೀ ಸುಗುಣೇಂದ್ರ ತೀರ್ಥರ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ಏರ್ಪಡಿಸಿದ್ದರು.

ಇದರಲ್ಲಿ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳ ಸಾಂಸ್ಕೃತಿಕ ವೈಭವದ ಬಗ್ಗೆ ಚಿತ್ರ ಬಿಡಿಸುವುದು, ವಸ್ತು ಪ್ರದರ್ಶನ, ಪ್ರಶ್ನೋತ್ತರ, ರಸಪ್ರಶ್ನೆ, ಮುಂತಾದ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಾತ್ರವಲ್ಲದೆ ಅಮೆರಿಕದಲ್ಲಿನ ಬೇರೆ ಕನ್ನಡ ಶಾಲೆಗಳೊಂದಿಗೆ ಜತೆಗೂಡಿ ಮಕ್ಕಳದ್ದೇ ಆದ “ಅರಳು ಮಲ್ಲಿಗೆ’ ಎಂಬ ತ್ರೈಮಾಸಿಕ ಪತ್ರಿಕೆ ಬಿಡುಗಡೆ ಮಾಡಿದ್ದಾರೆ. ಮಕ್ಕಳಿಗೆ ನಮ್ಮ ಭಾಷೆ , ಸಂಸ್ಕೃತಿ, ಹಬ್ಬಗಳ ವೈಶಿಷ್ಟತೆ ವಿವರಿಸುವುದರೊಂದಿಗೆ ನಮ್ಮ ದೇಶ ಭಾಷೆಯ ಇತಿಹಾಸ ಮತ್ತು ನಾಡಿನ ಗಣ್ಯರ ಪರಿಚಯವನ್ನೂ ಮಾಡಿಸುವಂತ ಪಠ್ಯಕ್ರಮವನ್ನು ನಾವೇ ರಚಿಸಿಕೊಂಡು ಪಾಠ ಮಾಡಲಾಗುತ್ತದೆ. ಓದು ಬರಹ ಮತ್ತು ಮಾತನಾಡಲೂ ಕಲಿಸುತ್ತೇವೆ. ಈ ಪಠ್ಯಕ್ರಮದಲ್ಲಿ ಮೂರು ವಿಭಾಗಗಳಿವೆ. ಭಾಷೆ, ಸಂಸ್ಕೃತಿ ಹಾಗೂ ಆತ್ಮವಿಶ್ವಾಸ ತುಂಬುವಂತಹ ಕೌಶಲಾಧಾರಿತ ವಿಷಯದಲ್ಲಿ ಬೋಧನೆ.

ಬಹುತೇಕ ಪ್ರೌಢ ಹಂತವನ್ನು ಮುಗಿಸುವಷ್ಟರಲ್ಲಿ ತಾವು ಸ್ವತಃ ಪರಿಣತಿ ಪಡೆಯುವುದಲ್ಲದೆ ಇತರರಿಗೆ ಪಾಠ ಹೇಳಿ ಕೊಡುವಷ್ಟು ದಕ್ಷತೆ ಮಕ್ಕಳಲ್ಲಿ ಮೂಡಿರುತ್ತದೆ.

ಸಂಘಟನೆಯ ಕಲಿಕಾ ವಿಧಾನ: ತಮ್ಮ ಬಿಡುವಿನ ವೇಳೆಯಲ್ಲಿ, ಕೆಲವರು ದೇವಸ್ಥಾನದ ಪ್ರಾಂಗಣದಲ್ಲಿ ಮುಖಾಮುಖೀ ತರಗತಿಗಳನ್ನು ನಡೆಸುವುದು ಒಂದು ರೀತಿಯಾದರೆ, ನ್ಯೂಜೆರ್ಸಿಯಲ್ಲೇ ಇತರ ಮೂರು ಕೇಂದ್ರಗಳಲ್ಲಿ ಇಂತಹುದೇ ತರಗತಿಗಳು ನಡೆಯುತ್ತಿವೆ. ಈ ಕಾರ್ಯಕ್ರಮದಲ್ಲಿ ದೂರದ ಊರುಗಳಲ್ಲಿ ಇರುವವರೂ ಆಸಕ್ತಿ ಹೊಂದಿದ್ದು, ಅವರಿಗಾಗಿ ಅಂತರ್ಜಾಲ ಮೂಲಕವೂ ತರಗತಿ ನಡೆಸಲಾಗುತ್ತದೆ. ವಾರದಲ್ಲಿ ಒಂದು ತಂಡಕ್ಕೆ ಒಂದು ಗಂಟೆಯ ಅವಧಿಗೆ ತರಗತಿಯನ್ನು ನಡೆಸಲಾಗುತ್ತಿದ್ದು, ಕಾಲ ಕಾಲಕ್ಕೆ ಪರೀಕ್ಷೆಗಳನ್ನು ನಡೆಸಿ, ಅವರ ಗ್ರಹಿಸುವ ಮಟ್ಟವನ್ನು ಮಾನದಂಡವಾಗಿರಿಸಿಕೊಂಡು ಮುಂದಿನ ಹಂತದ ಪಾಠಕ್ಕೆ ಸಜ್ಜುಗೊಳಿಸಲಾಗುತ್ತದೆ. ಸಂಘಟನೆಯ ಕಾರ್ಯದರ್ಶಿ ಸುಮನಾ ಶೆಣೈ, ಖಜಾಂಚಿ ಸುಬ್ರಹ್ಮಣ್ಯ ಭಟ್‌ ಅವರ ಜತೆ ಆಡಳಿತಗಾರರಾಗಿ ಮಧುರ ಅಶ್ವಥಯ್ಯ, ಪದ್ಮಿನಿ ವಿಶ್ವನಾಥ, ಸತೀಶ್‌ ಹೊಸನಗರ, ಶ್ವೇತ ಮೋತಿ ಸೇರಿದಂತೆ 19 ಸ್ವಯಂಸೇವಕರು ತರಗತಿಗಳನ್ನು ನಡೆಸಿಕೊಡುತ್ತಾರೆ.

ಇದೆಲ್ಲದಕ್ಕೂ ಮುಕುಟಪ್ರಾಯವೆನಿಸುವಂತೆ ಪ್ರತೀ ವರ್ಷದ ಜೂ. 3ನೇ ರವಿವಾರ ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು ಮತ್ತವರ ಹೆತ್ತವರು ಸೇರಿ ಒಂದು ಸೌಹಾರ್ದ ಕೂಟವನ್ನು ಏರ್ಪಡಿಸಲಾಗುತ್ತದೆ. ಇದರಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯಿಂದ ತಿಂಡಿ, ತಿನಿಸು, ಆಯ್ಕೆಯ ಖಾದ್ಯಗಳನ್ನು ತಯಾರಿಸಿ ತರುತ್ತಾರೆ. ದಿನವಿಡೀ ಮಕ್ಕಳು ಶಿಕ್ಷಕರು,ಹೆತ್ತವರು ಆಟೋಟಗಳಲ್ಲಿ ಭಾಗವಹಿಸುವ, ಮನರಂಜಿಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

ಈ ಕಾರ್ಯಕ್ರಮದಲ್ಲಿ ಕಲಿಕೆಯನ್ನು ಮುಗಿಸಿದ ಮಕ್ಕಳಿಗೆ ಪ್ರಮಾಣಪತ್ರಗಳನ್ನೂ ವಿತರಿಸಲಾಗುತ್ತದೆ. ಒಟ್ಟಿನಲ್ಲಿ 2,500 ವರ್ಷಗಳ ಭವ್ಯ ಇತಿಹಾಸದ ಕನ್ನಡದ ಕಂಪನ್ನು ಹರಡಿಸುವ ಇಂತಹ ಸಂಘಟನೆಗಳು ಬೇರೆ ಕಡೆ ಇದ್ದರೂ ಇರಬಹುದು, ಈ ಸಂಘಟನೆಯ ಚಟುವಟಿಕೆಗಳ ಪಕ್ಷಿನೋಟ ಪ್ರಸ್ತುತ ಪಡಿಸಿದ ಉದ್ದೇಶ, ಇದನ್ನು ಬೇರೆಯವರೂ ಅನುಸರಿಸಲಿ, ನಮ್ಮ ಹೆಮ್ಮೆಯ ಕನ್ನಡ ಜಗದಗಲ ಬೆಳೆಯಲಿ ಎಂದು ಹಾರೈಸೋಣ.

Advertisement

Udayavani is now on Telegram. Click here to join our channel and stay updated with the latest news.

Next