Advertisement
ಸಾಂಪ್ರದಾಯಿಕ ಸೋಲಾರ್ ಬೇಲಿಗಳನ್ನು ಬುದ್ಧಿವಂತ ಆನೆಗಳು ಮರ ಬೀಳಿಸಿ, ಜಜ್ಜಿ, ದಾಟಿಕೊಂಡು ಹೋಗುತ್ತಿದ್ದವು. ಈ ಭಾಗದಲ್ಲಿ ಆನೆ ಹಾವಳಿ ತಡೆಗಟ್ಟಲು ಇತರ ವಿಧಾನಗಳಾದ ಆನೆಕಂದಕ ಇರಬಹುದು, ರೈಲ್ವೇ ಹಳಿಗಳ ಬೇಲಿಯನ್ನೂ ಪ್ರಯೋಗಿಸಿ ನೋಡಲಾಗಿದೆ. ಆದರೆ ಅವೆಲ್ಲವುಗಳಿಗಿಂತ ನೇತಾಡುವ ಸೋಲಾರ್ ಬೇಲಿಯೇ ಉತ್ತಮ ಎನ್ನುವುದು ಪ್ರಾಯೋಗಿಕವಾಗಿ ಸಾಬೀತಾಗಿದೆ.
ನೇತಾಡುವ ಸೋಲಾರ್ ಬೇಲಿ ಸಾಂಪ್ರದಾಯಿಕ ಸ್ಥಿರ ಸೋಲಾರ್ ಬೇಲಿಗಿಂತ ಭಿನ್ನ. ಸುಮಾರು 10-12 ಅಡಿ ಎತ್ತರದ ಕಬ್ಬಿಣದ ಕಂಬಗಳನ್ನು ನಿರ್ದಿಷ್ಟ ಅಂತರದಲ್ಲಿ ನೆಡಲಾಗುತ್ತದೆ. ಅವುಗಳ ಮೇಲ್ಭಾಗದಲ್ಲಿ ಕಂಬದಿಂದ ಕಂಬಕ್ಕೆ ವಿದ್ಯುತ್ ತಂತಿಗಳನ್ನು ಹಾಕಲಾಗುತ್ತದೆ. ಬಳಿಕ ಅವುಗಳಿಂದ ವಿದ್ಯುತ್ ಸಂಪರ್ಕವಿರುವ ತಂತಿಗಳನ್ನು ಕೆಳಕ್ಕೆ ಇಳಿಬಿಡಲಾಗುತ್ತದೆ. ಇವು ನೇತಾಡಿಕೊಂಡಿರುತ್ತವೆ. ಆನೆಗಳ ಮೈಗೆ ಇವು ಸ್ಪರ್ಶಿಸಿದರೆ ವಿದ್ಯುದಾಘಾತವಾಗುತ್ತದೆ. ಆದರೆ ನೇತಾಡುವ ತಂತಿಗಳಾದ ಕಾರಣ ತುಂಡಾಗುವುದಿಲ್ಲ, ಬೇರೆ ಮರಗಳನ್ನು ಬೀಳಿಸಿ ಜಜ್ಜಿ ಹಾಳುಗೆಡಹುವುದಕ್ಕೂ ಅಸಾಧ್ಯ. ಕಂಬಗಳ ಸುತ್ತಲೂ ಇದೇ ರೀತಿ ತಂತಿಗಳನ್ನು ಇಳಿಬಿಡುವುದರಿಂದ ಆನೆಗಳಿಗೆ ಕಂಬಗಳನ್ನು ಮುಟ್ಟುವುದಕ್ಕೆ ಕೂಡ ಆಗುವುದಿಲ್ಲ.ಬೇರೆ ರಾಜ್ಯಗಳಲ್ಲಿ ಇದು ಅನುಷ್ಠಾನದಲ್ಲಿದೆ. ರಾಜ್ಯದಲ್ಲೂ ನಾಗರಹೊಳೆ, ಬಂಡೀಪುರ ಭಾಗದಲ್ಲಿ ಈ ಹಿಂದೆ ಅಳವಡಿಸಲಾಗಿದೆ. ಅಲ್ಲಿ ಯಶಸ್ವಿಯಾಗಿರುವುದರಿಂದ ಇಲ್ಲೂ ಅನುಷ್ಠಾನ ಮಾಡಲಾಗಿದೆ. ನಮ್ಮ ವ್ಯಾಪ್ತಿಯ ಅಜ್ಜಾವರದಲ್ಲಿ ಹಾಕಿದ್ದು, ಉತ್ತಮ ಫಲಿತಾಂಶ ಲಭಿಸಿ ಎನ್ನುತ್ತಾರೆ ಸುಳ್ಯದ ವಲಯ ಅರಣ್ಯಾಧಿಕಾರಿ ಮಂಜುನಾಥ್.
Related Articles
Advertisement
ಎಲ್ಲೆಲ್ಲಿ ಎಷ್ಟು ಬೇಲಿ?2022-23ರ ಸಾಲಿನಲ್ಲಿ ಸುಳ್ಯದಲ್ಲಿ 6 ಕಿ.ಮೀ., ಸುಬ್ರಹ್ಮಣ್ಯದಲ್ಲಿ 3 ಕಿ.ಮೀ. ಹಾಗೂ ಉಪ್ಪಿನಂಗಡಿಯಲ್ಲಿ 1 ಕಿ.ಮೀ. ನೇತಾಡುವ ಬೇಲಿ ಅಳವಡಿಸಲಾಗಿದೆ. 2023-24ರಲ್ಲಿ ಬೆಳ್ತಂಗಡಿಯಲ್ಲಿ 2 ಕಿ.ಮೀ., ಸುಳ್ಯದಲ್ಲಿ 5 ಕಿ.ಮೀ. ಹಾಗೂ ಸುಬ್ರಹ್ಮಣ್ಯದಲ್ಲಿ 2 ಕಿ.ಮೀ.; 2024-25ರ ಸಾಲಿನಲ್ಲಿ ಸುಬ್ರಹ್ಮಣ್ಯದಲ್ಲಿ 4 ಕಿ.ಮೀ. ಹಾಗೂ ಪುತ್ತೂರಿನಲ್ಲಿ 4.18 ಕಿ.ಮೀ. ಉದ್ದಕ್ಕೆ ಸೋಲಾರ್ ನೇತಾಡುವ ಬೇಲಿ ಹಾಕಲಾಗುತ್ತಿದೆ. ಸುಬ್ರಹ್ಮಣ್ಯ ರೇಂಜ್‌ನ ಐತೂರು, ಕೊಲ್ಲಮೊಗ್ರ ಭಾಗದಲ್ಲಿ ಸೋಲಾರ್ ಟೆಂಟಕಲ್ ಫೆನ್ಸ್ ಹಾಕಲಾಗಿದೆ, ಪರಿಣಾಮ ಉತ್ತಮವಾಗಿದೆ. ಬೇಲಿ ಹಾಗೂ ಭೂಮಿಯ ನಡುವೆ ಸುಮಾರು 3 ಅಡಿ ಅಂತರ ಇರುತ್ತದೆ, ಹಾಗಾಗಿ ಇದರಡಿ ಸಣ್ಣ ಪ್ರಾಣಿಗಳ ಸಂಚಾರಕ್ಕೆ ಯಾವುದೇ ಅಡ್ಡಿಯೂ ಇಲ್ಲ. ನಮ್ಮಲ್ಲಿ ಇನ್ನಷ್ಟು ಇಂತಹ ಬೇಲಿ ಹಾಕಲು ಬೇಡಿಕೆ ಇದೆ, ಅನುದಾನ ಲಭ್ಯವಾದಂತೆ ಅಳವಡಿಸುತ್ತೇವೆ ಎಂದವರು ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್ ಬಾಬು. ಆನೆ ಹಾವಳಿ ತಡೆಯಲು ರೈಲು ಹಳಿಯ ಬೇಲಿಗಿಂತ ನೇತಾಡುವ ಬೇಲಿ ಕಡಿಮೆ ಖರ್ಚಿನದ್ದು. ಸೋಲಾರ್ ಬೇಲಿ ಕಿ.ಮೀ.ಗೆ ಸುಮಾರು 6.6 ಲಕ್ಷ ರೂ. ತಗಲುತ್ತದೆ. ಅದೇ ಒಂದು ಕಿ.ಮೀ. ರೈಲು ಹಳಿ ಬೇಲಿಗೆ 1.2 ಕೋಟಿ ರೂ. ವರೆಗೆ ಬೇಕು. ಅಲ್ಲದೆ ಅದಕ್ಕೆ ಆನೆಗಳು ಸಿಲುಕಿಕೊಂಡು ಪ್ರಾಣಾಪಾಯಕ್ಕೂ ಈಡಾಗುತ್ತವೆ. ಆನೆಕಂದಕಗಳು ಮಳೆಗಾಲದಲ್ಲಿ ಕೆಸರು ತುಂಬಿಕೊಂಡು ನಿರ್ವಹಣೆ ಕ್ಲಿಷ್ಟಕರ.
-ಆ್ಯಂಟನಿ ಮರಿಯಪ್ಪ,
ಉಪ ಅರಣ್ಯ ಸಂರಕ್ಷಣಾಧಿಕಾರಿ -ವೇಣು ವಿನೋದ್ ಕೆ.ಎಸ್