ಮಂಗಳೂರು: ಉಳ್ಳಾಲದಲ್ಲಿ ದಕ್ಷಿಣ ರೈಲ್ವೇಯಿಂದ ನಿರ್ಮಾಣಗೊಂಡಿರುವ ನೂತನ ಗೂಡ್ಸ್‌ಶೆಡ್ ಕಾರ್ಯಾರಂಭಿಸಿದೆ.
ಪೆಟ್ರೋಲಿಯಂ ಉತ್ಪನ್ನಗಳು, ಕಲ್ಲಿದ್ದಲು ಹೊರತಾಗಿ ಉಳಿದೆಲ್ಲಾ ಸರಕುಗಳನ್ನೂ ಇದು ನಿರ್ವಹಿಸಲಿದೆ. ಇದುವರೆಗೆ ಮಂಗಳೂರಿನ ಹೊಗೆಬಜಾರ್ ಪ್ರದೇಶದಲ್ಲಿ ಗೂಡ್ಸ್‌ಶೆಡ್ ಕಾರ್ಯಾಚರಿಸುತ್ತಿದ್ದು, ಇದರಿಂದ ನಗರದೊಳಗೆ ಸಂಚಾರ ದಟ್ಟಣೆಯೂ ಉಂಟಾಗುತ್ತಿತ್ತು.
ಒಂದೆಡೆ ರೈಲುಗಳು ಇದರೊಳಗೆ ಬರುವಾಗ ರೈಲ್ವೇಗೇಟ್ ಹಾಕಲಾಗುವುದು ಇನ್ನೊಂದೆಡೆ ಗೂಡ್ಸ್ ಸಾಗಾಟದ ಲಾರಿಗಳ ಸಂಚಾರ ಇದಕ್ಕೆ ಕಾರಣವಾಗಿತ್ತು. ಸ್ವತ್ಛತೆಯ ಸಮಸ್ಯೆಯೂ ಇಲ್ಲಿರುವುದರಿಂದ ಅದನ್ನು ಹೊರಭಾಗಕ್ಕೆ ಸ್ಥಳಾಂತರಿಸಬೇಕು ಎಂದು ಹಲವು ವರ್ಷಗಳಿಂದ ಆಗ್ರಹ ಕೇಳಿಬಂದಿತ್ತು.
ದಕ್ಷಿಣ ರೈಲ್ವೇ ಅಧಿಸೂಚನೆಯಂತೆ ಉಳ್ಳಾಲ ರೈಲ್ವೆ ನಿಲ್ದಾಣದಲ್ಲಿ 2.5 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಗೂಡ್ಸ್ ರೈಲು ಯಾರ್ಡ್ 42 ವ್ಯಾಗನ್‌ಗಳಿರುವ ಪೂರ್ಣ ಗೂಡ್ಸ್ ರೈಲನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. 650 ಮೀ. ಉದ್ದ ಹಾಗೂ 15 ಮೀಟರ್ ಅಗಲದ ಪ್ಲಾಟ್‌ಫಾರಂ ಇದ್ದು, ಇದರಲ್ಲಿ ಸರಕನ್ನು ಟ್ರಕ್‌ಗಳಿಗೆ ಲೋಡ್ ಮಾಡುವುದಕ್ಕೆ ಅವಕಾಶವಿದೆ.
ಉಳ್ಳಾಲದಲ್ಲಿ ಸದ್ಯಕ್ಕೆ ಸರಕುಗಳನ್ನು ತಾತ್ಕಾಲಿಕವಾಗಿ ಸಂಗ್ರಹಿಸಿರಿಸಲು ಚಾವಣಿಯುಳ್ಳ ಜಾಗವಿಲ್ಲ. ಇದನ್ನು ಹಂತಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು. ಉಳ್ಳಾಲದಲ್ಲಿ ಇಳಿಸುವ ಸರಕನ್ನು ನೇರವಾಗಿ ಪಣಂಬೂರು, ಬೈಕಂಪಾಡಿ, ಮರೋಳಿ ಮುಂತಾದೆಡೆ ಇರುವ ಗೋದಾಮುಗಳಿಗೆ ನೇರವಾಗಿ ಸಾಗಿಸಬಹುದು. ಇದರಿಂದ ನಗರದೊಳಗೆ ಸಂಚಾರ ಸುಧಾರಣೆ ನಿರೀಕ್ಷಿಸಬಹುದು.
ಕೋಚಿಂಗ್ ಕಾಂಪ್ಲೆಕ್ಸ್
ಬಂದರು ಹೊಗೆಬಜಾರ್‌ನಲ್ಲಿರುವ ಗೂಡ್ಸ್‌ಶೆಡ್ ಚಟುವಟಿಕೆಗಳನ್ನು ಪೂರ್ಣವಾಗಿ ಉಳ್ಳಾಲಕ್ಕೆ ಸ್ಥಳಾಂತರಿಸ ಲಾಗುವುದು. ಬಳಿಕ ಹಳೆ ಗೂಡ್ಸ್‌ಶೆಡ್ ಅನ್ನು ಮಂಗಳೂರು ಸೆಂಟ್ರಲ್ ನಿಲ್ದಾಣದ ಕೋಚಿಂಗ್ ಕಾಂಪ್ಲೆಕ್ಸ್ ಆಗಿ ಪರಿವರ್ತಿಸಲಾಗುವುದು. ಇದಕ್ಕಾಗಿ ಹೆಚ್ಚುವರಿ ಹಳಿಯೊಂದನ್ನು ನಿರ್ಮಿಸ ಲಾಗುವುದು. ಇಲ್ಲಿ ಪ್ರಯಾಣಿಕರ ರೈಲಿನ ಬೋಗಿಗಳನ್ನು ನಿಲ್ಲಿಸಿ ನಿರ್ವಹಣೆ ಮಾಡಲಾಗುವುದು.