Advertisement

ಸಂತ ಅಲೋಶಿಯಸ್‌ ಕಾಲೇಜು ಚಾಪೆಲ್‌, ಮ್ಯೂಸಿಯಂಗೆ ಹೊಸರೂಪ

05:36 AM Feb 15, 2019 | |

ಮಹಾನಗರ : ನಗರದ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಸಂತ ಅಲೋಶಿಯಸ್‌ ಕಾಲೇಜಿನ ಚಾಪೆಲ್‌, ವಸ್ತು ಸಂಗ್ರಹಾಲಯ ನವೀಕರಣಗೊಂಡು ಹೊಸ ಲುಕ್‌ ಪಡೆದಿದ್ದು, ಫೆ. 16ರಂದು ಲೋಕಾರ್ಪಣೆಗೊಳ್ಳದೆ.

Advertisement

ಸಂತ ಅಲೋಶಿಯಸ್‌ ಕಾಲೇಜ್‌ ಚಾಪೆಲ್‌ನ ವಿಶ್ವದರ್ಜೆಯ ವರ್ಣ ಚಿತ್ರಗಳು ಎರಡನೇ ಬಾರಿಗೆ ನವೀಕರಣಗೊಂಡಿವೆ. 120 ವರ್ಷಗಳ
ಇತಿಹಾಸವಿರುವ ಈ ವರ್ಣಚಿತ್ರಗಳನ್ನು ಈ ಮೊದಲು 20 ವರ್ಷಗಳ ಹಿಂದೆ ನವೀಕರಿಸಲಾಗಿತ್ತು.

ಹಿನ್ನೆಲೆ
120 ವರ್ಷಗಳ ಹಿಂದೆ ಇಟೆಲಿಯ ಜೆಸ್ವಿಟ್‌ ಬ್ರದರ್‌ ಅಂತೋನಿಯೋ ಮೊಸ್ಕೇನಿ ಅವರು ಇಟೆಲಿಯ ಬಗ್ಯಾì ಮೊದಲ್ಲಿರುವ ಪ್ರಸಿದ್ಧ ಕಲಾಸಂಸ್ಥೆಯಾದ ‘ಅಕಾಡೆಮಿಯ ಕ್ಯಾರೆರಾ’ ದಲ್ಲಿ ತರಬೇತಿಯನ್ನು ಪಡೆದ ಓರ್ವ ಪರಿಣತ ವರ್ಣಚಿತ್ರ ಕಲಾವಿದರಾಗಿದ್ದು, ಅವರು ತಮ್ಮ ಕಲಾಕೌಶಲದಿಂದ ಒಟ್ಟು 829 ಚದರ ಮೀಟರ್‌ ವಿಸ್ತೀರ್ಣವಿರುವ ಸಂತ ಅಲೋಶಿಯಸ್‌ ಕಾಲೇಜ್‌ನ ಕಿರು ಇಗರ್ಜಿಯ ಚಿತ್ರಕಲೆಯನ್ನು ಕೇವಲ ಎರಡೂವರೆ ವರ್ಷಗಳಲ್ಲಿ ಕ್ಯಾನ್‌ವಾಸ್‌ ಮತ್ತು ಅಂದವಾದ ಹಸಿಚಿತ್ರಗಳ ಜತೆಗೆ ಪೂರ್ತಿಗೊಳಿಸಿದ್ದರು.

ಗೋಡೆಯ ಮೂಲಕ ಒಳಬಂದ ಮಳೆನೀರಿನಿಂದ, ಧೂಳು ಮತ್ತು ಶಿಲೀಂಧ್ರಗಳಿಂದ ಈ ವರ್ಣಚಿತ್ರಗಳು ಅಂದಗೆಟ್ಟು ಹಾನಿಗೊಳಗಾದ ಕಾರಣ ಲಕ್ನೋದ ಇನ್ಟ್ಯಾಚ್‌- ಐಸಿಐಯ ತಜ್ಞರಿಂದ 1991ರಿಂದ 1994 ಅವಧಿಯಲ್ಲಿ ಈ ವರ್ಣಚಿತ್ರಗಳನ್ನು ಸ್ವಚ್ಛಗೊಳಿಸಲಾಗಿತ್ತು. ಅದರ ಮೇಲ್ವಿ ಚಾರಣೆಯನ್ನು ಇನ್ಟ್ಯಾಚ್‌ -ಐಸಿಐಯ ನಿರ್ದೇಶಕ ಡಾ| ಅಗರ ವಾಲ್‌ ವಹಿಸಿದ್ದರು. ಅವರು ಪ್ರತೀ 20 ವರ್ಷಕಳಿಗೊಮ್ಮೆ ಇವುಗಳನ್ನು ಪರೀಕ್ಷಿಸುವಂತೆ ಸೂಚಿಸಿದ್ದರು. ಹಾಗಾಗಿ ಹೊಸ ದಿಲ್ಲಿಯ ಕಲಾ ಮತ್ತು ವಸ್ತು ಪರಂಪರೆ ವಿಭಾಗದ ಇನ್ಟ್ಯಾಚ್‌ ಕನ್ಸರ್ವೇಶನ್‌ ಸಂಸ್ಥೆಗಳ ಪ್ರಧಾನ ನಿರ್ದೇಶಕ ನಿಲಭ್‌ ಸಿನ್ಹಾ ಅವರನ್ನು 2017ರಲ್ಲಿ ಚಾಪೆಲ್‌ ಗೆ ಕರೆಸಲಾಗಿತ್ತು. ಅವರು ವರ್ಣಚಿತ್ರ ಕುರಿತ ವರದಿ ಮತ್ತು ಅವುಗಳನ್ನು ಸಂರಕ್ಷಣೆ ಬಗ್ಗೆ ಕೆಲವೊಂದು ಪ್ರಮುಖ ಸಲಹೆ ಸೂಚನೆಗಳನ್ನು ನೀಡಿದ್ದರು. ವರ್ಣಚಿತ್ರಗಳನ್ನು ಹಿಂದಿನ ಸ್ಥಿತಿಗೆ ತರಲು ಒಟ್ಟು 1.25 ಕೋ.ರೂ.ಗಳ ಅಂದಾಜು ವೆಚ್ಚ ಅಗತ್ಯವಿದ್ದು, 18 ತಿಂಗಳುಗಳ ಕೆಲಸ ನಿರ್ವಹಿಸಬೇಕಿದೆ ಎಂದ ಅವರು ತಿಳಿಸಿದ್ದರು.

ಅದರಂತೆ ಭಿತ್ತಿಚಿತ್ರಗಳು, ಕ್ಯಾನ್‌ ವಾಸ್‌ ಮತ್ತು ತಜ್ಞರಿಂದ ಕೂಡಿದ ವರ್ಣಚಿತ್ರ ಪುನಃ ಸ್ಥಾಪನ ತಂಡವನ್ನು ದಿಲ್ಲಿಯಿಂದ ನಿಯೋಜಿಸಲಾಗಿತ್ತು. ಈ ತಂಡವು 14 ತಿಂಗಳಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಕೆಲಸವನ್ನು ಪೂರ್ತಿ ಗೊಳಿಸಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ.

Advertisement

ಮ್ಯೂಸಿಯಂನಲ್ಲಿ ಏನೆಲ್ಲ ಇದೆ
ಮ್ಯೂಸಿಯಂನಲ್ಲಿ ನವಶಿಲಾಯುಗದ ಕಲ್ಲಿನಿಂದ ಮಾಡಿದ ಕೊಡಲಿ, ಬರ್ಲಿನ್‌ ಗೋಡೆಯ ತುಣುಕುಗಳು, ಹೋಲಿ ಲ್ಯಾಂಡಿನಿಂದ ತಂದ ವಸ್ತುಗಳು, ಉತ್ತರ ಧ್ರುವದ ಅತ್ಯಂತ ಶೀತಪ್ರದೇಶದಿಂದ ತಂದ ಬಂಡೆಯ ಚೂರು; ಹಾಗೆಯೇ ಹಿತ್ತಾಳೆ ಮತ್ತು ಕಂಚಿನಿಂದ ತಯಾರಿಸಿದ ಅನೇಕ ವಸ್ತುಗಳು, ದೀಪಗಳ ಸಂಗ್ರಹ, ಆಫ್ರಿಕದ ಕಲಾಕೃತಿಗಳು, ಪುರಾತನ ಪಿಂಗಾಣಿ ಹೂದಾನಿಗಳು, ಹಳೆ ಕಾಲದ ಸರಳ ತಂತ್ರಜ್ಞಾನದ ಕೆಮರಾದಿಂದ ಹಿಡಿದು ಆಧುನಿಕ ವಿದ್ಯುನ್ಮಾನ ಯುಗದ ಹೊಸ ಕೆಮರಾಗಳು, ಸುಮಾರು 2,000ದಷ್ಟು ಖನಿಜಗಳ ಮಾದರಿಗಳು ಮತ್ತು ಪಳೆಯುಳಿಕೆಗಳು ಇಲ್ಲಿವೆ. ಅಪರೂಪದ ಅಂಚೆಚೀಟಿಗಳು ಮತ್ತು ವಿಭಿನ್ನ ರಾಷ್ಟ್ರಗಳ ಕರೆನ್ಸಿ ನೋಟ್‌ಗಳಿವೆ. ಮಂಗಳೂರಿಗೆ ವಿದ್ಯುತ್‌ ಸರಬರಾಜು ಆಗುವ ಮೊದಲು ಕಾಲೇಜಿನಲ್ಲಿ ಅಳವಡಿಸಲಾಗಿದ್ದ ಪ್ರಥಮ ಜನರೇಟರ್‌ ಇಲ್ಲಿದೆ. ಇಲ್ಲಿ ಮೊದಲ ಕಂಪ್ಯೂ ಟರ್‌ ಇದೆ. ಸಾಕಷ್ಟು ಸಂಖ್ಯೆಯ ರೇಡಿಯೋ ಸೆಟ್‌ಗಳಿವೆ, ಗ್ರಾಮೊಫೋನ್‌ ಮತ್ತು ಟಿವಿ ಗಳಿವೆ. ಕಲ್ಲಿಕೋಟೆಯ ಹತ್ತಿರದ ಬೆಲಿಯ ಪಟಮ್‌ನಿಂದ ತಂದ ತಿಮಿಂಗಿಲವೊಂದರ ಅಸ್ಥಿಪಂಜರವೂ ಸಹಿತ ಹಲವು ಅಸ್ಥಿ ಪಂಜರಗಳಿವೆ.

ಮಂಗಳೂರಿಗೆ ಬಂದ ಮೊದಲ ಕಾರು ಇದೆ. ಹಿಂದಿನ ಕಾಲದಲ್ಲಿ ಗಾಡಿಗಳು, ಕುದುರೆಯ ಮೇಲೆ ಕುಳಿತು ಪ್ರಯಾಣ ಮಾಡುತ್ತಿದ್ದು, ಹಾಗೆಯೇ ಕುದುರೆಗಳನ್ನು ಹೈಸ್ಕೂಲ್‌ ಕಟ್ಟಡದ ಮುಂದೆ ಕಟ್ಟಲಾಗುತ್ತಿತ್ತು. ಅಂಥ ಒಂದು ಕಲ್ಲು ಇಲ್ಲಿದೆ. ಅಪರೂಪದ ಪುಸ್ತಕ ಗಳು, ಹಸ್ತಪ್ರತಿಗಳು, ತಾಳೆಗರಿಯಲ್ಲಿನ ಹಸ್ತಪ್ರತಿಗಳು, ರೋಮನ್‌ ಕ್ಯಾಥೊಲಿಕ್‌ ಪ್ರಾರ್ಥನೆ, ವ್ರತ ಪುಸ್ತಕಗಳು, ಕ್ರೈಸ್ತ ವಿಧಿ ಆಚರಣೆಗಳ ಸಂದರ್ಭ ಧರಿಸುವ ಉಡುಪುಗಳು, ಹಿಬ್ರೂ ಶಾಸನಗಳ ಕರಡುಪ್ರತಿ ಇದೆ.

19ನೇ ಶತಮಾನದಲ್ಲಿ ಈ ಭಾಗದಲ್ಲಿ ಬಳಸಲಾಗುತ್ತಿದ್ದ ಗೃಹೋಪಕರಣಗಳು, ಅಡುಗೆ ಪಾತ್ರೆಗಳು, ಕೃಷಿ ಸಂಬಂಧಿತ ಉಪಕರಣಗಳಿವೆ. ಅಡ್ಡ ಗೋಡೆಗಳ ಮೇಲೆ 1902ರ ಪೂರ್ವದ ಗತಕಾಲದ ಅನೇಕ ಛಾಯಾಚಿತ್ರಗಳು ಮತ್ತು ಸಂತ ಅಲೋಶಿಯಸ್‌ ಕಾಲೇಜಿನಲ್ಲಿ ಆಚರಿಸಲಾದ ಮೊದಲ ಸ್ವಾತಂತ್ರ್ಯೋತ್ಸವ ದಿನದ ಆಚರಣೆಯ ಚಿತ್ರವೂ ಇದೆ. ಅಬಿಸ್ಸಿನಿಯದಿಂದ ಬಂದ ಟಿಪ್ಪು ಸುಲ್ತಾನ್‌ ಕಾಲದ ಬಾಣಗಳು, ಈಟಿ-ಭರ್ಜಿಗಳಿವೆ. ಕಾಲೇಜಿನಲ್ಲಿ ಉಪಯೋಗಿಸಿದ ಪುರಾತನ ಕಾಲದ ಪೀಠೊಪಕರಣಗಳಿವೆ. 1880ರಲ್ಲಿ ಸಂತ ಅಲೋಶಿಯಸ್‌ ಕಾಲೇಜು ಆರಂಭಗೊಂಡ ವರ್ಷದಲ್ಲಿ ವಿದ್ಯಾರ್ಥಿಗಳು ಉಪಯೋಗಿಸಿದ್ದ ಚಿತ್ರ; ಕೊರೆದ, ಗೀಚು ತುಂಬಿದ ಡೆಸ್ಕಾವೊಂದನ್ನು ಕೂಡ ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

6 ದಶ ಲಕ್ಷ ವರ್ಷಗಳಷ್ಟು ಹಳೆಯ ಕೊಲೊರೆಡೊ ನದಿ ಬಳಿಯ ಗ್ರ್ಯಾಂಡ್ ಕ್ರಾಸ್‌ನಲ್ಲಿ ಸಿಕ್ಕಿದ ಕಲ್ಲು, 1.6 ದಶ ಲಕ್ಷ ವರ್ಷ ಹಳೆಯ ನವ ಶಿಲಾ ಯುಗದ ಕೊಡಲಿ (ಇವುಗಳನ್ನು ಜರ್ಮನಿಯಿಂದ ತರಿಸಲಾಗಿದೆ) ಇಲ್ಲಿದೆ. 

ವಸ್ತು ಸಂಗ್ರಹಾಲಯ
ಇಟೆಲಿಯ ಜೆಸ್ವಿಟ್‌ ಫಾದರ್‌ ಚಿಯಾಪಿ ಅವರು 1913ರಲ್ಲಿ ಈ ಮ್ಯೂಸಿಯಂನ್ನು ಆರಂಭಿಸಿದ್ದರು. ಖನಿಜಗಳು, ಗಿಡಮೂಲಿಕೆಗಳು ಮತ್ತು ರೋಮನ್‌ ನಾಣ್ಯಗಳ ಸಂಗ್ರಹ ಮತ್ತು ಇಟೆಲಿಯ ಕೊಲೆಜಿಒ ವಿಏಟ ಸಂಸ್ಥೆ ಉಡುಗೊರೆಯಾಗಿ ನೀಡಿದ ವಸ್ತುಗಳೊಂದಿಗೆ ಈ ಮ್ಯೂಸಿಯಂ ಪ್ರಾರಂಭಗೊಂಡಿತ್ತು, ಇದೀಗ ಮ್ಯೂಸಿಯಂ ಕೆಂಪುಕಟ್ಟಡದಿಂದ ಚಾಪೆಲ್‌ನ ಸಮೀಪ ಇರುವ ಸ್ಥಳಕ್ಕೆ ಸ್ಥಳಾಂತರಗೊಂಡು ನವೀಕರಣಗೊಂಡಿದೆ. ಕಟ್ಟಡ ಒಳ ವಿನ್ಯಾಸಕಾರ ವಿಲಿಯಂ ಜೇಮ್ಸ್‌ ಮತ್ತು ಪುರಾತಣ್ತೀಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರುವ ಮತ್ತು ವಸ್ತುಸಂಗ್ರಹಾಲಯದಲ್ಲಿ ಡಿಪ್ಲೊಮಾ ಪದವೀಧರರಾಗಿರುವ ಕವಿತಾ ಅವರು ಈ ವಸ್ತುಸಂಗ್ರಹಾಲಯದ ಪ್ರದರ್ಶನ ವಿನ್ಯಾಸವನ್ನು ರೂಪುಗೊಳಿಸಿದ್ದಾರೆ.

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next