ಬೆಂಗಳೂರಲ್ಲಿ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಹಲವು ಶಾಲೆ, ಕಾಲೇಜುಗಳು ಶುರುವಾಗಿವೆ. ನಟನೆ ಶಾಲೆ ಇರಬಹುದು, ನೃತ್ಯ ಶಾಲೆಯಾಗಿರಬಹುದು, ಸಾಹಸ, ತಬಲಾ, ಸಂಕಲನ ಹೀಗೆ ಹಲವು ವಿಭಾಗಕ್ಕೆ ಸಂಬಂಧಿಸಿದ ಶಾಲೆಗಳಿವೆ. ಸಂಗೀತ ಶಾಲೆಗಳೂ ಇವೆ. ಆದರೆ, ಅಕಾಡೆಮಿಕ್ ಆಗಿ ಒಂದೊಳ್ಳೆಯ ಫಿಲ್ಮ್ಮ್ಯೂಸಿಕ್ ಕಾಲೇಜ್ ಅಗತ್ಯವಿತ್ತು. ಅಂಥದ್ದೊಂದು ಸಂಗೀತಕ್ಕೆ ಸಂಬಂಧಿಸಿದ ಕಾಲೇಜ್‌ವೊಂದನ್ನು ಸಂಗೀತ ನಿರ್ದೇಶಕ ಸ್ಟೀಫನ್ ಪ್ರಯೋಗ್ ಅವರು ಮಾಡಿದ್ದಾರೆ.
ಹೌದು, ಕನ್ನಡದಲ್ಲಿ ಹಲವು ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿರುವ ಸ್ಟೀಫನ್ ಪ್ರಯೋಗ್ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಸ್ಟೀಫನ್ ಕಾಲೇಜ್ ಆಫ್ ಮ್ಯೂಸಿಕ್ ಎಂಬ ಕಾಲೇಜ್‌ವೊಂದನ್ನು ಕಳೆದ ಜೂನ್‌ನಲ್ಲಿ ಶುರುಮಾಡಿದ್ದಾರೆ. ಚೆನ್ನೈನಲ್ಲಿ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರ ಕಾಲೇಜ್ ಬಿಟ್ಟರೆ, ಬೆಂಗಳೂರಲ್ಲಿ ಮ್ಯೂಸಿಕಲಿ, ಒಂದೊಳ್ಳೆಯ ಕಾಲೇಜ್ ಅಂತ ಗುರುತಿಸಿಕೊಂಡಿರುವ ಹೆಗ್ಗಳಿಕೆ ಇದಕ್ಕಿದೆ.
ಇಲ್ಲಿ ಸುಮ್ಮನೆ ಸಂಗೀತ ಕಲಿಸಿಕೊಡುವುದಿಲ್ಲ. ಯಾಕೆಂದರೆ, ಎಲ್ಲವೂ ಪಫೆìಕ್ಟ್ ಆಗಿರಬೇಕು ಎಂಬ ಉದ್ದೇಶದಿಂದ ಫೌಂಡೇಷನ್ ಕೋರ್ಸಸ್ ಇಟ್ಟುಕೊಂಡು ಶುರುಮಾಡಿರುವ ಮ್ಯೂಸಿಕ್ ಕಾಲೇಜ್ ಇದು. ತಾನೊಬ್ಬ ಪರಿಪೂರ್ಣ ಸಂಗೀತದ ಪ್ರಾಕಾರಗಳನ್ನು ಕಲಿಯಬೇಕು, ಒಳ್ಳೆಯ ಮ್ಯೂಸಿಷಿಯನ್ ಅಂತ ಗುರುತಿಸಿಕೊಳ್ಳಬೇಕು ಎಂದು ಇಚ್ಛಿಸುವವರಿಗೆ ಇಲ್ಲಿ ಒಳ್ಳೆಯ ಕೋರ್ಸಸ್‌ಗಳಿವೆ. ಸಂಗೀತದಲ್ಲಿ ಹಲವು ವಿಧಗಳಿವೆ. ಇಲ್ಲೂ ಸಹ ವೆಸ್ಟ್ರನ್ ಮ್ಯೂಸಿಕ್ ಮತ್ತು ಥೇರಿ ಹೇಳಿಕೊಡಲಾಗುವುದು.
ಕೀ ಬೋರ್ಡ್, ಗಿಟಾರ್, ಪಿಯಾನೋ ಇವುಗಳ ಸಿಲಬಸ್ ಕೂಡ ಇದೆ. ಅವುಗಳ ಕೋರ್ಸ್ ಮುಗಿದ ಮೇಲೆ ಎಕ್ಸಾಂ ಕೂಡ ನಡೆಸಲಾಗುವುದು. ಅದಷ್ಟೇ ಅಲ್ಲ, ತಾನು ಹಿನ್ನೆಲೆ ಗಾಯಕ ಆಗಬೇಕೆಂದರೂ, ಅದಕ್ಕೆ ಆರು ತಿಂಗಳ ಕೋರ್ಸ್ ಕೂಡ ಇದೆ. ಇದರ ಜತೆಗೆ ಸ್ಟೀಫನ್ ತಮ್ಮ “ಸ್ಟೀಫನ್ ಕಾಲೇಜ್ ಆಫ್ ಮ್ಯೂಸಿಕ್’ ಕಾಲೇಜ್‌ನಲ್ಲಿ ಪ್ರೊಡಕ್ಷನ್ ಹೌಸ್ ಕೂಡ ಮಾಡಿದ್ದಾರೆ. ಅದರಡಿ, ಸಿನಿಮಾಗಳು, ಧಾರಾವಾಹಿಗಳು, ಕಿರುಚಿತ್ರಗಳು ಹೀಗೆ ಇನ್ನಿತರೆ ಸಾಕ್ಷ್ಯಚಿತ್ರಗಳಿಗೂ ಇಲ್ಲಿ ಹಿನ್ನೆಲೆ ಸಂಗೀತ ಮಾಡಿಕೊಡುವ ಕೆಲಸ ಮಾಡುತ್ತಿದ್ದಾರೆ.
ಅದೊಂದು ಕಂಪ್ಲೀಟ್ ಹೋಮ್ ಸ್ಟುಡಿಯೋವಾಗಿದ್ದು, ಮ್ಯೂಸಿಕ್ಸ್‌ಗೆ ಸಂಬಂಧಿಸಿದ ಎಲ್ಲಾ ಕೆಲಸಗಳೂ ಇಲ್ಲಿ ನಡೆಯಲಿವೆ. ಮುಖ್ಯವಾಗಿ ಸಂಗೀತಕ್ಕೆ ಅರೇಂಜ್‌ಮೆಂಟ್ಸ್ ಕೆಲಸಗಳು ಇಲ್ಲಿ ನಡೆಯಲಿವೆ. ಸದ್ಯಕ್ಕೆ ಈ ಕಾಲೇಜಿನಲ್ಲಿ 80 ವಿದ್ಯಾರ್ಥಿಗಳು ಸಂಗೀತ ಕಲಿಯುತ್ತಿದ್ದಾರೆ. ಒಂದೊಂದು ಕೋರ್ಸ್‌ಗೆ ತಕ್ಕಂತೆ ಆಯಾ ತರಗತಿಗಳು ನಡೆಯುತ್ತವೆ. ಗಿಟಾರ್, ಕೀ ಬೋರ್ಡ್, ಪಿಯಾನೋ ಇವುಗಳಿಗೆ ವಾರಕ್ಕೊಂದು ತರಗತಿ ಇದ್ದು, ಪ್ರಯೋಗದ ಜತೆಗೆ ಪಾಠಗಳೂ ನಡೆಯುತ್ತವೆ. ಇನ್ನು, ಅಕಾಡೆಮಿ ಕೋರ್ಸಸ್‌ಗಳಿಗೆ ವಾರಕ್ಕೆ ಎರಡು ತರಗತಿಗಳು ನಡೆಯಲಿವೆ.