ನವದೆಹಲಿ:ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಮ್ಮು-ಕಾಶ್ಮೀರದಲ್ಲಿ ಅಭಿವೃದ್ಧಿಯ ನೂತನ ಶಕೆ ಆರಂಭವಾಗಲು ಕಾರಣೀಭೂತರಾಗಿದ್ದಾರೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್ ಎಚ್ ಆರ್ ಸಿ)ದ ಮುಖ್ಯಸ್ಥ, ಸುಪ್ರೀಂಕೋರ್ಟ್ ಮಾಜಿ ಜಡ್ಜ್ ಅರುಣ್ ಮಿಶ್ರಾ ಅವರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ರಾಷ್ಟ್ರ ರಾಜಕಾರಣದಲ್ಲೇ ಮುಂದುವರೆಯುವೆ : ಸಂಸದ ಬಿ.ವೈ.ರಾಘವೇಂದ್ರ
ಎಮ್ ಎಚ್ ಆರ್ ಸಿಯ 28ನೇ ಸ್ಥಾಪಕ ವರ್ಷಾಚರಣೆ ಸಮಾರಂಭ ಉದ್ದೇಶಿಸಿ ಮಾತನಾಡಿದ ಮಿಶ್ರಾ,ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಅಭಿವೃದ್ಧಿ ಶಕೆ ಮತ್ತು ಶಾಂತಿ ನೆಲೆಸಲು ಶಾ ಅವರ ಅವಿರತ ಪ್ರಯತ್ನವನ್ನು ಶ್ಲಾಘಿಸಿದರು.
ಜಮ್ಮು-ಕಾಶ್ಮೀರದಲ್ಲಿ ನೂತನ ಶಕೆ ಆರಂಭವಾಗಲು ಕಾರಣಕರ್ತರಾದವರು ನೀವು ಮಿಸ್ಟರ್ ಶಾ ಎಂದು ಮಿಶ್ರಾ ಅವರು ಹೇಳಿದರು. ಜಮ್ಮು-ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಭಾರತದ ಮೇಲೆ ಸುಳ್ಳು ಆರೋಪ ಹೊರಿಸಲಾಗುತ್ತಿತ್ತು. ಇದನ್ನು ನಾವು ಖಂಡಿಸಲೇಬೇಕಾಗಿತ್ತು ಎಂದು ಮಿಶ್ರಾ ಹೇಳಿದರು.
ಭಾರತ ಪ್ರತಿಯೊಂದು ಧರ್ಮದ ಸಾಮರಸ್ಯ ಕಾಪಾಡುತ್ತದೆ. ಈ ದೇಶದಲ್ಲಿ ಆಯಾ ಧರ್ಮದವರು ದೇವಸ್ಥಾನ ಅಥವಾ ಮಸೀದಿ ಅಥವಾ ಚರ್ಚ್ ಗಳನ್ನು ನಿರ್ಮಿಸುವ ಅಧಿಕಾರ ಹೊಂದಿದ್ದಾರೆ. ಆದರೆ ಜಗತ್ತಿನ ಹಲವು ದೇಶಗಳಲ್ಲಿ ಇಂತಹ ಸ್ವಾತಂತ್ರ್ಯ ಇಲ್ಲ ಎಂದು ಮಿಶ್ರಾ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.