Advertisement

ನೂತನ ಶಿಕ್ಷಣ ನೀತಿ; ನಿರೀಕ್ಷೆಯಲ್ಲಿ ಭವ್ಯ ಭಾರತದ ಮುನ್ನೋಟ

12:55 AM Aug 15, 2020 | Karthik A |

ಲಾಕ್‌ಡೌನ್‌ ಸಮಯದಲ್ಲಿ ನಾನು ಕೇಳಿರುವ ಒಳ್ಳೆಯ ಸುದ್ದಿ ಎಂದರೆ ಅದು ಹೊಸ ಶಿಕ್ಷಣ ನೀತಿ.

Advertisement

ತುಕ್ಕು ಹಿಡಿದ ಕಬ್ಬಿಣದಂತಾಗಿದ್ದ ಶಿಕ್ಷಣ ನೀತಿಗೆ ಹೊಸರೂಪ ದೊರೆತಂತಾಗಿದೆ.

ಶತಮಾನಗಳಿಂದ ಶಿಕ್ಷಣದ ರೀತಿಯಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದ ನಮಗೆ ಒಂದು ಪರಿಹಾರ ಸಿಕ್ಕಂತಾಗಿದೆ.

ಈ ಬದಲಾದ ಶಿಕ್ಷಣ ನೀತಿ ಹಲವಾರು ವಿಶೇಷಗಳನ್ನು ಒಳಗೊಂಡಿದೆ. ಹೊಸ ಶಿಕ್ಷಣ ನೀತಿಯಲ್ಲಿ ಭವ್ಯ ಭಾರತದ ಮುನ್ನೋಟ ಕಾಣಿಸುತ್ತಿದೆ.

ಈಗಿನ ಶಿಕ್ಷಣ ನೀತಿ ಹೇಗಿದೆ ಎಂದರೆ ಒಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಸಾಮರ್ಥ್ಯವನ್ನು ಆತ ಗಳಿಸಿದ ಅಂಕಗಳ ಆಧಾರದಲ್ಲಿ ನಿರ್ಧರಿಸುವುದು. ಇದು ಎಷ್ಟು ಸರಿ? ಆತ ಬೇರೆ ವಿಷಯದಲ್ಲಿ ನಿಪುಣನಿರಬಹುದು. ವಿದ್ಯಾರ್ಥಿಯ ಅಭಿರುಚಿಗೆ ತಕ್ಕಂತೆ ವಿಷಯಗಳನ್ನು ಆಯ್ದುಕೊಳ್ಳುವ ಅವಕಾಶ ಕಲ್ಪಿಸಿಕೊಡಬೇಕು. ಕೇವಲ ಪುಸ್ತಕ ಓದಿದಾಕ್ಷಣ ಆತ ಒಂದು ವಿಷಯದಲ್ಲಿ ಸಂಪೂರ್ಣ ಜ್ಞಾನ ಹೊಂದಲು ಸಾಧ್ಯವಿಲ್ಲ. ಒಂದು ವಿಷಯವನ್ನು ಪ್ರಾಯೋಗಿಕವಾಗಿ ಕಲಿತಾಗ ಮಾತ್ರ ಅದರಲ್ಲಿ ಸಂಪೂರ್ಣ ಜ್ಞಾನ ಹೊಂದಲು ಸಾಧ್ಯ.

Advertisement

ಇಂತಹ ಬದಲಾವಣೆಯನ್ನು ಹೊಸ ಶಿಕ್ಷಣ ನೀತಿಯಲ್ಲಿ ಕಾಣಬಹುದು. ಅಲ್ಲದೇ ಇನ್ನೂ ಮುಖ್ಯವಾದ ಬದಲಾವಣೆಗಳೆಂದರೆ 1ರಿಂದ 5ನೇ ತರಗತಿವರೆಗೆ ಪ್ರಾಥಮಿಕ, 6ರಿಂದ 8ನೇ ತರಗತಿವರೆಗೆ ಮಾಧ್ಯಮಿಕ ಹಾಗೂ 9ರಿಂದ 11ನೇ ತರಗತಿವರೆಗೆ ಪ್ರೌಢ ಶಿಕ್ಷಣ ನೀಡಲಾಗುತ್ತದೆ. ಪ್ರೌಢ ಶಿಕ್ಷಣದ ಸಮಯದಲ್ಲಿ ವಿದ್ಯಾರ್ಥಿಗೆ ತನ್ನಿಷ್ಟದ ವಿಷಯದ ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ.

ಇಲ್ಲಿ ಪದವಿಪೂರ್ವ ಶಿಕ್ಷಣ, ಅಂದರೆ ಪಿಯುಸಿಯನ್ನು ಸಂಪೂರ್ಣ ತೆಗೆದು ಹಾಕಲಾಗಿದೆ. ಪದವಿ ಶಿಕ್ಷಣವನ್ನು 3 ವರ್ಷಗಳ ಬದಲಾಗಿ 4 ವರ್ಷಗಳಿಗೆ ಮಾಡಲಾಗಿದೆ. ಪದವಿ ಅವಧಿಯಲ್ಲಿ ಯಾವುದೇ ವರ್ಷ ಕೂಡ ವಿದ್ಯಾರ್ಥಿ ತನ್ನ ಶಿಕ್ಷಣವನ್ನು ಕೈಬಿಟ್ಟರೆ ಆ ವರ್ಷದ ಪದವಿ ಪ್ರಮಾಣ ಪತ್ರವನ್ನು ನೀಡಲಾಗುವುದು. ಇದು ಒಬ್ಬ ವಿದ್ಯಾರ್ಥಿಗೆ ತುಂಬಾ ಅನುಕೂಲವಾಗುವಂತಹ ವಿಷಯ.

ನಮ್ಮ ವಿದ್ಯಾರ್ಥಿಗಳು ಈಗಿರುವ ಶಿಕ್ಷಣ ನೀತಿಯಲ್ಲಿ ಪ್ರಾಯೋಗಿಕ ಜ್ಞಾನವಿಲ್ಲದೆ ಪದವಿ ಪಡೆಯುತ್ತಿದ್ದಾರೆ. ಹೀಗಾಗಿ ಆವರಲ್ಲಿ ಕೌಶಲದ ಕೊರತೆ ಉಂಟಾಗುತ್ತದೆ. ಕೌಶಲದ ಕೊರತೆ ಉಂಟಾದಾಗ ಕಂಪೆನಿಗಳು ಉದ್ಯೋಗ ನೀಡಲು ಮುಂದೆ ಬರುವುದಿಲ್ಲ. ಕೇವಲ ಅಂಕಗಳಿಗಾಗಿ ಪಡೆಯುವ ಶಿಕ್ಷಣದಿಂದ ಜ್ಞಾನ ಪಡೆದುಕೊಳ್ಳಲು ಸಾಧ್ಯವಿಲ್ಲ. ಉತ್ತಮ ಜ್ಞಾನವನ್ನು ಒದಗಿಸುವ ಶಿಕ್ಷಣದ ಆವಶ್ಯಕತೆ ನಮ್ಮ ಯುವ ಸಮುದಾಯಕ್ಕೆ ಇದೆ. ಸ್ವಾವಲಂಬಿಯಾಗಿ ಬದುಕುವುದನ್ನು ಹೇಳಿಕೊಡುವ, ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಶಿಕ್ಷಣ ನಮ್ಮ ವಿದ್ಯಾರ್ಥಿಗಳಿಗೆ ಅಗತ್ಯವಿದೆ.

ಕೌಶಲಾಧಾರಿತ ಶಿಕ್ಷಣ ನಮ್ಮ ಯುವ ಸಮುದಾಯಕ್ಕೆ ಸಿಕ್ಕಾಗ ಭವ್ಯ ಭಾರತದ ನಿರ್ಮಾಣದ ಕನಸು ಬೇಗ ನನಸಾಗುತ್ತದೆ. ನಿರುದ್ಯೋಗದ ಸಮಸ್ಯೆ ನಿವಾರಿಸುವತ್ತಲೂ ಇದೊಂದು ಪ್ರಮುಖ ಹೆಜ್ಜೆಯಾಗಿದೆ. ಉದ್ಯೋಗಕ್ಕಾಗಿ ಅರಸುವ ವಿದ್ಯಾರ್ಥಿಗಳ ಬದಲಾಗಿ, ಭವಿಷ್ಯದಲ್ಲಿ ಸ್ವಂತ ಉದ್ಯೋಗ ಮಾಡುವವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು. ಹೀಗಾದಾಗ ಮಾತ್ರ ನಾವು ಪ್ರಧಾನಿಯ ಕನಸಿನ ಆತ್ಮನಿರ್ಭರ ಭಾರತ ಕಟ್ಟಲು ಸಾಧ್ಯ.

ನಾಲ್ಕು ಗೋಡೆಗಳ ಮಧ್ಯೆ ಕಲಿಸುವುದು ಶಿಕ್ಷಣವಲ್ಲ. ಯಾವಾಗ ಶಿಕ್ಷಣ ಒಬ್ಬ ವಿದ್ಯಾರ್ಥಿಯ ಭಯವನ್ನು ಹೋಗಲಾಡಿಸುತ್ತದೋ, ಯಾವಾಗ ಶಿಕ್ಷಣ ಒಬ್ಬ ವಿದ್ಯಾರ್ಥಿಯ ಮನೋಬಲವನ್ನು ಹೆಚ್ಚಿಸುತ್ತದೋ, ಯಾವಾಗ ಶಿಕ್ಷಣವು ವಿದ್ಯಾರ್ಥಿಯ ಅಭಿರುಚಿಗೆ ತಕ್ಕಂತೆ ಇರುತ್ತದೆಯೋ, ಯಾವಾಗ ಶಿಕ್ಷಣ ಒಬ್ಬ ವಿದ್ಯಾರ್ಥಿಯ ಕಲಿಯುವಿಕೆಯ ಆಸಕ್ತಿಯನ್ನು ಹೆಚ್ಚಿಸುತ್ತದೆಯೋ, ಆಗ ಮಾತ್ರ ಶಿಕ್ಷಣಕ್ಕೆ ನೈಜ ಅರ್ಥ ಕಲ್ಪಿಸಲು ಸಾಧ್ಯ. ಈ ರೀತಿಯಾದ ವ್ಯವಸ್ಥೆಯನ್ನು ನಮ್ಮ ನೂತನ ಶಿಕ್ಷಣ ನೀತಿಯಲ್ಲಿ ಕಾಣಬಹುದು.

 ರಕ್ಷಿತ್‌ ಶೆಟ್ಟಿ, ಭಂಡಾರ್ಕಾರ್ಸ್‌ ಕಾಲೇಜು, ಕುಂದಾಪುರ

 

Advertisement

Udayavani is now on Telegram. Click here to join our channel and stay updated with the latest news.

Next