Advertisement

ಮಂಗಳೂರಿನಿಂದ ಹೊಸದಿಲ್ಲಿ ಮತ್ತಷ್ಟು ದೂರ!

01:33 AM Oct 13, 2021 | Team Udayavani |

ಮಂಗಳೂರು: ರಾಜ್ಯದ ಎರಡನೇ ಅಂತಾರಾಷ್ಟ್ರೀಯ ದರ್ಜೆಯ ವಿಮಾನ ನಿಲ್ದಾಣವನ್ನು ಹೊಂದಿರುವ ಮಂಗಳೂರಿನಿಂದ ರಾಷ್ಟ್ರದ ರಾಜಧಾನಿಗೆ ನೇರ ವಿಮಾನವೇ ಇಲ್ಲ. ಹೊಸದಿಲ್ಲಿಗೆ ತೆರಳಬೇಕಾದರೆ ದುಬಾರಿ ಹಣ ಕೊಟ್ಟು ಸುತ್ತುಬಳಸಿ ಹೋಗುವುದು ಅನಿವಾರ್ಯವಾಗಿದೆ.
ಕೋವಿಡ್‌ಮೊದಲ ಅಲೆಯ ಸಂದರ್ಭ ದೇಶದಲ್ಲಿ ಎಲ್ಲ ವಿಮಾನಗಳ ಸಂಚಾರ ರದ್ದಾಗಿತ್ತು. ನಾಲ್ಕು ತಿಂಗಳೊಳಗೆ ಮಂಗಳೂರಿನಿಂದ ಮುಂಬಯಿ, ಬೆಂಗಳೂರು, ಹೈದರಾಬಾದ್‌ ಸೇರಿದಂತೆ ಉಳಿದ ಕಡೆಗಳಿಗೆ ಹಂತಹಂತವಾಗಿ ವಿಮಾನ ಸಂಚಾರ ಸಹಜ ಸ್ಥಿತಿಗೆ ಬಂದಿದ್ದರೂ ಹೊಸದಿಲ್ಲಿಗೆ ಹಾರಾಡಲೇ ಇಲ್ಲ.

Advertisement

ಹಿಂದೆ ಮಂಗಳೂರು-ಹೊಸದಿಲ್ಲಿ ನಡುವೆ ಏರ್‌ಇಂಡಿಯಾ ಸೇವೆ ಇತ್ತು. ನಾಲ್ಕು ವರ್ಷಗಳ ಹಿಂದೆ “ನಷ್ಟ’ದ ಸಬೂಬು ನೀಡಿ ಸ್ಥಗಿತ ಗೊಳಿಸಲಾಗಿತ್ತು. ಜೆಟ್‌ ಏರ್‌ವೇಸ್‌ ದೇಶಾದ್ಯಂತ ಸಂಚಾರ ಸ್ಥಗಿತಗೊಳಿಸಿದ ಕಾರಣದಿಂದ ಹೊಸದಿಲ್ಲಿ ವಿಮಾನವೂ ಇಲ್ಲ ವಾಯಿತು. ಇಂಡಿಗೋ, ಸ್ಪೈಸ್‌ಜೆಟ್‌ ಸೇವೆ ಇತ್ತಾದರೂ ತಡರಾತ್ರಿಯ ಕಾರಣ ಪ್ರಯಾಣಿಕ ಸ್ನೇಹಿ ಆಗಲಿಲ್ಲ. ಆದ್ದರಿಂದ “ನೇರ ವಿಮಾನ ನಷ್ಟ’ ಎಂದು ಬಿಂಬಿಸಲಾಯಿತು. ಅದೇ ವೇಳೆಗೆ ಕೊರೊನಾ ಬಂದುಒಟ್ಟು ವಿಮಾನ ಸಂಚಾರವೇ ಸ್ಥಗಿತವಾಯಿತು.

ಶೈಕ್ಷಣಿಕವಾಗಿ ಗುರುತಿಸಿಕೊಂಡಿರುವ ಕರಾವಳಿ ಭಾಗಕ್ಕೆ ಹೊಸದಿಲ್ಲಿ ಮೂಲಕ ವಿದ್ಯಾರ್ಥಿಗಳು ಬರುತ್ತಾರೆ. ಜತೆಗೆ ಜಮ್ಮುಕಾಶ್ಮೀರ ಸೇರಿದಂತೆ ಉತ್ತರ ಭಾರತದ ಹಲವು ಕಡೆಗಳಿಗೆ ಕರಾವಳಿ ಭಾಗದವರು ತೆರಳಲು ಹೊಸದಿಲ್ಲಿಯನ್ನು ಅವಲಂಬಿಸಿದ್ದಾರೆ. ಜತೆಗೆ ಅಂಚೆ ಇಲಾಖೆ ಹಾಗೂ ಇತರ ಕೆಲವು ಕಾರ್ಗೊ ಕೂಡ ನೇರ ವಿಮಾನದ ಮೂಲಕ ತೆರಳುತ್ತಿತ್ತು. ಈಗ ಅವೆಲ್ಲವೂ ಸುತ್ತುಬಳಸಿ ಹೋಗಬೇಕು. ಹೊಸದಿಲ್ಲಿ ವಿಮಾನ ಸಂಚರಿಸುವ ಸಮಯ ಪ್ರತೀ ದಿನ ಮಂಗಳೂರಿನಿಂದ 150ಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದರು.

ಈ ಬಗ್ಗೆ ನಿಲ್ದಾಣದ ಅಧಿಕಾರಿಗಳನ್ನು ವಿಚಾರಿಸಿದರೆ “ವಿಮಾನ ಸೇವೆ ಆರಂಭ ವಿಮಾನಯಾನ ಸಂಸ್ಥೆಗಳ ಕೆಲಸ’ ಎನ್ನುತ್ತಾರೆ. ವಿಮಾನ ಸಂಸ್ಥೆಗಳ ಸ್ಥಳೀಯ ಅಧಿಕಾರಿ ಗಳನ್ನು ಕೇಳಿದರೆ “ಅದು ಕೇಂದ್ರ ಕಚೇರಿಯಿಂದ ನಿರ್ಧಾರ ವಾಗಬೇಕಿದೆ’ ಎನ್ನುತ್ತಾರೆ.

ಇದನ್ನೂ ಓದಿ:ನಮ್ಮ ಕೆಲಸ ಗುರುತಿಸಿ ಜೆಡಿಎಸ್‌ಗೆ ಮತ ಹಾಕುತ್ತಾರೆ : ಮಾಜಿ ಪ್ರಧಾನಿ ದೇವೆಗೌಡ

Advertisement

ಅಧಿಕ ವೆಚ್ಚ ; ಸಮಯ ವ್ಯರ್ಥ!
ಮಂಗಳೂರಿನಿಂದ ನೇರವಿಮಾನವಿಲ್ಲದ್ದರಿಂದ ಈಗ ಹೊಸದಿಲ್ಲಿಗೆ ಬೆಂಗಳೂರು ಅಥವಾ ಮುಂಬಯಿ ಮೂಲಕ ಪ್ರಯಾಣಿಸಬೇಕಾಗಿದೆ. ಮಂಗಳೂರಿನಿಂದ ಹೊಸದಿಲ್ಲಿಗೆ ಟಿಕೆಟ್‌ ದರ ಕಳೆದ ವರ್ಷ ಸಾಮಾನ್ಯವಾಗಿ 7 ಸಾವಿರ ರೂ. ಇತ್ತು. ಈಗ ಮಂಗಳೂರಿನಿಂದ ಬೆಂಗಳೂರಿಗೆ ಅಂದಾಜು 4 ಸಾವಿರ ರೂ. ತೆತ್ತು, ಹೊಸದಿಲ್ಲಿಗೆ ಸುಮಾರು 6,500 ರೂ. ವ್ಯಯಿಸಬೇಕು. ಜತೆಗೆ ನೇರ ವಿಮಾನ ಮಂಗಳೂರಿನಿಂದ 2.30 ಗಂಟೆಯೊಳಗೆ ಹೊಸದಿಲ್ಲಿ ತಲುಪಿದರೆ, ಈಗ ಸುಮಾರು 6ರಿಂದ 8 ಗಂಟೆ ವ್ಯಯಿಸಬೇಕಾಗಿದೆ. ಹೀಗಾಗಿ ಹಿಂದೆ ಹೊಸದಿಲ್ಲಿಯಲ್ಲಿ ಮಧ್ಯಾಹ್ನ ಮೀಟಿಂಗ್‌ ಇರುತ್ತಿದ್ದರೆ ಬೆಳಗ್ಗಿನ ವಿಮಾನದಲ್ಲಿ ಹೊರಟು ಸಂಜೆಯ ವಿಮಾನದಲ್ಲಿ ವಾಪಸಾಗಲು ಸಾಧ್ಯವಿತ್ತು. ಈಗ ಎರಡು ದಿನ ಬೇಕು!

ಹೇಳಿಕೆಯಲ್ಲೇ ಉಳಿದ “ಗೋ ಏರ್‌’, “ವಿಸ್ತಾರ’
ಈ ಮಧ್ಯೆ “ಗೋ ಏರ್‌’ ವಿಮಾನ ಹೊಸದಿಲ್ಲಿ ಸಂಚಾರದ ಬಗ್ಗೆ ಹೇಳಿಕೆ ನೀಡಿದೆಯಾದರೂ ಸಂಚಾರ ಆರಂಭಿಸಿಲ್ಲ. “ವಿಸ್ತಾರ’ ವಿಮಾನ ಆಗಮಿಸುವಬಗ್ಗೆ ಮಾತುಕತೆ ನಡೆಯುತ್ತಿದೆಯೇ ವಿನಾ ಅಂತಿಮವಾಗಿಲ್ಲ.

ಕೋವಿಡ್‌ ಕಾರಣ ಸ್ಥಗಿತ ವಾಗಿದ್ದ ಮಂಗಳೂರು- ಹೊಸದಿಲ್ಲಿ ನೇರ ವಿಮಾನ ಸೇವೆ ಯನ್ನು ಪುನರಾ ರಂಭಿಸುವ ನಿಟ್ಟಿನಲ್ಲಿ ಸಂಬಂಧ ಪಟ್ಟವರ ಜತೆಗೆ ಚರ್ಚಿಸಿ ಕ್ರಮ ಕೈಗೊಳ್ಳ ಲಾಗುವುದು.
– ನಳಿನ್‌ ಕುಮಾರ್‌ ಕಟೀಲು, ದ.ಕ. ಸಂಸದ

ಹೊಸದಿಲ್ಲಿಗೆ ನೇರವಿಮಾನವಿಲ್ಲದೆ ಕರಾವಳಿಯಿಂದ ತೆರಳು ವವರಿಗೆ ಸಮಸ್ಯೆ ಆಗುತ್ತಿದೆ. ಸೇವೆ ಆರಂಭಿಸುವಂತೆ ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ, ಜನಪ್ರತಿನಿಧಿಗಳಿಗೆ ಹಾಗೂ ವಿಮಾನಯಾನ ಸಂಸ್ಥೆಗಳಿಗೆ ಮನವಿ ಮಾಡಲಾಗುವುದು.
– ಶಶಿಧರ ಪೈ ಮಾರೂರು, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next