ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ವಿಧಾನಸಭಾ ಚುನಾವಣೆಯ ಕಾವು ಹೆಚ್ಚಾಗಿದೆ. ಈ ಮಧ್ಯೆ ಬಿಜೆಪಿ ತನ್ನ ಹತ್ತು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
ಸೋಮವಾರ ತಡರಾತ್ರಿ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಯುವ ಸುನೀಲ್ ಯಾದವ್ ಗೆ ಟಿಕೆಟ್ ನೀಡಲಾಗಿದೆ.
ಹೊಸದಿಲ್ಲಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಯಾರನ್ನು ಬಿಜೆಪಿ ಕಣಕ್ಕಿಳಿಸುತ್ತದೆ ಎನ್ನುವುದು ಭಾರಿ ನಿರೀಕ್ಷೆ ಮೂಡಿಸಿತ್ತು. ಈ ನಿರೀಕ್ಷೆಗಳಿಗೆ ಬಿಜೆಪಿ ಉತ್ತರ ನೀಡಿದ್ದು, ದಿಲ್ಲಿ ಘಟಕದ ಯುವ ಮೋರ್ಚಾದ ಅಧ್ಯಕ್ಷ ಸುನೀಲ್ ಯಾದವ್ ಗೆ ಟಿಕೆಟ್ ನೀಡಿದೆ.
ಬಿಜೆಪಿ ತನ್ನ ಎರಡನೇ ಪಟ್ಟಿಯಲ್ಲಿ 10 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಇದರಲ್ಲಿ ಮತ್ತೊಂದು ಪ್ರಮುಖ ಹೆಸರೆಂದರೆ ತಾಜಿಂದರ್ ಪಾಲ್ ಬಗ್ಗ. ಹರಿನಗರ ಕ್ಷೇತ್ರದಿಂದ ತೇಜಿಂದರ್ ಪಾಲ್ ಬಗ್ಗ ಬಿಜೆಪಿ ಟಿಕೆಟ್ ನಿಂದ ಸ್ಪರ್ಧಿಸಲಿದ್ದಾರೆ. ಬಿಜೆಪಿ ವಕ್ತಾರರಾಗಿರುವ ತೇಜಿಂದರ್ ಪಾಲ್ ಬಗ್ಗ ಅವರು ಟ್ವಿಟ್ಟರ್ ನಲ್ಲಿ ಸಂತಸ ವ್ಯಕ್ತಪಡಿಸಿ “ಬಗ್ಗ ಬಗ್ಗ ಹರ್ ಜಗಹ್” ಎಂಬ ರಾಪ್ ಹಾಡೊಂದನ್ನು ಹಂಚಿಕೊಂಡಿದ್ದಾರೆ.
70 ಸದಸ್ಯಬಲದ ದೆಹಲಿ ವಿಧಾನಸಭೆಗೆ ಫೆಬ್ರವರಿ 8ರಂದು ಚುನಾವಣೆ ನಡೆಯಲಿದೆ. ಫೆಬ್ರವರಿ 11ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.