Advertisement

ನೂತನ ರಥ ನಿರ್ಮಾಣ: ಯುಗಾದಿಯಂದು ಲೋಕಾರ್ಪಣೆ

02:53 PM Mar 31, 2022 | Team Udayavani |

ಕಂಪ್ಲಿ: ರಾಮಸಾಗರ ಗ್ರಾಮದ ಶ್ರೀ ಉಮಾಮಹೇಶ್ವರ (ಶ್ರೀ ನಗರೇಶ್ವರ) ಸ್ವಾಮಿಗೆ ಗ್ರಾಮದ ಸಕಲ ಸದ್ಭಕ್ತರು, ಗಣ್ಯರು, ದಾನಿಗಳ ನೆರವಿನಿಂದ ಆಕರ್ಷಕ ನೂತನ ರಥವನ್ನು ನಿರ್ಮಾಣ ಮಾಡಿದ್ದು ಹಿಂದೂ ನೂತನ ವರ್ಷವಾದ ಯುಗಾದಿ ಪಾಡ್ಯದಂದು ವಿವಿಧ ಹೋಮ ಹವನಗಳ ನಡೆಸಿ ಲೋಕಾರ್ಪಣೆ ಮಾಡಿ ರಥವನ್ನು ಎಳೆಯಲಿದ್ದಾರೆ.

Advertisement

ಗ್ರಾಮದ ಬಸ್‌ ನಿಲ್ದಾಣದ ಹತ್ತಿರವಿರುವ ಪುರಾತನ ಉಮಾಮಹೇಶ್ವರ (ನಗರೇಶ್ವರ) ಸ್ವಾಮಿಗೆ ಈ ಮೊದಲೇ ಎರಡು ತೇರುಗಳಿದ್ದು, ಅದರಲ್ಲಿ ದೊಡ್ಡ ತೇರು ಶಿಥಿಲಿಗೊಂಡಿದ್ದು, ಕಳೆದ ಹಲವು ವರ್ಷಗಳಿಂದ ಒಂದೇ ತೇರನ್ನು ಎಳೆಯುತ್ತಿದ್ದರು. ಕಳೆದ ವರ್ಷದಿಂದ ನೂತನ ಬೃಹತ್‌ ತೇರನ್ನು ನಿರ್ಮಿಸಲು ತೀರ್ಮಾನಿಸಿ ಉಮಾಮಹೇಶ್ವರ ಸೇವಾ ಟ್ರಸ್ಟ್‌ನ್ನು ರಚಿಸಿಕೊಂಡು ಗ್ರಾಮದ ಮುಖಂಡರಿಂದ, ಸಾರ್ವಜನಿಕರಿಂದ, ದಾನಿಗಳಿಂದ ದೇಣಿಗೆಯನ್ನು ಸಂಗ್ರಹಿಸಿ ಸುಮಾರು 22 ಲಕ್ಷರೂಗಳ ವೆಚ್ಚದಲ್ಲಿ ಇದೀಗ ನೂತನ ರಥವನ್ನು ನಿರ್ಮಿಸಿದ್ದಾರೆ.

ರಥ ಜೋಡಣೆ ಬಹುತೇಕ ಮುಗಿದಿದ್ದು, ಶುಕ್ರವಾರ ಹೋಮಹವನಗಳೊಂದಿಗೆ ರಥದ ಪೂಜೆ ನಡೆಯಲಿದೆ. ಯುಗಾದಿ ಪಾಡ್ಯ ಏ. 1ರಂದು ಬೆಳಗ್ಗೆ ಪುನಃ ವಿವಿಧ ಹೋಮ, ಹವನಗಳನ್ನು ನಡೆಸಿ ಮಡಿ ತೇರನ್ನು ಎಳೆಯಲಿದ್ದಾರೆ. ಸಂಜೆ 5 ಗಂಟೆಗೆ ಜೋಡಿ ಮಹಾರಥೋತ್ಸವ ಜರುಗಲಿದೆ.

ಮಹಾರಥೋತ್ಸವದಲ್ಲಿ ಸಾರ್ವಜನಿಕರು ಹೊಸ ವರ್ಷದ ಅಂಗವಾಗಿ ಹೊಸ ಹೊಸ ಬಟ್ಟೆಗಳನ್ನು ಧರಿಸಿ ಭಾಗವಹಿಸಿ ರಥಕ್ಕೆ ಹೂ, ಹಣ್ಣು, ಉತ್ತತ್ತಿಗಳನ್ನು ಎಸೆದು ಹರಕೆ ತೀರಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next