Advertisement
ಘನ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡುವ, ಅಸಮರ್ಪಕ ನಿರ್ವಹಣೆ ಮಾಡುವ ಸನ್ನಿವೇಶ ನಿರ್ಮಾಣವಾಗಿದೆ. ಸುಂದರ ಪುತ್ತೂರಿಗಾಗಿ ಶಾಶ್ವತ ಪರಿಹಾರ ಬೇಕು. ಈ ನಿಟ್ಟಿನಲ್ಲಿ ಸಮರ್ಪಕ ಬೈಲಾ ಬೇಕಾಗುತ್ತದೆ ಎಂದು ಅಧ್ಯಕ್ಷರು ಹೇಳಿದರು. ಕರಡು ಬೈಲಾವನ್ನು ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ಸಭೆಯ ಮುಂದಿಟ್ಟರು. ಇದು ಅಂತಿಮವಲ್ಲ. ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರೆಲ್ಲ ಸೇರಿಕೊಂಡು ಉಪ ಸಮಿತಿ ರಚಿಸೋಣ. ಆ ಸಮಿತಿ ಸಭೆ ಸೇರಿ ಬೈಲಾ ರಚಿಸೋಣ ಎಂದು ಆಡಳಿತ ಪಕ್ಷದ ಹಿರಿಯ ಸದಸ್ಯ ಎಚ್. ಮಹಮ್ಮದ್ ಆಲಿ ಸಲಹೆ ನೀಡಿದರು.
ಅಧ್ಯಕ್ಷೆ ಜಯಂತಿ ಬಲ್ನಾಡ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಯಿತು. ಉಪಾಧ್ಯಕ್ಷ ವಿಶ್ವನಾಥ ಗೌಡ, ಕಾಂಗ್ರೆಸ್ ಸದಸ್ಯರಾದ ಮಹಮ್ಮದ್ ಆಲಿ, ಜಯಲಕ್ಷ್ಮೀ ಸುರೇಶ್, ಝೋಹರಾ ನಿಸಾರ್, ಸ್ವರ್ಣಲತಾ ಹೆಗ್ಡೆ, ಅನ್ವರ್ ಖಾಸಿಂ, ಬಿಜೆಪಿ ಸದಸ್ಯರಾದ ರಾಜೇಶ್ ಬನ್ನೂರು, ಬಾಲಚಂದ್ರ, ವಿನಯ ಭಂಡಾರಿ ಅವರನ್ನು ಸದಸ್ಯರಾಗಿ ಸೇರಿಸಿಕೊಳ್ಳಲಾಯಿತು. ನಗರದ ಕಸ ಸಂಗ್ರಹ ಮಾಡುವ ಹೊಣೆಯನ್ನು 2 ಸ್ವಸಹಾಯ ಸಂಘಗಳಿಗೆ ನೀಡಲಾಗಿದೆ. ಆದರೆ ಈ ವ್ಯವಸ್ಥೆ ವಿಫಲಗೊಂಡಿರುವ ಕಾರಣ ಹೊರಗುತ್ತಿಗೆಗೆ ಟೆಂಡರ್ ಕರೆಯುವುದು ಎಂದು ಸಭೆ ನಿರ್ಣಯಿಸಿತು. ಸ್ವಸಹಾಯ ಸಂಘಗಳು ಕಸ ಸಂಗ್ರಹಣೆಯಲ್ಲಿ ಸೋತಿದ್ದರೆ ಬೇರೆಯವರಿಗೆ ಕೊಡುವುದು ಉತ್ತಮ. ಕಸ ಸಂಗ್ರಹಕ್ಕೆ ಬರೋದಿಲ್ಲ. ಹಣಕ್ಕೆ ಮಾತ್ರ ಬರುತ್ತಾರೆ ಎಂಬ ದೂರುಗಳಿವೆ ಎಂದು ಝೋಹಾರಾ ನಿಸಾರ್ ಹೇಳಿದರು. ಕಸಕ್ಕೆ ಪ್ರತ್ಯೇಕ ತೆರಿಗೆ ಪಡೆಯುತ್ತಿಲ್ಲ. ಟ್ರೇಡ್ ಲೈಸನ್ಸ್‌ಗೆ ಮಾತ್ರ ತ್ಯಾಜ್ಯ ಕರ ಪಡೆಯಲಾಗುತ್ತಿದೆ ಎಂದು ಪೌರಾಯುಕ್ತೆ ತಿಳಿಸಿದರು.
Related Articles
ಸರಕಾರದ ಸುತ್ತೋಲೆ ಪ್ರಕಾರ ಪೌರ ಕಾರ್ಮಿಕರನ್ನು ನಾವು ನೇಮಕಾತಿ ಮಾಡಿಕೊಳ್ಳಬೇಕಾಗಿದೆ. ಪುತ್ತೂರು ನಗರಸಭೆ 76 ಕಾರ್ಮಿಕರನ್ನು ನೇಮಕ ಮಾಡಿಕೊಂಡು ನಾವು ಅವರಿಂದಲೇ ಕಸ ವಿಲೇವಾರಿ ಮಾಡಿಸಬೇಕು. ಹೊರಗುತ್ತಿಗೆ ಕೊಡುವ ಹಾಗಿಲ್ಲ ಎಂದು ಪೌರಾಯುಕ್ತರು ಸ್ಪಷ್ಟಪಡಿಸಿದರು. ನೇಮಕಾತಿ ಪ್ರಕ್ರಿಯೆ ಮುಗಿದು, ಅವರಿಗೆ ತರಬೇತಿ ನೀಡುವಷ್ಟದಲ್ಲಿ ಒಂದು ವರ್ಷವಾದೀತು. ಅಲ್ಲಿಯವರೆಗೆ ಹೊರಗುತ್ತಿಗೆ ನೀಡೋಣ ಎಂಬ ಅಧ್ಯಕ್ಷರ ಹೇಳಿಕೆಗೆ ಸಭೆ ಸಮ್ಮತಿಸಿತು.
Advertisement
ಐತಿಹಾಸಿಕ ಕಿಲ್ಲೆ ಮೈದಾನದಲ್ಲಿ ತನ್ನ ಆಡಳಿತ ಕಚೇರಿ ನಿರ್ಮಿಸಲು ಜಾಗ ನೀಡುವಂತೆ ನಗರ ಯೋಜನಾ ಪ್ರಾಧಿಕಾರ ಕೇಳಿರುವ ವಿಚಾರ ಸಭೆಯಲ್ಲಿ ಪ್ರಸ್ತಾಪಗೊಂಡಿತು. ಸದಸ್ಯೆ ಝೊಹರಾ ನಿಸಾರ್ ಸಾರ್ವಜನಿಕ ಮೈದಾನದಲ್ಲಿ ಇಲಾಖೆಗೆ ಜಾಗ ಕೊಟ್ಟರೆ ಪುತ್ತೂರಿನ ಭವಿಷ್ಯವೇನು ಎಂದು ಕೇಳಿದರು. ಸದಸ್ಯ ರಾಜೇಶ್ ಬನ್ನೂರು ಆಗ್ರಹಿಸಿದಂತೆ ಸದಸ್ಯ ಮಹಮ್ಮದ್ ಆಲಿ ವಿವರಣೆ ನೀಡಿ, ಪ್ರಾಧಿಕಾರದವರು 5 ಸೆಂಟ್ಸ್ ಜಾಗ ಕೇಳಿದ್ದಾರೆ. ನಾವು ಈ ಕುರಿತು ಕೌನ್ಸಿಲ್ ಮೀಟಿಂಗ್‌ನಲ್ಲಿ ಚರ್ಚಿಸಿಲ್ಲ. ಅದಕ್ಕೆಂದೇ ವಿಶೇಷ ಸಭೆ ಕರೆಯೋಣ ಎಂದರು. ಇದಕ್ಕೆ ಸಭೆ ಸಮ್ಮತಿಸಿತು.
ಬಸ್ ನಿಲ್ದಾಣದ ಬಳಿ ಇರುವ ಗಾಂಧಿ ಕಟ್ಟೆಯ ಸ್ಥಿತಿ ಶೋಚನೀಯವಾಗಿದ್ದು, ಅಶ್ವತ್ಥ ಮರದ ಬುಡ ಶಿಥಿಲಗೊಂಡಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯೆ ಝೊಹರಾ ನಿಸಾರ್ ಆಗ್ರಹಿಸಿದರು. ಮಹಮ್ಮದ್ ಆಲಿ ಮಾತನಾಡಿ, ಗಾಂಧಿ ಕಟ್ಟೆ, ಗಾಂಧೀಜಿ ಪ್ರತಿಮೆ, ಅಶ್ವತ್ಥ ಮರ ಮತ್ತು ದೇವರ ಕಟ್ಟೆ ಎಲ್ಲವೂ ಒಂದೇ ಕಡೆ ಇರುವ ಕಾರಣ ಸಮಸ್ಯೆಯೂ ಸಂಕೀರ್ಣವಾಗಿದೆ. ಮೇಲಾಗಿ ಅದು ಕೆಎಸ್‌ಆರ್‌ಟಿಸಿಯ ಜಾಗ. ನಗರಸಭೆ ಇದರಲ್ಲಿ ಏನೂ ಮಾಡಲಾಗದು. ನಾವು ಹಿಂದೆ ಸಂತೆ ವಿಚಾರದಲ್ಲಿ ಸಮಸ್ಯೆಗೆ ಸಿಲುಕಿದ್ದು ಸಾಕು ಎಂದು ಹೇಳಿದರು.
ಡಂಪಿಂಗ್ ಯಾರ್ಡ್ ಸಮಸ್ಯೆ ಬಗೆಹರಿದಿಲ್ಲಕಸ ಸಂಗ್ರಹದ ಕುರಿತು ಚರ್ಚೆ ಮಾಡುತ್ತಿದ್ದೇವೆ. ಆದರೆ ಬನ್ನೂರಿನ ಡಂಪಿಂಗ್ ಯಾರ್ಡ್ ಸಮಸ್ಯೆ ಹಾಗೆಯೇ ಉಳಿದಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಕಸ ಹಾಕಲು ಬಿಡುವುದಿಲ್ಲ ಎಂದು ಉಪಾಧ್ಯಕ್ಷ ವಿಶ್ವನಾಥ ಗೌಡ ಎಚ್ಚರಿಸಿದರು. ಆ ಭಾಗದ ಜನರ ಪರ ನಾವು ನಿಲ್ಲಲೇ ಬೇಕು. ಎಷ್ಟು ಸಾರಿ ಮನವಿ ಕೊಟ್ಟರೂ ಸಮಸ್ಯೆ ಬಗೆಹರಿದಿಲ್ಲ. ಎಲ್ಲ 27 ಸದಸ್ಯರೂ ಅಲ್ಲಿಗೆ ಬಂದು ಪರಿಶೀಲಿಸಬೇಕು ಎಂದರು. ರಾಮಣ್ಣ ಗೌಡ ಹಲಂಗ ಧ್ವನಿಗೂಡಿಸಿದರು. ಸದಸ್ಯರಾದ ಜಯಲಕ್ಷ್ಮೀ ಸುರೇಶ್, ಶೈಲಾ ಪೈ, ಮುಕೇಶ್ ಕೆಮ್ಮಿಂಜೆ, ಅನ್ವರ್ ಕಾಸಿಂ, ಝೊಹರಾ ನಿಸಾರ್, ವಾಣಿ ಶ್ರೀಧರ್, ಜೀವಂಧರ ಜೈನ್, ಬಾಲಚಂದ್ರ, ಶ್ಯಾಮಲಾ ಬಪ್ಪಳಿಗೆ, ಸೋಮಪ್ಪ ಸಫಲ್ಯ, ರಾಮಣ್ಣ ಗೌಡ, ವಿನಯ ಭಂಡಾರಿ, ರಮೇಶ್ ಶೆಟ್ಟಿ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು. ಪೌರಾಯುಕ್ತೆ ರೂಪಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸುದಿನ ವರದಿ ಫಲಶ್ರುತಿ
ನಗರಸಭೆ ವ್ಯಾಪ್ತಿಯಲ್ಲಿ ಕಸ, ತ್ಯಾಜ್ಯ ನಿರ್ವಹಣೆ ಅವ್ಯವಸ್ಥಿತಗೊಂಡಿರುವ ಕುರಿತು ಉದಯವಾಣಿಯ ‘ಸುದಿನ’ದಲ್ಲಿ ಸಚಿತ್ರ ಸರಣಿ ವರದಿಯನ್ನು ಪ್ರಕಟಿಸಲಾಗಿತ್ತು. ಸಾರ್ವಜನಿಕ ಅಹವಾಲುಗಳೊಂದಿಗೆ ಅಧಿಕಾರಿಗಳು, ನಗರಸಭೆ ಪ್ರತಿನಿಧಿಗಳ ಗಮನ ಸೆಳೆಯಲಾಗಿತ್ತು.