Advertisement
ಸೇತುವೆ ಎಲ್ಲಿಇದು ಸುಬ್ರಹ್ಮಣ್ಯ – ಮಂಜೇಶ್ವರ ಅಂತಾರಾಜ್ಯ ಹೆದ್ದಾರಿಯ ವಿಶೇಷತೆ. ಈ ರಸ್ತೆ ಅಂತಾರಾಜ್ಯ ಹೆದ್ದಾರಿಯೆಂದು ಘೋಷಿಸಲ್ಪಟ್ಟು ವರ್ಷಗಟ್ಟಲೆ ಕಳೆದುಹೋಗಿದೆ. ಸುಬ್ರಹ್ಮಣ್ಯದಿಂದ ಪುತ್ತೂರು, ಬಳಿಕ ಈ ಅಂತಾರಾಜ್ಯ ಹೆದ್ದಾರಿ ಪುಣಚ, ಕೇಪು, ಅಳಿಕೆ, ಬೈರಿಕಟ್ಟೆ, ಕನ್ಯಾನ, ಆನೆಕಲ್ಲು ಮೂಲಕ ಮಂಜೇಶ್ವರವನ್ನು ತಲುಪುತ್ತದೆ. ಕೆಲವರ್ಷಗಳ ಕಾಲ ರಸ್ತೆಯ ಅಭಿವೃದ್ಧಿಯಾಗಿರಲಿಲ್ಲ. ಆದರೆ ಕಳೆದ ವರ್ಷ ಅಲ್ಲಲ್ಲಿ ಅಭಿವೃದ್ಧಿಯ ಶಖೆ ಆರಂಭವಾಯಿತು. ಪುಣಚ, ಕೇಪು, ಅಳಿಕೆ, ಕನ್ಯಾನ ಗ್ರಾಮಗಳಲ್ಲಿ ಈ ರಸ್ತೆ ಅಭಿವೃದ್ಧಿ ಕಂಡಿತು. ರಸ್ತೆ ವಿಸ್ತರಣೆಯಾಗುತ್ತಿದ್ದಂತೆ ಚಿಕ್ಕಪುಟ್ಟ ಸೇತುವೆಗಳನ್ನು ಅಭಿವೃದ್ಧಿಪಡಿಸಬೇಕಾಯಿತು. ಅಪಘಾತ ಸಂಭವಿಸುವ ಸಾಧ್ಯತೆಯನ್ನು ಲೆಕ್ಕಾಚಾರಮಾಡಿ, ಕೆಲ ಸೇತುವೆಗಳ ವಿಸ್ತರಣೆ ಕಾರ್ಯವನ್ನು ಲೋಕೋಪಯೋಗಿ ಇಲಾಖೆ ಹಂತ ಹಂತವಾಗಿ ಮಾಡಲಾರಂಭಿಸಿತು. ಅಳಿಕೆ ಗ್ರಾಮದ ಮಡಿಯಾಲದಲ್ಲಿ ಸೇತುವೆಯೂ ರಸ್ತೆಯೂ ಅಪಾಯಕಾರಿಯಾಗಿ ಪರಿಣಮಿಸಿತ್ತು. ಇಳಿಜಾರು ರಸ್ತೆ, ಅಗಲ ಕಿರಿದಾದ ಸೇತುವೆ ಮೃತ್ಯುಕೂಪವೆನಿಸಿತ್ತು. ಪರಿಣಾಮವಾಗಿ ಕಿರಿದಾದ ಹಳೆಯ ಸೇತುವೆಯನ್ನು ಬದಲಾಯಿಸುವ ತೀರ್ಮಾನವನ್ನೂ ಇಲಾಖೆ ಕೈಗೊಂಡಿತು. ಪಡಿಬಾಗಿಲು – ಬೈರಿಕಟ್ಟೆ ನಡುವಿನ ಅಳಿಕೆ ಗ್ರಾಮದ ಮಡಿಯಾಲದಲ್ಲಿ ಕಿರಿದಾದ ಸೇತುವೆಗೆ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಅವರ ಪ್ರಯತ್ನದಿಂದ ನಬಾರ್ಡ್ ಆರ್.ಐ.ಡಿ.ಎಫ್. 21 ಯೋಜನೆಯಡಿ 1.20 ಕೋ. ರೂ. ಅನುದಾನ ಬಿಡುಗಡೆಯಾಯಿತು.
ರಾಜ್ಯ ಹೆದ್ದಾರಿಯಲ್ಲಿ ಹಳೆ ಸೇತುವೆ ತೆಗೆದು ಕಾಮಗಾರಿ ನಡೆಸಲು ಜಿಲ್ಲಾಧಿಕಾರಿಗಳ ಅಧಿಕೃತ ಅಧಿಸೂಚನೆಯ ಅಗತ್ಯವಿದೆ. ಜಿಲ್ಲಾಧಿಕಾರಿಗಳು ಮೋಟಾರು ಕಾಯ್ದೆ 1988ರ ಸೆಕ್ಷನ್ 115 ಹಾಗೂ 1989ರ ನಿಯಮ 221ಎ(5)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಬಳಸಿಕೊಂಡು ರಾಜ್ಯ ಹೆದ್ದಾರಿ 100ರ ಪಡಿಬಾಗಿಲು – ಬೈರಿಕಟ್ಟೆ ನಡುವೆ ವಾಹನ ಸಂಚಾರ ನಿಷೇಧಿಸಿ 2017ರ ಜ. 10ರಂದು ಅಧಿಸೂಚನೆ ಹೊರಡಿಸಿದ್ದರು. ಬಳಿಕ ಹಳೆ ಸೇತುವೆಯನ್ನು ಕೆಡವಿ, ಹೊಸ ಸೇತುವೆ ಕಾಮಗಾರಿ ಆರಂಭಿಸಲಾಯಿತು. ನೀರಿನ ಅಭಾವ, ಅಡಿಕೆ ತೋಟದಿಂದ ಪೂರೈಕೆ
ನೀರಿನ ತೀವ್ರ ಅಭಾವದಿಂದ ಎಲ್ಲ ನದಿಗಳು ಬತ್ತುತ್ತಿರುವ ಸಮಯದಲ್ಲಿ ಸೇತುವೆಯ ಕಾಂಕ್ರಿಟ್ ಕಾಮಗಾರಿ ನಡೆಯುತ್ತಿತ್ತು. ಈ ಸಂದರ್ಭ ಸೇತುವೆ ಪಕ್ಕದ ಕೃಷಿಕ ಮಡಿಯಾಲ ಗೋಪಾಲಕೃಷ್ಣ ಭಟ್ ಎರಡು ತಿಂಗಳ ಅವಧಿಯಲ್ಲಿ ನೀರನ್ನು ಪೂರೈಸಿ ಸಹಕರಿಸಿದ್ದಾರೆ.
Related Articles
ಒಟ್ಟಿನಲ್ಲಿ ಸೇತುವೆ ಕಾಮಗಾರಿ ಪೂರ್ಣವಾಗಿದ್ದು ತಡೆಗೋಡೆ ನಿರ್ಮಾಣವಾಗಿದೆ. ಸೇತುವೆಯ ಎರಡೂ ಬದಿಯಲ್ಲಿ ಮಣ್ಣು ಹಾಕಿ ಇಳಿಜಾರು ರಸ್ತೆಯನ್ನು ಏರಿಸಲಾಗಿದೆ. ಆದುದರಿಂದ ಸೇತುವೆಯ ಎರಡೂ ಪಕ್ಕದಲ್ಲಿ ಡಾಮರು ಹಾಕಬೇಕಾಗಿದೆ. ಜಲ್ಲಿ ಹಾಕಲಾಗಿದ್ದು, ಮಳೆಯ ಕಾರಣ ಡಾಮರು ಕಾಮಗಾರಿ ನಡೆಸಲು ಸಾಧ್ಯವಾಗಿಲ್ಲ. ಸಣ್ಣ ಪುಟ್ಟ ವಾಹನ ಸಂಚಾರ ಆರಂಭವಾಗಿದ್ದು, ವಾಹನ ಸಂಚಾರಕ್ಕೆ ಅಧಿಕೃತ ಚಾಲನೆ ಸಿಗಬೇಕಾಗಿದೆ.
Advertisement
ಇನ್ನಷ್ಟು ಸೇತುವೆಗಳು ಬೇಕು ಪುತ್ತೂರು – ಉಕ್ಕುಡ ನಡುವೆ ಹೆದ್ದಾರಿಯ ಕಿರಿದಾದ ಸೇತುವೆಗಳ ವಿಸ್ತರಣೆ ಕಾಮಗಾರಿ ಇನ್ನೂ ಹಲವು ಕಡೆಗಳಲ್ಲಿ ಆಗಬೇಕಾಗಿದೆ. ಪುಣಚ ಸಮೀಪದ ಮಣಿಲ, ಪುತ್ತೂರು ಸಮೀಪದ ದೇವಸ್ಯ ಹಾಗೂ ಮಚ್ಚಿಮಲೆ ಸೇತುವೆಗಳು ಅಗಲ ಕಿರಿದಾಗಿದ್ದು, ಅಪಾಯಕಾರಿಯಾಗಿವೆ. ಅಲ್ಲೆಲ್ಲ ಅಪಘಾತ ಸಂಭವಿಸುವ ಸಾಧ್ಯತೆಯಿದೆ. ಆದುದರಿಂದ ಮಡಿಯಾಲದ ಈ ಸೇತುವೆಗೆ ಆದ್ಯತೆ ನೀಡಿರುವ ಅಧಿಕಾರಿಗಳು ಈ ರಸ್ತೆಯುದ್ದಕ್ಕೂ ಅಭಿವೃದ್ಧಿ ಕಾಮಗಾರಿ ನಡೆಸಬೇಕೆಂದು ನಿತ್ಯಸಂಚಾರಿಗಳು ಆಗ್ರಹಿಸಿದ್ದಾರೆ. – ಉದಯಶಂಕರ್ ನೀರ್ಪಾಜೆ