Advertisement

ನೀರಿನ ಸಮಸ್ಯೆಗೆ ಹೊಸ ಕೊಳವೆ ಬಾವಿ ಪರಿಹಾರ?

05:19 AM Mar 16, 2019 | |

ಪುಂಜಾಲಕಟ್ಟೆ : ಬಿಸಿಲಿನ ಬೇಗೆಗೆ ನೀರಿನ ಒರತೆಗಳು ಬತ್ತಿ ಹೋಗಲಾರಂಭಿಸಿದ್ದು, ನೀರಿನ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಕೇಂದ್ರ ಸ್ಥಾನ ಪುಂಜಾಲಕಟ್ಟೆ ಪ್ರದೇಶದಲ್ಲಿ ಕೊಳವೆ ಬಾವಿಯಲ್ಲಿ ನೀರು ಬತ್ತಿ ಹೋಗಿ ಕಳೆದ ಕೆಲವು ದಿನಗಳಿಂದ ನೀರಿನ ಸಮಸ್ಯೆ ಎದುರಾಗಿದ್ದು, ಗ್ರಾ.ಪಂ. ಹೊಸ ಕೊಳವೆ ಬಾವಿ ನಿರ್ಮಾಣದ ಮೊರೆ ಹೋಗಿದೆ.

Advertisement

ಪುಂಜಾಲಕಟ್ಟೆ ಕೆಳಗಿನ ಪೇಟೆ ಯಲ್ಲಿ, ಇಲ್ಲಿನ ಪರಿಸರದ ಪೇಟೆ ಭಾಗದಲ್ಲಿ ಸುಮಾರು 23 ಮನೆಗಳಿಗೆ, ಹೊಟೇಲ್‌ ಗಳಿಗೆ, ಅಂಗಡಿ, ಪೊಲೀಸ್‌ ಸ್ಟೇಶನ್‌, ಅಂಗನವಾಡಿ ಕೇಂದ್ರ, ಬ್ಯಾಂಕ್‌, ಸಹಕಾರಿ ಬ್ಯಾಂಕ್‌, ಪಂ. ಕಚೇರಿ, ಸಾರ್ವಜನಿಕ ಶೌಚಾಲಯ ಹೀಗೆ ಹಲವೆಡೆ ಕಳೆದ ಒಂದು ವಾರದಿಂದ ನೀರಿನ ಸಮಸ್ಯೆ ತಲೆದೋರಿದ್ದು, ನೀರಿಗಾಗಿ ಪಡಿಪಾಟಲು ಬೀಳುವ ಸ್ಥಿತಿ ಎದುರಾಗಿದೆ ಎಂದು ಗ್ರಾಮಸ್ಥರು ಅಲವತ್ತುಕೊಂಡಿದ್ದರು.

ಈ ಪರಿಸರದಲ್ಲಿ ಕೆಲವು ಮನೆಗಳಿಗೆ ಮಾತ್ರ ಬಾವಿಯ ಸೌಲಭ್ಯವಿದ್ದು, ಇತರರು ಸಾರ್ವಜನಿಕ ನೀರಿನ ಸಂಪರ್ಕ ಹೊಂದಿದ್ದಾರೆ.

ಪುಂಜಾಲಕಟ್ಟೆ ಪೊಲೀಸ್‌ ಸ್ಟೇಶನ್‌ ಸಮೀಪವಿರುವ ಕೊಳವೆ ಬಾವಿಯಿಂದ ಪರಿಸರಕ್ಕೆ ನೀರು ಸರಬರಾಜುಗೊಳ್ಳುತ್ತಿದ್ದು, ಬಿಸಿಲಿನ ಬೇಗೆಯಿಂದಾಗಿ ಕೊಳವೆ ಬಾವಿಯಲ್ಲಿ ನೀರು ಸಂಪೂರ್ಣವಾಗಿ ಬತ್ತಿ ಹೋದ ಕಾರಣ ನೀರಿನ ಅಭಾವ ಉಂಟಾಗಿದೆ. ಕೂಡಲೇ ಪಂ. ಆಡಳಿತ ನೀರಿನ ಸಮಸ್ಯೆ ಪರಿಹರಿಸಲು ಪ್ರಯತ್ನ ಪಟ್ಟಿದೆ. ಬತ್ತಿ ಹೋದ ಬೋರ್‌ ಅನ್ನು ಎಂಜಿನಿಯರ್‌ ಸಹಕಾರದೊಂದಿಗೆ ಪರಿಶೀಲನೆ ನಡೆಸಿ, ಹೊಸ ಕೊಳವೆ ಬಾವಿ ಕೊರೆಸಲು ಜಿ.ಪಂ.ಗೆ ಮನವಿ ಮಾಡ ಲಾಗಿತ್ತು. ಭೂಗರ್ಭ ಶಾಸ್ತ್ರಜ್ಞರು ಆಗಮಿಸಿ ಸ್ಥಳ ಗುರುತು ನಡೆಸಿದ್ದರು. ಆದರೆ ಕೊಳವೆ ಬಾವಿ ಕೊರೆವ ಏಜೆನ್ಸಿ ಕೊಳವೆ ಬಾವಿ ಕೊರೆಯಲು ಒಪ್ಪದ ಕಾರಣ ನೀರಿನ ಸಮಸ್ಯೆ ಪರಿಹಾರವಾಗಿರಲಿಲ್ಲ.

ಏಜೆನ್ಸಿ ಹಿಂದೇಟಿಗೆ ಕಾರಣ ಏನು? 
ಜಿ.ಪಂ. ಮತ್ತು ಕೊಳವೆ ಬಾವಿ ಎಜೆನ್ಸಿ ನಡುವಿನ 2006ರಲ್ಲಿಯ ಕೊಳವೆ ಬಾವಿ ಕೊರೆಯುವ ಒಪ್ಪಂದದ ದರ ಹಳೆಯದಾಗಿದ್ದು, ಪ್ರಸ್ತುತ ಶೇ. 12 ಜಿಎಸ್‌ಟಿ ಕರ ಭಾರದಿಂದ ಕೊಳವೆ ಬಾವಿ ನಿರ್ಮಿಸಲು ಏಜೆನ್ಸಿ ಮುಂದೆ ಬರುತ್ತಿಲ್ಲ ಎಂದು ಜಿ.ಪಂ. ಕಿರಿಯ ಎಂಜಿನಿಯರ್‌ ತಿಳಿಸಿದ್ದಾರೆ. ಆದರೂ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಮಂಗಳೂರು ಮೂಲದ ಏಜೆನ್ಸಿ ಕೊಳವೆ ಬಾವಿ ನಿರ್ಮಿಸಿದೆ. ಸದ್ಯ ಒಂದೂವರೆ ಇಂಚು ನೀರು ಲಭ್ಯವಾಗಿದೆ ಎಂದು ತಿಳಿದು ಬಂದಿದೆ. ಮುಂದಿನ ದಿನಗಳಲ್ಲಿ ಶಾಶ್ವತವಾಗಿ ನೀರಿನ ಸಮಸ್ಯೆ ಪರಿಹರಿಸುವಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

ನೀರಿನ ವ್ಯವಸ್ಥೆ
ನೀರಿನ ಅಭಾವವಿರುವ ಮನೆಗಳಿಗೆ ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಹೊಸ ಕೊಳವೆ ಬಾವಿಯಿಂದ ನೀರಿನ ವ್ಯವಸ್ಥೆ ಮಾಡಲಾಗುವುದು.
– ರಾಜಶೇಖರ ರೈ ಪಿಡಿಒ,
    ಪಿಲಾತಬೆಟ್ಟು ಗ್ರಾ.ಪಂ.

ಪರ್ಯಾಯ ಮಾರ್ಗ
ದರ ಪರಿಷ್ಕರಣೆ ವಿಚಾರ ಕೊಳವೆ ಬಾವಿ ಏಜೆನ್ಸಿ ಮುಷ್ಕರದಿಂದ ಹಿನ್ನಡೆಯಾಗಿತ್ತು. ಗ್ರಾ.ಪಂ. ಸಹಕಾರದಲ್ಲಿ ಕೊಳವೆ ಬಾವಿ ನಿರ್ಮಾಣಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.
– ಕೃಷ್ಣ ಎಂ., ಜಿ.ಪಂ. ಕಿರಿಯ
ಎಂಜಿನಿಯರ್‌, ಬಂಟ್ವಾಳ 

ಪರಿಹಾರ
ನೀರಿನ ಅಭಾವವಾಗದಂತೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಜಿ.ಪಂ. ಸಹಕಾರದಲ್ಲಿ ಹೊಸ ಕೊಳವೆ ಬಾವಿ ನಿರ್ಮಿಸಲಾಗಿದೆ. ಮುಂದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ.
– ಚಂದ್ರಶೇಖರ ಶೆಟ್ಟಿ,
ಅಧ್ಯಕ್ಷರು, ಪಿಲಾತಬೆಟ್ಟು ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next