Advertisement

ಪ್ರೇಮಾಲೋಚನೆ: ಇಷ್ಕ್ ನಲ್ಲಿ ಹೊಸಬರ ಕನಸು

12:30 AM Jan 11, 2019 | Team Udayavani |

ಸಾಮಾನ್ಯವಾಗಿ ಯಾವುದೇ ಶೀರ್ಷಿಕೆಗಳಿಗೆ ಭಾಷೆ, ಪ್ರದೇಶಗಳ ಹಂಗಿರುವುದಿಲ್ಲ. ಅದೆಲ್ಲವನ್ನು ಮೀರಿ ಅವು ಜನರ ಬಾಯಲ್ಲಿ ಹರಿದಾಡುತ್ತಿರುತ್ತವೆ. ಇನ್ನು ಚಿತ್ರರಂಗದ ಮಟ್ಟಿಗಂತೂ ಈ ಶೀರ್ಷಿಕೆಗಳ  ಹಂಗು-ಗುಂಗು ಯಾವುದೂ ಇರುವುದಿಲ್ಲ. ತಮ್ಮ ಚಿತ್ರಕ್ಕೆ ಹೊಂದುತ್ತದೆ, ಪ್ರೇಕ್ಷಕರಿಗೆ ಬೇಗನೇ ತಲುಪುತ್ತದೆ ಎನ್ನುವ ಎರಡು ಅಂಶಗಳಿದ್ದರೆ ಸಾಕು ಆ ಶೀರ್ಷಿಕೆಗಳು ಚಿತ್ರಕ್ಕೆ ಫಿಕ್ಸ್‌ ಆಗೋದು ಪಕ್ಕಾ. ಈಗ ಯಾಕಪ್ಪಾ ಈ ವಿಷಯ ಅಂದ್ರೆ,  “ಇಷ್ಕ್’ ಎನ್ನುವ ಹೊಸ ಚಿತ್ರವೊಂದು ಸೆಟ್ಟೇರಿದೆ. “ಇಷ್ಕ್’ ಶೀರ್ಷಿಕೆಯಲ್ಲಿ ಈಗಾಗಲೇ ಹಲವು ಭಾಷೆಗಳಲ್ಲಿ ಚಿತ್ರಗಳು ಬಂದು ಹೋಗಿವೆ. ಈಗ ಆ ಸರದಿ ಕನ್ನಡದಲ್ಲಿ.  ಅಂದಹಾಗೆ, ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ “ಇಷ್‌R’ ಚಿತ್ರಕ್ಕೆ ನವೀನ್‌ ಆರ್‌. ಮಂಡ್ಯ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. “ಇದೊಂದು ಇಂದಿನ ಜನರೇಷನ್‌ನ ಸಿನಿಮಾ. ಇಂದಿನ ಪ್ರೇಮಿಗಳು, ಅವರ ಯೋಚನೆಗಳು, ಜೀವನ ಹೇಗಿರುತ್ತದೆ ಎಂಬುದರ ಸುತ್ತ ಚಿತ್ರ ಸಾಗುತ್ತದೆ. ಚಿತ್ರದ ಕಥೆಗೆ ಹೊಂದಾಣಿಕೆ ಆಗುತ್ತದೆ ಎಂಬ ಕಾರಣಕ್ಕೆ “ಇಷ್ಕ್’ ಎಂಬ ಟೈಟಲ್‌ ಇಟ್ಟಿದ್ದೇವೆ. ಚಿತ್ರ ನೋಡಿದ ಮೇಲೆ ಏಕೆ ಈ ಟೈಟಲ್‌ ಇಟ್ಟಿದ್ದೇವೆ ಅಂತ ಗೊತ್ತಾಗುತ್ತದೆ’ ಅನ್ನೋದು ಚಿತ್ರದ ಶೀರ್ಷಿಕೆಯ ಬಗ್ಗೆ ನಿರ್ದೇಶಕ ನವೀನ್‌ ನೀಡುವ ಸಮರ್ಥನೆ.  “ಇಷ್‌R’ ಚಿತ್ರದಲ್ಲಿ ಅರ್ಜುನ್‌ ಯೋಗಿ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಅರ್ಜುನ್‌ ಯೋಗಿ, “ಈ ಚಿತ್ರದಲ್ಲಿ ನನ್ನದು ತಾನಾಯಿತು ತನ್ನ ಕೆಲಸವಾಯಿತು ಎನ್ನುವ ಮಧ್ಯಮ ವರ್ಗದ ಜವಾಬ್ದಾರಿಯುತ ಹುಡುಗನ ಪಾತ್ರ. ಚಿತ್ರದ ಕಥೆ ಇಂದಿನ ಪ್ರೇಕ್ಷಕರಿಗೆ ಇಷ್ಟವಾಗುವಂತಿದೆ. ಲವ್‌ ಸ್ಟೋರಿಯಾದರೂ, ಇದರಲ್ಲಿ ಆ್ಯಕ್ಷನ್‌ ಇದೆ. ಮೆಲೋಡಿ ಇದೆ. ಇಂದಿನ ಆಡಿಯನ್ಸ್‌ಗೆ ಇಷ್ಟವಾಗುವಂತಹ ಹಲವು ಅಂಶಗಳಿವೆ. ಇದೊಂದು ಔಟ್‌ ಆ್ಯಂಡ್‌ ಔಟ್‌ ಕಮರ್ಷಿಯಲ್‌ ಎಂಟರ್‌ಟೈನ್ಮೆಂಟ್‌ ಚಿತ್ರವಾಗಿ ಪ್ರೇಕ್ಷಕರ ಮುಂದೆ ಬರಲಿದೆ’ ಎಂದರು. 

Advertisement

 “ಇಷ್ಕ್’ ಚಿತ್ರದಲ್ಲಿ ಸಿರಿ ಪ್ರಹ್ಲಾದ್‌ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಸಿರಿ ಅವರದ್ದು, ಈಗಿನ ಕಾಲದ ಕಾಲೇಜ್‌ ಹುಡುಗಿಯ ಪಾತ್ರವಂತೆ. “ಈಗಿನ ಕಾಲದ ಕಾಲೇಜ್‌ ಹುಡುಗಿಯರು ಹೇಗೆ ಬೋಲ್ಡ್‌ ಆ್ಯಂಡ್‌ ಡೈನಾಮಿಕ್‌ ಆಗಿರುತ್ತಾರೆಯೋ ಅಂಥದ್ದೇ ಪಾತ್ರವನ್ನು ಈ ಚಿತ್ರದಲ್ಲಿ ನಾನು ಮಾಡುತ್ತಿದ್ದೇನೆ. ನನ್ನ ಪಾತ್ರ ಹೊಸಥರದಿಂದ ಇದ್ದು, ಪ್ರೇಕ್ಷಕರಿಗೂ ಇಷ್ಟವಾಗಲಿದೆ’ ಎನ್ನುವ ಭರವಸೆ ಸಿರಿ ಅವರದ್ದು.  ಉಳಿದಂತೆ “ಇಷ್ಕ್’ ಚಿತ್ರದಲ್ಲಿ ವಿಕಾಸ್‌, ಮುರಳಿ ಮೊದಲಾದ ಕಲಾವಿದರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದ ಮತ್ತೆರಡು ಪ್ರಮುಖ ಪಾತ್ರಗಳಿಗೆ ರವಿಶಂಕರ್‌, ಚಿಕ್ಕಣ್ಣ ಅವರನ್ನೂ ಕರೆತರುವ ಯೋಚನೆಯಲ್ಲಿದೆ ಚಿತ್ರತಂಡ. “ವಡಸಲಮ್ಮ ಕಂಬೈನ್ಸ್‌’ ಬ್ಯಾನರ್‌ನಲ್ಲಿ ನಾಯಕ ನಟ ಅರ್ಜುನ್‌ ಯೋಗಿ ಮತ್ತಿತರರು ಸೇರಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸುರೇಂದ್ರನಾಥ್‌ ಬಿ.ಆರ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಶಿವ ಸೀನು ಛಾಯಾಗ್ರಹಣ ಮತ್ತು ಸಿ. ರವಿಚಂದ್ರನ್‌ ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರು, ಹೈದರಾಬಾದ್‌, ತಾಜಮಹಲ್‌ ಮತ್ತಿತರ ಕಡೆಗಳಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದ್ದು, ಮುಂದಿನ ಅಕ್ಟೋಬರ್‌ ವೇಳೆಗೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ಪ್ಲಾನ್‌ ಮಾಡಿಕೊಂಡಿದೆ.    

Advertisement

Udayavani is now on Telegram. Click here to join our channel and stay updated with the latest news.

Next