ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇಂದು ಮತ್ತೆ 75 ಹೊಸ ಸೋಂಕು ಪ್ರಕರಣಗಳು ದೃಢವಾಗಿದ್ದು, ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 2493 ಕ್ಕೆ ಏರಿಕೆಯಾಗಿದೆ.
ಇಂದು ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂದರೆ 27 ಸೋಂಕು ಪ್ರಕರಣಗಳು ಕಂಡು ಬಂದಿದೆ. ಹಾಸನ ಜಿಲ್ಲೆಯಲ್ಲಿ ಇಂದು 13 ಹೊಸ ಸೋಂಕು ಪ್ರಕರಣಗಳು ದೃಢವಾಗಿದೆ. ಇವರಲ್ಲಿ ಒಂಬತ್ತು ಜನರ ಸೋಂಕು ಮೂಲವೇ ಪತ್ತೆಯಾಗಿಲ್ಲ. ಬೆಂಗಳೂರು ನಗರ ಮತ್ತು ಯಾದಗಿರಿಯಲ್ಲಿ ತಲಾ ಏಳು ಸೋಂಕು ಪ್ರಕರಣಗಳು ಖಚಿತವಾಗಿದೆ.
ಉಳಿದಂತೆ ದಕ್ಷಿಣ ಕನ್ನಡ ಆರು, ಕಲಬುರಗಿಯಲ್ಲಿ ಮೂರು, ವಿಜಯಪುರದಲ್ಲಿ ಎರಡು, ರಾಯಚೂರಿನಲ್ಲಿ ಒಂದು, ಚಿತ್ರದುರ್ಗದಲ್ಲಿ ಆರು, ಚಿಕ್ಕಮಗಳೂರಿನಲ್ಲಿ ಮೂರು ಕೋವಿಡ್ 19 ಸೋಂಕು ಪ್ರಕರಣಗಳು ದೃಢವಾಗಿದೆ.
ಇಂದಿನ ಸೋಂಕು ಪ್ರಕರಣಗಳಲ್ಲಿ 43 ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದರೆ, ಆರು ಮಂದಿ ತಮಿಳುನಾಡಿನಿಂದ ಬಂದಿದ್ದಾರೆ. ತೆಲಂಗಾಣದಿಂದ ಇಬ್ಬರು ಬಂದಿದ್ದು, ಕೇರಳ ಮತ್ತು ದೆಹಲಿಯಿಂದ ಬಂದ ತಲಾ ಓರ್ವರಿಗೆ ಸೋಂಕು ತಾಗಿದೆ.
ರಾಜ್ಯದಲ್ಲಿಂದು ಒಟ್ಟು 75 ಹೊಸ ಸೋಂಕು ಪ್ರಕರಣಗಳು ದೃಢವಾಗಿದೆ. ಇದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 2493ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 28 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ರಾಜ್ಯದಲ್ಲಿ ಒಟ್ಟು 809 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 47 ಮಂದಿ ಸೋಂಕಿನ ಕಾರಣದಿಂದ ಸಾವನ್ನಪ್ಪಿದರೆ, ಇಬ್ಬರು ಸೋಂಕಿತರು ಕೋವಿಡ್ ಅಲ್ಲದ ಕಾರಣದಿಂದ ಮರಣ ಹೊಂದಿದ್ದಾರೆ.