Advertisement

ದ ಹಂಡ್ರೆಡ್‌ ಇದು 100 ಎಸೆತಗಳ ಕ್ರಿಕೆಟ್‌!

06:00 AM Jul 25, 2018 | Team Udayavani |

ಲಂಡನ್‌: ಟಿ20 ಕ್ರಿಕೆಟ್‌ ಏಕದಿನಗಿಂತ ಹೆಚ್ಚು ಮನೋರಂಜನೆ ನೀಡಿತ್ತು. ಇದೀಗ ಟಿ20 ಕ್ರಿಕೆಟ್‌ಗಿಂತ ಹೆಚ್ಚು ಅಭಿಮಾನಿಗಳನ್ನು ರಂಜಿಸಲು ಇಂಗ್ಲೆಂಡ್‌ ಹಾಗೂ ವೇಲ್ಸ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಸಿದ್ಧತೆ ನಡೆಸಿದೆ. ಇದಕ್ಕಾಗಿ 100 ಎಸೆತಗಳ “ದ ಹಂಡ್ರೆಡ್‌’ ಕ್ರಿಕೆಟ್‌ ಪಂದ್ಯಾವಳಿಯನ್ನು ನಡೆಸಲು ಯೋಜನೆಗಳನ್ನು ರೂಪಿಸುತ್ತಿದೆ. 

Advertisement

ಪ್ರಾಯೋಗಿಕವಾಗಿ ಆರಂಭ
100 ಎಸೆತಗಳ ಈ ಕ್ರಿಕೆಟ್‌ ಪಂದ್ಯವನ್ನು ಪ್ರಾಯೋಗಿಕವಾಗಿ ಆರಂಭಿಸಲು ಇಸಿಬಿ ನಿರ್ಧರಿಸಿದ್ದು, ಮೂಲಗಳ ಪ್ರಕಾರ ಒಂದು ತಂಡದಲ್ಲಿ ತಲಾ 12 ಆಟಗಾರರು ಪಾಲ್ಗೊಳ್ಳುವ ಸಾಧ್ಯತೆ ಇದೆ. ಹಾಗೆಯೇ 6 ಎಸೆತಗಳ ಬದಲು 5 ಎಸೆತಗಳ ಓವರ್‌ಗಳನ್ನು ಅಳವಡಿಸಲಾಗುವುದು. ಆದರೆ ಇದಿನ್ನೂ ಅಧಿಕೃತಗೊಂಡಿಲ್ಲ.

“ಸೂಪರ್‌ ಸಬ್‌’ ಬಳಕೆ?
ತಂಡವೊಂದು ಒಟ್ಟು 11 ಆಟಗಾರರು ಮತ್ತು ಓರ್ವ “ಸೂಪರ್‌ ಸಬ್‌’ ವಿಶೇಷ ಆಟಗಾರನನ್ನು ಒಳಗೊಂಡಿರುತ್ತದೆ. ತಂಡದ ನಾಯಕ ಪಿಚ್‌, ವಾತಾವರಣ ನೋಡಿಕೊಂಡು ಹೆಚ್ಚುವರಿ ಬ್ಯಾಟ್ಸ್‌ಮನ್‌ ಅಥವಾ ಬೌಲರ್‌ ಒಬ್ಬನನ್ನು ಆಯ್ಕೆ ಮಾಡಿಕೊಳ್ಳಬಹುದು. ಸಂದರ್ಭ ನೋಡಿಕೊಂಡು ಆತನ ಉಪಯೋಗ ಪಡೆದುಕೊಳ್ಳಬಹುದು ಎಂದು ಹೇಳಲಾಗಿದೆ. 2005ರಲ್ಲಿಯೇ ಐಸಿಸಿ “ಸೂಪರ್‌ ಸಬ್‌’ ಪ್ರಯೋಗ ಮಾಡಿತ್ತು. ಬ್ಯಾಟ್ಸ್‌ಮನ್‌, ಬೌಲಿಂಗ್‌, ವಿಕೆಟ್‌ ಕೀಪಿಂಗ್‌, ಫೀಲ್ಡಿಂಗ್‌ ನಡೆಸುವ ವಿಶೇಷ ಅಧಿಕಾರವನ್ನು ಒಬ್ಬ ಆಟಗಾರ ಪಡೆದುಕೊಂಡಿದ್ದ. ಇಂತಹ ವಿಶೇಷ ಆಯ್ಕೆ ಟಾಸ್‌ ಗೆದ್ದ ತಂಡಕ್ಕೆ ಹೆಚ್ಚಿನ ಲಾಭ ತಂದುಕೊಡುತ್ತಿತ್ತು. ಇದು  ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಇದರಿಂದಾಗಿ ಐಸಿಸಿ ಸೂಪರ್‌ ಸಬ್‌ ಪ್ರಯೋಗವನ್ನು ಅರ್ಧಕ್ಕೆ ಕೈಬಿಡಬೇಕಾಯಿತು. ಈಗ ಇದು ಮರುಜೀವ ಪಡೆಯುವ ಸಾಧ್ಯತೆ ಇದೆ.

10 ಎಸೆತಗಳ ಸೂಪರ್‌ ಓವರ್‌?!
“ದ ಹಂಡ್ರೆಡ್‌’ ಕ್ರಿಕೆಟ್‌ನಲ್ಲಿ ಭಾಗವಹಿಸುವ ತಂಡವೊಂದರಲ್ಲಿ ಹನ್ನೊಂದರ ಬದಲು 12 ಆಟಗಾರರಿಗೆ ಅವಕಾಶ ಕಲ್ಪಿಸುವ ಪ್ರಸ್ತಾವನೆ ಸಲ್ಲಿಸಲಾಗಿದೆ. ಜತೆಗೆ 6 ಎಸೆತಗಳ ಓವರ್‌ ಬದಲು 5 ಎಸೆತಗಳ ಓವರ್‌ ಜಾರಿಗೆ ತರಲು ಯೋಚಿಸಲಾಗುತ್ತಿದೆ. ಆರಂಭದಲ್ಲಿ, ತಲಾ 6 ಎಸೆತಗಳ 15 ಓವರ್‌ (90 ಎಸೆತ) ಬಳಿಕ ಕೊನೆಯಲ್ಲಿ 10 ಎಸೆತಗಳ ಒಂದು “ಸೂಪರ್‌ ಓವರ್‌’ ಯೋಜನೆ ಕೂಡ ಸುದ್ದಿಯಲ್ಲಿತ್ತು. ಈ ಕುರಿತಂತೆ ಭಾರೀ ಚರ್ಚೆ ನಡೆಯುತ್ತಿದೆ. ಆದರೆ ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ ಮಾತ್ರ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next