ಪರ್ತ್: ಬಾರ್ಡರ್ – ಗಾವಸ್ಕರ್ ಟ್ರೋಪಿ ಟೆಸ್ಟ್ ಸರಣಿಗೆ ಇನ್ನೊಂದು ವಾರ ಬಾಕಿಯಿದೆ. ಮುಂದಿನ ಶುಕ್ರವಾರ (ನ.22) ದಿಂದ ಪರ್ತ್ ನಲ್ಲಿ ಸರಣಿ ಆರಂಭವಾಗಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಈ ಮಹತ್ವದ ಸರಣಿಗೆ ಸಿದ್ದತೆ ಆರಂಭಿಸಿದೆ.
ಇದೀಗ ಭಾರತ ತಂಡವು ಭಾರತ ಎ ತಂಡದ ವಿರುದ್ದ ಅಭ್ಯಾಸ ಪಂದ್ಯವಾಡುತ್ತಿದೆ. ಶುಕ್ರವಾರ (ನ.15) ಪರ್ತ್ ನ ವಾಕಾ ಸ್ಟೇಡಿಯಂನಲ್ಲಿ ಇಂಡಿಯಾ-ಇಂಡಿಯಾ ಎ ಅಭ್ಯಾಸ ಪಂದ್ಯ ಆರಂಭವಾಗಿದೆ. ಪಂದ್ಯಾವಳಿಯನ್ನು ನೋಡಲು ಅಭಿಮಾನಿಗಳಿಗೆ ಪ್ರವೇಶ ನಿರಾಕರಿಸಲಾಗಿದೆ.
ನ್ಯೂಜಿಲ್ಯಾಂಡ್ ವಿರುದ್ದದ ತವರಿನ ಸರಣಿಯಲ್ಲಿ ವೈಫಲ್ಯತೆ ಅನುಭವಿಸಿದ್ದ ಪ್ರಮುಖ ಬ್ಯಾಟರ್ ವಿರಾಟ್ ಕೊಹ್ಲಿ ಆಸೀಸ್ ನಲ್ಲಿ ರನ್ ಗಳಿಸಲು ಪರದಾಡಿದ್ದಾರೆ. ವಾಕಾ ಮೈದಾನದಲ್ಲಿ ಆರಂಭದಲ್ಲಿ ಎರಡು ಉತ್ತಮ ಕವರ್ ಡ್ರೈವ್ ಹೊಡೆದ ವಿರಾಟ್ ಬಳಿಕ ಔಟಾದರು. ವಿರಾಟ್ ಗಳಿಕೆ ಕೇವಲ 15 ರನ್. ಮುಕೇಶ್ ಕುಮಾರ್ ಎಸೆತದಲ್ಲಿ ಸೆಕೆಂಡ್ ಸ್ಲಿಪ್ ಗೆ ಕ್ಯಾಚಿತ್ತು ವಿರಾಟ್ ಔಟಾದರು.
ಆದರೆ ಔಟಾದ ಕೂಡಲೇ ವಿರಾಟ್ ನೆಟ್ಸ್ ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.
ಕಿವೀಸ್ ವಿರುದ್ದದ ಸರಣಿಯಲ್ಲಿ ಉತ್ತಮ ಫಾರ್ಮ್ ನಲ್ಲಿದ್ದ ಕೀಪರ್ ಬ್ಯಾಟರ್ ರಿಷಭ್ ಪಂತ್ ಆಸೀಸ್ ನಲ್ಲಿ ಮುಗ್ಗರಿಸಿದ್ದಾರೆ. 19 ರನ್ ಗಳಿಸಿದ್ದ ವೇಳೆ ನಿತೇಶ್ ಕುಮಾರ್ ರೆಡ್ಡಿ ಎಸೆತಕ್ಕೆ ಬೌಲ್ಡಾದರು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಕೂಡಾ 15 ರನ್ ಗೆ ಔಟಾದರು.
ಕನ್ನಡಿಗ ಕೆಎಲ್ ರಾಹುಲ್ ಅವರು ಗಾಯಗೊಂಡು ಮೈದಾನ ತೊರೆಯಬೇಕಾಯಿತು. ತಂಡದ ಫಿಸಿಯೋ ಅವರು ಮೈದಾನಕ್ಕೆ ಆಗಮಿಸಿದ್ದರು. ಬಳಿಕ ಮೈದಾನ ತೊರೆದರು. ರಾಹುಲ್ ಗಾಯದ ತೀವ್ರತೆ ಬಗ್ಗೆ ಇನ್ನೂ ಖಚಿತ ಮಾಹಿತಿ ದೊರೆತಿಲ್ಲ.