ದುಬಾೖ: ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಐಸಿಸಿ ಅಂಪಾಯರ್ ಮತ್ತು ಮ್ಯಾಚ್ ರೆಫ್ರಿಗಳ ಯಾದಿಯನ್ನು ಪ್ರಕಟಿಸಿದೆ.
ಫಸ್ಟ್ ರೌಂಡ್ ಮತ್ತು ಸೂಪರ್ 12 ಹಂತದ ಸ್ಪರ್ಧೆಗಳಿಗೆಂದು ಆರಿಸಲಾದ 20 ಮಂದಿಯ ಬೃಹತ್ ತಂಡ ಇದಾಗಿದೆ. ಕೋವಿಡ್ ಮುಂಜಾಗ್ರತೆಯ ಕಾರಣ ಅಂಪಾಯರ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಐಸಿಸಿ ತಿಳಿಸಿದೆ.
ಈ ಕೂಟದಲ್ಲಿ ಭಾರತದ ಏಕೈಕ ಅಂಪಾಯರ್ ಕಾರ್ಯ ನಿರ್ವಹಿಸಲಿದ್ದಾರೆ. ನಿತಿನ್ ಮೆನನ್ ಈ ಅದೃಷ್ಟಶಾಲಿ. 4 ಮಂದಿ ಮ್ಯಾಚ್ ರೆಫ್ರಿಗಳ ಯಾದಿಯಲ್ಲಿ ಕರ್ನಾಟಕದ ಜಾವಗಲ್ ಶ್ರೀನಾಥ್ ಕಾಣಿಸಿಕೊಂಡಿದ್ದಾರೆ.
ಬಹು ನಿರೀಕ್ಷೆಯ ಭಾರತ-ಪಾಕಿಸ್ಥಾನ ನಡುವಿನ ಪಂದ್ಯಕ್ಕೆ ದಕ್ಷಿಣ ಆಫ್ರಿಕಾದ ಮರೈಸ್ ಎರಾಸ್ಮಸ್ ಮತ್ತು ಇಂಗ್ಲೆಂಡಿನ ಕ್ರಿಸ್ ಗಫಾನಿ ಅಂಪಾಯರ್ ಆಗಿರುತ್ತಾರೆ. ಟಿವಿ ಅಂಪಾಯರ್ ಆಗಿರುವವರು ರಿಚರ್ಡ್ ಇಲ್ಲಿಂಗ್‌ವರ್ತ್. ಈ ಪಂದ್ಯದ ಮ್ಯಾಚ್ ರೆಫ್ರಿ ಡೇವಿಡ್ ಬೂನ್.
ಇಲ್ಲಿನ ಮೂವರು ಅಂಪಾಯರ್‌ಗಳಿಗೆ ಇದು 6ನೇ ಟಿ20 ವಿಶ್ವಕಪ್ ಆಗಿರುವುದು ವಿಶೇಷ. ಇವರೆಂದರೆ ಅಲೀಮ್ ದಾರ್, ಮರೈಸ್ ಎರಾಸ್ಮಸ್ ಮತ್ತು ರಾಡ್ ಟ್ಯುಕರ್.