ಹೊಸದಿಲ್ಲಿ : ದಶಕಗಳಿಂದ ನನೆಗುದಿಗೆ ಬಿದ್ದಿರುವ ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದವನ್ನು ಸಂಧಾನದ ಮೂಲಕ ಬಗೆ ಹರಿಸುವ ಯತ್ನದಲ್ಲಿ ಸುಪ್ರೀಂ ಕೋರ್ಟ್ ಇಂದು ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿ ಶಂಕರ್ ಅವರನ್ನು ಓರ್ವ ಸಂಧಾನಕಾರರನ್ನಾಗಿ ನೇಮಿಸಿರುವುದಕ್ಕೆ ಎಐಎಂಐಎಂ ಪಕ್ಷದ ಮುಖ್ಯಸ್ಥ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶ್ರೀ ಶ್ರೀ ರವಿಶಂಕರ್ ಬದಲು ಸುಪ್ರೀಂ ಕೋರ್ಟ್ ತಟಸ್ಥ ಸಂಧಾನಕಾರರೋರ್ವರನ್ನು ನೇಮಿಸಿದ್ದರೆ ಒಳ್ಳೆಯದಿತ್ತು ಎಂದು ಓವೈಸಿ ಹೇಳಿದ್ದಾರೆ.
ರವಿಶಂಕರ್ ಅವರು ಈ ಹಿಂದೆ ಅಯೋಧ್ಯೆ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸುವ ಯತ್ನದಲ್ಲಿ “ಮುಸ್ಲಿಮರು ಆಯೋಧ್ಯೆ ಮೇಲಿನ ಹಕ್ಕನ್ನು ಬಿಟ್ಟುಕೊಡದಿದ್ದರೆ ಭಾರತ ಇನ್ನೊಂದು ಸಿರಿಯ ಆದೀತು’ ಎಂದು ಹೇಳಿದ್ದರು ಎಂಬುದನ್ನು ನೆನಪಿಸಿಕೊಟ್ಟಿರುವ ಓವೈಸಿ, ಸುಪ್ರೀಂ ಕೋರ್ಟ್ ರವಿಶಂಕರ್ ಬದಲು ತಟಸ್ಥ ಸಂಧಾನಕಾರನನ್ನು ನೇಮಿಸಬೇಕು ಎಂದು ಎಎನ್‌ಐ ಸುದ್ದಿ ಸಂಸ್ಥೆ ಜತೆಗೆ ಮಾತನಾಡುತ್ತಾ ಹೇಳಿದರು.
ಸುಪ್ರೀಂ ಕೋರ್ಟ್ ಇಂದು ಮೂವರು ಸದಸ್ಯರನ್ನು ಒಳಗೊಂಡ ಅಯೋಧ್ಯೆ ಸಂಧಾನ ಮಂಡಳಿಗೆ ಶ್ರೀ ಶ್ರೀ ರವಿಶಂಕರ್, ಹಿರಿಯ ವಕೀಲ ಶ್ರೀರಾಮ್ ಪಂಚು ಮತ್ತು ಮಂಡಳಿಯ ನೇತೃತ್ವ ವಹಿಸುವ ಎಫ್ ಎಂ ಐ ಕಲೀಫುಲ್ಲಾ ಅವರನ್ನು ನೇಮಿಸಿತ್ತು.
ನಾವೆಲ್ಲರೂ ಒಗ್ಗೂಡಿ ಸಾಮಾಜಿಕ ಸಾಮರಸ್ಯವನ್ನು ಕಾಯ್ದುಕೊಂಡು ದೀರ್ಘಕಾಲದಿಂದ ಬಾಕಿ ಉಳಿದಿರುವ ಅಯೋಧ್ಯೆ ಭೂವಿವಾದವನ್ನು ಸಂತಸದಿಂದ ಬಗೆ ಹರಿಸುವತ್ತ ಸಾಗಬೇಕು ಎಂದು ಶ್ರೀ ಶ್ರೀ ರವಿಶಂಕರ್ ಅವರಿಂದ ಹೇಳಿದ್ದರು.