ಮೈಸೂರು: ರಾಷ್ಟ್ರೀಯ ಪಕ್ಷಗಳ ಹಣಬಲದ ಜೊತೆ ಹೋರಾಟ ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳನ್ನು ಹಾಕುತ್ತಿಲ್ಲ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು. ನಗರದಲ್ಲಿ ಗುರುವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಎರಡೂ ಉಪ ಚುನಾವಣೆಗಳಲ್ಲಿ ಜೆಡಿಎಸ್ ತಟಸ್ಥವಾಗಿರುವ ಬಗ್ಗೆ ಪಕ್ಷದ ಕಾರ್ಯ ಕರ್ತರಿಗೆ ತಿಳಿಸಿ ಹೇಳುತ್ತೇವೆ ಎಂದರು.
ಭ್ರಮೆ: ಉಪ ಚುನಾವಣೆಯ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿ ಅನ್ನುವುದೆಲ್ಲ ಬರೀ ಭ್ರಮೆ. ಜಯಲಲಿತಾ 15 ಉಪ ಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನೇ ಹಾಕಿರಲಿಲ್ಲ. ಆದರೆ, ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಭಾರೀ ಯಶಸ್ಸು ಕಂಡಿದ್ದರು. ಹೀಗಾಗಿ ಉಪ ಚುನಾವಣೆಗೆ ಗಮನ ಕೊಡದೆ 8 ತಿಂಗಳ ನಂತರ ಎದುರಾಗುವ ಸಾರ್ವತ್ರಿಕ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಗಮನಹರಿಸುತ್ತೇವೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳದೆ ಎಲ್ಲ ಕ್ಷೇತ್ರಗಳಲ್ಲೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳಿದರು. ಉಪ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಹಣ ಬಲದ ಎದುರು ನಾವು ಹೋರಾಟ ಮಾಡಲಾಗುವುದಿಲ್ಲ. ಜತೆಗೆ ಉಪ ಚುನಾವಣೆಗಳಲ್ಲಿ ನಡೆಯುವ ಅಕ್ರಮಗಳನ್ನು ತಡೆಯಲು ಚುನಾವಣಾ ಆಯೋಗದಿಂದಲೂ ಸಾಧ್ಯವಾಗುವುದಿಲ್ಲ ಎಂಬುದು ಗೊತ್ತಿರುವ ವಿಚಾರ.
ಉತ್ತರಪ್ರದೇಶದಲ್ಲಿ ಅಕ್ರಮ: ಉಪ ಚುನಾವಣೆ ಮಾತ್ರವಲ್ಲ, ಎಲ್ಲ ಚುನಾವಣೆ ಗಳಲ್ಲೂ ಅಕ್ರಮಗಳು ನಡೆಯುತ್ತವೆ. ಉತ್ತರಪ್ರದೇಶ ಚುನಾವಣೆಯಲ್ಲೂ ಭಾರೀ ಅಕ್ರಮ ನಡೆದಿದೆ. ಹೀಗಾಗಿ ಚುನಾವಣಾ ಅಕ್ರಮ ತಡೆಗಟ್ಟಲು ಹೊಸ ಕಾಯ್ದೆ ತರಬೇಕಿದೆ ಎಂದು ಪ್ರತಿಪಾದಿಸಿದರು.
ಮೋದಿ ಸತ್ಯ ತಿಳಿಸಲಿ: ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಸತ್ಯ ನುಡಿಯಬಾರದು. ಕಾಶೀವಿಶ್ವನಾಥನ ಸನ್ನಿಧಿಯಿರುವ ವಾರಾಣಸಿ ಕ್ಷೇತ್ರದಿಂದ ಆಯ್ಕೆಯಾಗಿರುವ ಮೋದಿ ಅವರು ಸತ್ಯ ನುಡಿಯಬೇಕು ಎಂದು ಆಗ್ರಹಿಸಿದರು.
ಪ್ರತಿಕ್ರಿಯಿಸಲ್ಲ: ಸಿದ್ದರಾಮಯ್ಯ ಅವರ 2017-18ನೇ ಸಾಲಿನ ಮುಂಗಡಪತ್ರದ ಬಗ್ಗೆ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ರೈತರ ಸಾಲಮನ್ನಾ ಬಗ್ಗೆ ಕುಮಾರಸ್ವಾಮಿ ಬಹಳ ಒತ್ತುಕೊಟ್ಟು ಮಾತನಾಡಿದ್ದರು. ಮುಂದಿನ ಚುನಾವಣೆಯಲ್ಲಿ ಕುಮಾರ ಸ್ವಾಮಿ ಗೆಲ್ಲುವುದನ್ನು ತಡೆಯಲಾದರೂ ಸಿದ್ದರಾಮಯ್ಯ, ಸಾಲ ಮನ್ನಾ ಮಾಡುತ್ತಾರೆ, ಆ ಮೂಲಕ ಕುಮಾರಸ್ವಾಮಿ ಹೋರಾಟಕ್ಕೆ ಹಿನ್ನಡೆ ಉಂಟುಮಾಡುತ್ತಾರೆ ಎಂದು ಕೊಂಡಿದ್ದೆ, ಆದರೆ ಸಿದ್ದರಾಮಯ್ಯ ಹಾಗೆ ಮಾಡಿಲ್ಲ.
ಅವರ ಬಳಿ ಆರ್ಥಿಕ ಶಕ್ತಿ ಇದೆಯೋ ಇಲ್ಲವೋ ಅನ್ನುವುದು ತನಗೆ ಗೊತ್ತಿಲ್ಲ. ಮುಂಗಡಪತ್ರದ ಬಗ್ಗೆ ಕುಮಾರಸ್ವಾಮಿ ಹಾಗೂ ಜಗದೀಶ್ ಶೆಟ್ಟರ್ ಮಾತನಾಡಿದ್ದಾರೆ. ನಾನು ಆ ಬಗ್ಗೆ ಹಾರಿಕೆಯ ಉತ್ತರ ಕೊಡಲು ಇಷ್ಟಪಡುವುದಿಲ್ಲ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಶಾಸಕ ಜಿ.ಟಿ. ದೇವೇಗೌಡ, ಮುಖಂಡ ಹರೀಶ್‌ಗೌಡ ಮೊದಲಾದವರು ಹಾಜರಿದ್ದರು.