ಅಡಿಲೇಡ್: ‘ಚೋಕರ್ಸ್’ ಈ ಪದವನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ಇಷ್ಟವಿಲ್ಲದಿದ್ದರೂ ಬೆನ್ನಿಗೆ ಕಟ್ಟಿಕೊಂಡೆ ಬಂದಿದೆ. ಇದೀಗ ಟಿ20 ವಿಶ್ವಕಪ್ ನಲ್ಲೂ ಇದು ಮುಂದುವರಿದೆದೆ. ನಾಟಕೀಯ ಅಂತ್ಯ ಕಂಡ ನೆದರ್ಲ್ಯಾಂಡ್ ವಿರುದ್ದದ ಪಂದ್ಯದಲ್ಲಿ ಸೋತ ದಕ್ಷಿಣ ಆಫ್ರಿಕಾ ವಿಶ್ವಕಪ್ ನಿಂದಲೇ ಹೊರ ಬಿದ್ದಿದೆ.
ಈ ಅಚ್ಚರಿಯ ಫಲಿತಾಂಶದಿಂದಾಗಿ ಭಾರತ ತಂಡವು ಕೊನೆಯ ಪಂದ್ಯವಾಡುವ ಮೊದಲೇ ಸೆಮಿ ಫೈನಲ್ ಪ್ರವೇಶಿಸಿತು. ಸೆಮಿ ಆಸೆಯನ್ನೇ ಬಿಟ್ಟಿದ್ದ ಪಾಕಿಸ್ಥಾನ ಮತ್ತು ಬಾಂಗ್ಲಾ ಆಸೆ ಜೀವಂತವಾಗಿದ್ದು ಇದೇ ಮೈದಾನದಲ್ಲಿ ಇವರಿಬ್ಬರ ನಡುವೆ ನಡಯಲಿರುವ ಪಂದ್ಯದಲ್ಲಿ ಗೆದ್ದವರು ಸೆಮಿಫೈನಲ್ ಪ್ರವೇಶಿಸಲಿದ್ದಾರೆ.
ಅಡಿಲೇಡ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲ್ಯಾಂಡ್ 4 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿದರೆ, ಬ್ಯಾಟಿಂಗ್ ಮರೆತಂತೆ ಆಡಿದ ಹರಿಣಗಳು 8 ವಿಕೆಟ್ ಕಳೆದುಕೊಂಡು 145 ರನ್ ಮಾತ್ರ ಗಳಿಸಿದರು. ಇದರೊಂದಿಗೆ ನೆದರ್ಲ್ಯಾಂಡ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಅಂತಾರಾಷ್ಟ್ಈಯತ ಮಟ್ಟದಲ್ಲಿ ಮೊತ್ತ ಮೊದಲ ಜಯ ಸಾಧಿಸಿತು.
ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಡಚ್ಚರು ಉತ್ತಮ ಆರಂಭ ಪಡೆದರು. ನಂತರ ಬಿರುಸಿನ ಬ್ಯಾಟಿಂಗ್ ಮಾಡಿದ ಟಾಮ್ ಕೂಪರ್ ಮತ್ತು ಅಕರ್ಮನ್ ಉತ್ತಮ ಮೊತ್ತ ಗಳಿಸಲು ಸಹಾಯ ಮಾಡಿದರು. ಕೂಪರ್ 19 ಎಸೆತದಲ್ಲಿ 35 ರನ್ ಗಳಿಸಿದರೆ, ಅಕರ್ಮನ್ 26 ಎಸೆತದಲ್ಲಿ 41 ರನ್ ಪೇರಿಸಿದರು.
ಗುರಿ ಬೆನ್ನತ್ತಿದ ಹರಿಣಗಳ ಪರ ಯಾರೂ ನಿಂತು ಆಡುವ ಜವಾಬ್ದಾರಿ ಹೊರಲಿಲ್ಲ. ಯಾರಿಂದಲೂ ದೊಡ್ಡ ಇನ್ನಿಂಗ್ಸ್ ಬರಲಿಲ್ಲ. 25 ರನ್ ಗಳಿಸಿದ್ದ ರುಸ್ಸೋ ಅವರದ್ದೆ ಹೆಚ್ಚಿನ ಗಳಿಕೆ. ಸತತ ವಿಕೆಟ್ ಕಳೆದುಕೊಂಡ ದ.ಆಫ್ರಿಕಾ 13 ರನ್ ಅಂತರದ ಸೋಲನುಭವಿಸಿದೆ. ನೆದರ್ಲ್ಯಾಂಡ್ ಪರ ಗ್ಲೋವರ್ ಮೂರು ವಿಕೆಟ್, ಕ್ಲಾಸನ್ ಮತ್ತು ಲೀಡ್ ತಲಾ ಎರಡು ವಿಕೆಟ್ ಕಿತ್ತರು.
ಮಳೆ ಮತ್ತು ದುರಾದೃಷ್ಟ: ದೊಡ್ಡ ಕೂಟಗಳಲ್ಲಿ ದ.ಆಫ್ರಿಕಾದ ಅದೃಷ್ಟ ಯಾವತ್ತೂ ಕೈಕೊಡುತ್ತಾ ಬಂದಿದೆ. ಈ ಕೂಟದ ಮೊದಲ ಪಂದ್ಯದಲ್ಲಿ ಮಳೆ ಕಾಟಕ್ಕೆ ಆಫ್ರಿಕಾ ತುತ್ತಾಗಿತ್ತು. ಜಿಂಬಾಬ್ವೆ ವಿರುದ್ಧ ಮಳೆ ಬಾಧಿತ ಪಂದ್ಯದಲ್ಲಿ ದ.ಆಫ್ರಿಕಾ ಗೆ ನಾಲ್ಕು ಓವರ್ ನಲ್ಲಿ13 ರನ್ ಅಗತ್ಯವಿದ್ದಾಗ ಮಳೆ ಮತ್ತೆ ಬಂದಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಕನಿಷ್ಠ ಐದು ಓವರ್ ಆಟ ನಡೆಯದ ಕಾರಣ ಈ ಪಂದ್ಯವನ್ನು ರದ್ದು ಮಾಡಲಾಗಿತ್ತು. ಒಂದು ವೇಳೆ ಅಂದು ದಕ್ಷಿಣ ಆಫ್ರಿಕಾ ಪಂದ್ಯ ಗೆದ್ದಿದ್ದರೆ ಇಂದು ಸುಲಭವಾಗಿ ಸೆಮಿ ಪ್ರವೇಶ ಪಡೆಯುತ್ತಿತ್ತು.
ಇದನ್ನೂ ಓದಿ: ದಕ್ಷಿಣ ಆಫ್ರಿಕಾ, ವಿಶ್ವಕಪ್ ಮತ್ತು ಮಳೆ…; ಇದು ದುರಾದೃಷ್ಟದ ಪರಾಕಾಷ್ಠೆ