ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಯಲಗೂರೇಶ್ವರ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ನೇಪಾಳಿ ನೋಟುಗಳು ಹಾಗೂ ಸಂಕಷ್ಟ ಪರಿಹಾರಕ್ಕೆ ಭಕ್ತರು ಹಲವು ಸಮಸ್ಯೆಗಳ ಪರಿಹಾರಕ್ಕೆ ಲಿಖಿತ ರೂಪದಲ್ಲಿ ಮೊರೆ ಇಟ್ಟ ಪತ್ರಗಳು ಪತ್ತೆಯಾಗಿವೆ.
ಯಲಗೂರೇಶ ಎಂದು ಕರೆಯಲ್ಪಡುವ ಯಲಗೂರಿನ ಶ್ರೀಆಂಜನೇಯ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಸೋಮವಾರ ನಡೆದ ಅಂತಿಮ ಎಣಿಕೆಯಲ್ಲಿ 50,65,970 ರೂ. ಕಾಣಿಗೆ ಹುಂಡಿಯಲ್ಲಿ ಸಮಗ್ರಹವಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಂತ ಜಾಗೃತ ದೇವರೆಂದು ನಂಬಿಕೆ ಇರುವ ಯಲಗೂರು ಯಲಗೂರೇಶನ ಕಾಣಿಕೆ ಹುಂಡಿಯನ್ನು ದೇವಸ್ಥಾನದ ಆಡಳಿತ ಮಂಡಳಿ ಎಣಿಕೆಗೆ ಮುಂದಾಗಿತ್ತು. 50 ಜನರು ಹುಂಡಿ ಎಣಿಕೆ ಕಾರ್ಯದಲ್ಲಿ ತೊಡಗಿದ್ದರು.
ಹುಂಡಿ ಎಣಿಕೆ ವೇಳೆ ವಿವಿಧ ಬಗೆಯ ಮುಖ ಬೆಲೆಯ ನೇಪಾಳಿ ನೋಟುಗಳು ಪತ್ತೆಯಾಗಿವೆ. ಭಾರತದ 2000 ರೂ. ಮುಖ ಬೆಲೆಯ 40 ನೋಟುಗಳೂ ಹುಂಡಿ ಎಣಿಕೆ ಕಾರ್ಯದಲ್ಲಿ ಪತ್ತೆಯಾಗಿವೆ.
ಕೆಲವು ಭಕ್ತರು ಕಾಣಿಕೆ ಹುಂಡಿಗೆ ಕೇವಲ ಕಾಣಿಗೆಯನ್ನು ಮಾತ್ರ ಸಲ್ಲಿಸದೇ, ನೌಕರಿ, ಸಾಲದ ಸಮಸ್ಯೆಗಳ ಪರಿಹಾರಕ್ಕೆ ಲಿಖಿತ ರೂಪದಲ್ಲಿ ತಮ್ಮ ಇಷ್ಟಾರ್ಥ ಈಡೇರಿಕೆಗೆ ಕೋರಿಕೆ ಮಂಡಿಸಿದ್ದಾರೆ. ಓರ್ವ ಭಕ್ತ ನಾನು ಮಾಡಿಕೊಂಡಿರುವ ಸಾಲ ತೀರಿಸುವ ದಾರಿ ತೋರು ಆಂಜನೇಯ ಎಂದು ಪರಿಹಾರ ಮಾರ್ಗಕ್ಕೆ ಲಿಖಿತ ಮೊರೆ ಇಟ್ಟಿದ್ದಾರೆ.
ಮರಾಠಿ ಭಾಷೆಯಲ್ಲಿರುವ ಒಂದು ಪತ್ರದಲ್ಲಿ ಭಕ್ತ ತನ್ನನ್ನು ಪಿಎಸ್‍ಐ ಹುದ್ದೆಗೆ ನೇಮಕ ಮಾಡುವಲ್ಲಿ ಹರಸುವಂತೆ ಲಿಖಿತ ಮನವಿ ಮೂಲಕ ಹರಕೆಯ ಚೀಟಿ ಬರೆದು ಹುಂಡಿಗೆ ಹಾಕಿದ್ದಾನೆ. ಮತ್ತೋರ್ವ ಭಕ್ತ ತನ್ನನ್ನು ಎಸ್‍ಡಿಎ-ಎಫ್‍ಡಿಎ ಹುದ್ದೆಗೆ ನೇಮಕವಾಗುವಂತೆ ಆಶೀರ್ವದಿಸುವಂತೆ ಪರಿಪರಿಯಾಗಿ ಬೇಡಿಕೊಂಡಿದ್ದಾನೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಪೂರ್ವ ದೊಂಬಿವಲಿಯ ನಿಂಜೆ ಮೂಲದ ಚಂದ್ರೇಶ ಲೋಧಾ ಸ್ಮಾರಕ ಶಾಲೆಯ ಉತ್ತರ ಪತ್ರಿಕೆ ಹಾಳೆಯಲ್ಲಿ ತಮ್ಮ ಇಷ್ಟಾರ್ಥ ಸಿದ್ಧಿಸುವಂತೆ ಮರಾಠಿ ಭಾಷೆಯಲ್ಲಿ ಯಲಗೂರೇಶನಿಗೆ ಭಕ್ತಿ ಪೂರ್ವಕ ಮನವಿ ಮಾಡಲಾಗಿದೆ.