ಬೆಂಗಳೂರು: ನಗರದಲ್ಲಿ ಮನಕಳ್ಳತನ ಕೃತ್ಯಗಳಲ್ಲಿ ಸಕ್ರಿಯವಾಗಿದ್ದ ನೇಪಾಳ ಮೂಲದ ತಂಡವನ್ನು ಮಾರತ್‌ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ನೇಪಾಳದ ಮಂಗಳ್ ಸಿಂಗ್, ಮನೋಜ್ ಬಹುದ್ದೂರ್, ಸುದೇಮ್ ದಾಮಿ, ವಿಶಾದ್, ವಿನೋದ್ ಕುಮಾರ್ ಸಿಂಗ್ ಬಂಧಿತರು.
ಆರೋಪಿಗಳಿಂದ 4.50 ಲಕ್ಷ ರೂ. ಮೌಲ್ಯದ ಏಳೂವರೆ ಕೆ.ಜಿ ಬೆಳ್ಳಿ ಆಭರಣ ಒಂದು ಸೋನಿ ಟಿವಿ, ಒಂದು ಲ್ಯಾಪ್‌ಟಾಪ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು. ಮನೆಕಳ್ಳತನ ಮಾಡಲೆಂದು ನೇಪಾಳದಿಂದ ನಗರಕ್ಕೆ ಬರುತ್ತಿದ್ದ ತಂಡ.
ದಸರಾ, ಬೇಸಿಗೆ ಕಾಲ ಹಬ್ಬಗಳ ವಿಶೇಷ ಸಂದರ್ಭಗಳನ್ನು ಗುರುತು ಮಾಡಿಕೊಳ್ಳುತ್ತಿದ್ದರು. ಅಪಾರ್ಟ್‌ಮೆಂಟ್‌ಗಳು, ಪ್ರತಿಷ್ಠಿತ ಮನೆಗಳ ಸೆಕ್ಯೂರಿಟಿ ಗಾರ್ಡ್‌ಗಳಾಗಿ ಕೆಲಸ ಆರಂಭಿಸುತ್ತಿದ್ದ ಆರೋಪಿಗಳು ಶ್ರೀಮಂತರ ಮನೆಗಳನ್ನು ಗುರುತು ಹಾಕಿಕೊಳ್ಳುತ್ತಿದ್ದರು.
ಗುರುತು ಮಾಡಿಕೊಂಡ ಮನೆಗಳ ಸದಸ್ಯರು ಪ್ರವಾಸ, ಬೇರೆ ಊರಿಗೆ ಹೋಗುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದ ಆರೋಪಿಗಳು ರಾತ್ರಿ ವೇಳೆ ಕಿಟಕಿ, ಮನೆ ಬಾಗಿಲುಗಳನ್ನು ಆ್ಯಕ್ಸಲ್ ಬ್ಲೇಡ್‌ಗಳಿಂದ ಕತ್ತರಿಸಿ ಒಳನುಗ್ಗಿ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರು 2007ರಿಂದಲೇ ನಗರದಲ್ಲಿ ಮನೆಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಸಂಪಂಗಿ ರಾಮನಗರ, ಜೀವನ್ ಭೀಮಾನಗರ, ಮಲ್ಲೇಶ್ವರ ಠಾಣಾ ವ್ಯಾಪ್ತಿಗಳಲ್ಲಿ ಮನೆಗಳವು ಕೃತ್ಯಗಳನ್ನು ನಡೆಸಿದ್ದರು. ಈ ಹಿಂದೆ ಚಾಮರಾಜಪೇಟೆ ಪೊಲೀಸರಿಂದ ಬಂಧಿತರಾಗಿ ಜೈಲು ಸೇರಿದ್ದ ಆರೋಪಿಗಳು ಜಾಮೀನಿನ ಆಧಾರದಲ್ಲಿ ಬಿಡುಗಡೆಗೊಂಡಿದ್ದರು.
ಇತ್ತೀಚೆಗೆ ಮಾರತ್‌ಹಳ್ಳಿಯಲ್ಲಿ ನಡೆದ ಕನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಪುನಃ ಐದು ಪ್ರಕರಣಗಳು ಪತ್ತೆಯಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.