Advertisement

ಎನ್‌ಇಪಿ: ಪರೀಕ್ಷಾ ಸುಧಾರಣೆ, ಕಲಿಕಾ ಮೌಲ್ಯಮಾಪನ

11:35 PM Sep 12, 2022 | Team Udayavani |

ಬೆಂಗಳೂರು: ದೇಶದಲ್ಲಿಯೇ ಮೊದಲ ರಾಜ್ಯವಾಗಿ ರಾಷ್ಟ್ರೀಯ ಶಿಕ್ಷಣ ನೀತಿ-2020 (ಎನ್‌ಇಪಿ) ಜಾರಿಗೊಳಿಸಿರುವ ಕರ್ನಾಟಕವು, ಈಗ “ಶಾಲಾ ಶಿಕ್ಷಣದ ಪರೀಕ್ಷಾ ಸುಧಾರಣೆ ಮತ್ತು ಮಕ್ಕಳ ಸಮಗ್ರ ಕಲಿಕಾ ಮೌಲ್ಯಮಾಪನ’ ಕಾರ್ಯಕ್ಕೆ ಸಿದ್ಧತೆ ನಡೆಸುತ್ತಿದೆ.

Advertisement

ಪರೀಕ್ಷಾ ವಿಚಾರವಾಗಿ ಸದ್ಯ ಮಂಡಳಿ (ಬೋರ್ಡ್‌) ಪರೀಕ್ಷೆಗಳನ್ನು ನಡೆಸುವುದಕ್ಕಾಗಿ ಕರ್ನಾಟಕ ಪರೀಕ್ಷಾ ಮಂಡಳಿ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಯ ಪರೀಕ್ಷಾ ಮಂಡಳಿಗಳಿವೆ. ಎನ್‌ಇಪಿ ಜಾರಿಯಾಗಿರುವುದರಿಂದ ಇವೆರಡೂ ಮುಂದಿನ ದಿನಗಳಲ್ಲಿ ವಿಲೀನವಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪರೀಕ್ಷಾ ಮಂಡಳಿಯಾಗಿ ಕಾರ್ಯನಿರ್ವಹಿಸಲಿದೆ.

ಈ ಸಂಬಂಧ ಇತ್ತೀಚೆಗೆ ಕೇಂದ್ರ ಶಿಕ್ಷಣ ಇಲಾಖೆಯು ರಾಜ್ಯದ ಶಿಕ್ಷಣ ಅಧಿಕಾರಿಗಳನ್ನು ಒಳಗೊಂಡಂತೆ ದೇಶಾದ್ಯಂತ ಸಭೆ ನಡೆಸಿದ್ದು, “ಶಾಲಾ ಶಿಕ್ಷಣದ ಪರೀಕ್ಷಾ ಸುಧಾರಣೆಗಳು ಹಾಗೂ ಮಕ್ಕಳ ಸಮಗ್ರ ಕಲಿಕಾ ಮೌಲ್ಯಮಾಪನ’ ಕುರಿತು ಸಲಹೆ ಸೂಚನೆಗಳನ್ನು ನೀಡಿದೆ.

ಏನಿದು ಪರೀಕ್ಷಾ ಸುಧಾರಣೆ?
ಪ್ರಸ್ತುತ 10 ಮತ್ತು 12ನೇ ತರಗತಿಗಳ ಪರೀಕ್ಷೆಗಳನ್ನು ಮಾತ್ರ ನಡೆಸಿ ಫ‌ಲಿತಾಂಶ ನೀಡುತ್ತಿರುವ ಮಂಡಳಿಗಳು, ಮುಂದೆ ಎಲ್ಲ ತರಗತಿಗಳ ಮಕ್ಕಳ ಮೌಲ್ಯಮಾಪನ ಮಾಡಬೇಕಾಗುತ್ತದೆ.

ಎನ್‌ಇಪಿ ಅಡಿ ಶಾಲಾ ಶಿಕ್ಷಣವು 3 ವರ್ಷದ ಮಗುವಿನಿಂದ ಆರಂಭ ವಾಗಿ 18 ವರ್ಷದವರೆಗೂ ಶಾಲಾ ಶಿಕ್ಷಣವಾಗಲಿದೆ. ಅಂದರೆ ಶಿಶುವಿಹಾರದಿಂದ 12ನೇ ತರಗತಿವರೆಗೂ ಸಾಗಲಿದೆ. ಶಾಲಾ ಶಿಕ್ಷಣದ ಆರಂಭಿಕ ಹಂತವಾದ 3ನೇ ವರ್ಷದ ಮಗುವಿಗೆ ಪ್ರಸಕ್ತ ಸಾಲಿನಲ್ಲಿ “ಬಾಲಾವಸ್ಥೆಪೂರ್ವ ಆರೈಕೆ ಮತ್ತು ಶಿಕ್ಷಣ’ (ಇಸಿಸಿಇ) ಅನ್ನು ಜಾರಿಗೊಳಿಸುತ್ತಿದೆ.

Advertisement

ಮೊದಲ ಹಂತವಾಗಿ 3ನೇ ವರ್ಷದ ಮಗುವಿನ ಸರ್ವಾಂಗೀಣ ಕಲಿಕೆಯನ್ನು ಮುಂದಿನ ವರ್ಷ ಮಂಡಳಿಗಳು ಮೌಲ್ಯಮಾಪನ ಮಾಡಬೇಕಾಗುತ್ತದೆ. ಇದು ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗದೆ, ಮಗುವಿನ ಶೈಕ್ಷಣಿಕ ಮತ್ತು ವೈಯಕ್ತಿಕ ವಿಚಾರಗಳ ಮೌಲ್ಯಮಾಪನ ಮಾಡಲಾಗುತ್ತದೆ. ಮಗುವಿನ ಆರೋಗ್ಯ, ಬೌದ್ಧಿಕ ಮಟ್ಟ, ಕಲಿಕಾ ಸಾಮರ್ಥ್ಯ, ನಡವಳಿಕೆ, ಆಟೋಟ ಸಹಿತ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆ, ಒಂದು ತಂಡವಾಗಿ ಪಾಲ್ಗೊಳ್ಳುವಿಕೆಯಲ್ಲಿ ಮಗುವಿನ ಪಾತ್ರ ಹೀಗೆ ಹತ್ತಾರು ಆಯಾಮಗಳಲ್ಲಿ ಮಗುವಿನ ಮೌಲ್ಯಮಾಪನ ನಡೆಸಲಾಗುತ್ತದೆ.

ರಾಜ್ಯದಲ್ಲಿ ಎನ್‌ಇಪಿ ಜಾರಿಯಾದಂತೆ ಆಯಾ ತರಗತಿವಾರು ಮೌಲ್ಯಮಾಪನ ಮುಂದುವರಿ ಯುತ್ತದೆ. 2030ರ ವೇಳೆಗೆ ಎನ್‌ಇಪಿ ಸಂಪೂರ್ಣ ಅನುಷ್ಠಾನವಾಗಲಿದ್ದು, ಅಷ್ಟರಲ್ಲಿ 12ನೇ ತರಗತಿ ವರೆಗೆ ಪೂರ್ಣ ಪ್ರಮಾಣದಲ್ಲಿ ಶಾಲಾ ಶಿಕ್ಷಣದ ಭಾಗವಾಗಲಿದೆ. ಮಂಡಳಿಗಳು ಒಂದೊಂದೇ ತರಗತಿಗಳನ್ನು ಸೇರಿಸಿ ಮೌಲ್ಯಮಾಪನದ ಹೊಣೆ ಹೊರಲಿವೆ ಎಂದು ತಿಳಿದು ಬಂದಿದೆ.

ಪರೀಕ್ಷಾ ಸುಧಾರಣೆ ಮತ್ತು ಮಗುವಿನ ಸರ್ವಾಂಗೀಣ ಮೌಲ್ಯಮಾಪನವನ್ನು ಹೇಗೆ ಮಾಡಬೇಕು ಎಂಬುದರ ಕುರಿತಂತೆ ಇತ್ತೀಚೆಗೆ ಕೇಂದ್ರ ಶಿಕ್ಷಣ ಇಲಾಖೆ ಸಭೆ ನಡೆಸಿ ಕೆಲವು ಸಲಹೆ ಸೂಚನೆಗಳನ್ನು ನೀಡಿದೆ. ಮುಂದಿನ ವರ್ಷದ ವೇಳೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಸಲಹೆ ನೀಡಿದೆ.
– ಎಚ್‌.ಎನ್‌. ಗೋಪಾಲಕೃಷ್ಣ,
ನಿರ್ದೇಶಕರು, ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ

– ಎನ್‌. ಎಲ್‌. ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next