Advertisement

ಎನ್‌ಇಪಿ ಜಾರಿ: ಪ್ರಥಮ ಸ್ಥಾನದ ದಾಖಲೆಗಾಗಿ ತರಾತುರಿ ಬೇಡ

09:44 PM Aug 25, 2022 | Team Udayavani |

ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಅನುಷ್ಠಾನಗೊಳಿಸಿದ ಮೊದಲ ರಾಜ್ಯವೆಂಬ ಪಟ್ಟ ಪಡೆಯುವುದಕ್ಕಾಗಿ ತರಾತುರಿಯಲ್ಲಿ ನೀತಿ ಅನುಷ್ಠಾನ ಮಾಡುವ ಬದಲು ಸಂಪೂರ್ಣ ಸಿದ್ಧತೆಯನ್ನು ಮಾಡಿಕೊಂಡು ಅನುಷ್ಠಾನಗೊಳಿಸಿದರೆ, ನೀತಿಗೊಂದು ಅರ್ಥ ಬರಲಿದೆ. ಮಾತ್ರವಲ್ಲ, ಸರಕಾರದ ಆಶಯ ಈಡೇರಿದಂತಾಗಲಿದೆ.

Advertisement

ಎನ್‌ಇಪಿಯನ್ನು ಅಳವಡಿಸಿಕೊಂಡ ಮೊದಲ ರಾಜ್ಯವೆಂಬ ಹೆಗ್ಗಳಿಕೆಯನ್ನು ಕರ್ನಾಟಕ ಹೊಂದಿದೆ. ಕೊರೊನಾ ನಡುವೆಯೇ ಉನ್ನತ ಶಿಕ್ಷಣದಲ್ಲಿ ಎನ್‌ಇಪಿಯನ್ನು ಜಾರಿಗೊಳಿಸಲಾಯಿತು. ಈಗ ಅದೇ ದಾರಿಯಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಎನ್‌ಇಪಿ ಜಾರಿಯೂ ಆಗುತ್ತಿದೆ. ಪ್ರಾಥಮಿಕ ಶಿಕ್ಷಣದಲ್ಲಿ 3 ವರ್ಷದಿಂದ 18 ವರ್ಷದವರೆಗೆ ಶಾಲಾ ಶಿಕ್ಷಣವೆಂದು ಪರಿಗಣಿಸಲಾಗಿದೆ. ಮೊದಲ ಹಂತವಾದ 3ರಿಂದ 5 ವರ್ಷದ ಮಕ್ಕಳಿಗೆ ಬಾಲ್ಯ ಪೂರ್ವ ಆರೈಕೆ ಮತ್ತು ಶಿಕ್ಷಣವನ್ನು (ಇಸಿಸಿಇ) ನೀಡುತ್ತಿದೆ. 20 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ 2022-23ನೇ ಸಾಲಿನಿಂದ ಎನ್‌ಇಪಿ ಆರಂಭ ಮಾಡುವುದಾಗಿ ಸರಕಾರವು ಕಳೆದ ಎಪ್ರಿಲ್‌ನಿಂದಲೇ ಹೇಳಿಕೊಂಡು ಬಂದಿದೆ. ಆ ಪ್ರಕಾರವಾಗಿ ಜೂನ್‌ನಿಂದಲೇ ಆರಂಭ ಮಾಡುವುದಾಗಿಯೂ ತಿಳಿಸಿತ್ತು.

ಆದರೆ ಈಗ ಪ್ರಾಥಮಿಕ ಶಿಕ್ಷಣ ಕುರಿತಂತೆ ಅಕ್ಟೋಬರ್‌ನಲ್ಲಿ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್‌ಸಿಇಆರ್‌ಟಿ) ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು  (ಎನ್‌ಸಿಎಫ್) ಬಿಡುಗಡೆ ಮಾಡಲಿದೆ. ಅದಕ್ಕೆ ತಕ್ಕಂತೆ ರಾಜ್ಯದಲ್ಲಿಯೂ ಕರ್ನಾಟಕ ಪಠ್ಯಕ್ರಮ ಚೌಕಟ್ಟು (ಕೆಸಿಎಫ್) ಮಾಡಿದ ಅನಂತರ ಪಠ್ಯಪುಸ್ತಕವನ್ನು ಸಿದ್ಧಪಡಿಸಲಾಗುತ್ತದೆ. ನವೆಂಬರ್‌ನಲ್ಲಿ ಎನ್‌ಇಪಿ ಪಠ್ಯವನ್ನು ಅಳವಡಿಸಿಕೊಳ್ಳುವುದಾಗಿ ಸರಕಾರ ತಿಳಿಸಿದೆ.

ಪಠ್ಯಕ್ರಮ ರಚನೆಗೆ ಸಂಬಂಧಿಸಿದಂತೆ ಸರಕಾರವು ವಿವಿಧ 6 ಉಪ ಸಮಿತಿಗಳನ್ನು ರಚನೆ ಮಾಡಿದೆ. ನೀತಿ ಅನುಷ್ಠಾನಕ್ಕಾಗಿ ನಿವೃತ್ತ ಐಎಎಸ್‌ ಅಧಿಕಾರಿ ಮದನ್‌ ಗೋಪಾಲ್‌ ನೇತೃದಲ್ಲಿ ಕಾರ್ಯಪಡೆ ರಚಿಸಿದೆ. ಆದರೆ ಕೇಂದ್ರ ಸರಕಾರ ಬಿಡುಗಡೆ ಮಾಡುವ ಎನ್‌ಪಿಎಫ್ ಅನುಗುಣವಾಗಿ ರಾಜ್ಯದ ಪಠ್ಯಕ್ರಮ ರಚನೆ ಮಾಡಿ, ಪಠ್ಯಪುಸ್ತಕಗಳನ್ನು ಮುದ್ರಣ ಮಾಡುವ ಕೆಲಸ ಕೇವಲ ಒಂದು ತಿಂಗಳಿನಲ್ಲಿ ಸಾಧ್ಯವಾಗಲಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಎನ್‌ಇಪಿ ಜಾರಿಗೂ ಮುನ್ನ ಸರಕಾರವು ಅಂಗನವಾಡಿ ಕಾರ್ಯಕರ್ತೆಯರನ್ನು ಸಂಪೂರ್ಣವಾಗಿ ಅಣಿಗೊಳಿಸಬೇಕು. ರಾಜ್ಯದಲ್ಲಿ ಈವರೆಗೆ ಪಠ್ಯಪುಸ್ತಕವೇ ರಚನೆಯಾಗಿಲ್ಲ, ಇನ್ನು ಅಂಗನವಾಡಿ ಕಾರ್ಯಕರ್ತೆಯರನ್ನು ಯಾವ ಆಧಾರದಲ್ಲಿ ತರಬೇತಿ ನೀಡಿ ಸಿದ್ಧಗೊಳಿಸಿದ್ದಾರೆ ಎಂಬುದು ತಿಳಿಯುತ್ತಿಲ್ಲ.

Advertisement

ರಾಜ್ಯದಲ್ಲಿ 61 ಸಾವಿರ ಅಂಗನವಾಡಿಗಳಿದ್ದು, ಇಲ್ಲಿ 732 ಸ್ನಾತಕೋತ್ತರ ಪದವಿ, 6,017 ಪದವಿ, 14,303 ಪಿಯುಸಿ ಹಾಗೂ 40,787 ಎಸ್ಸೆಸ್ಸೆಲ್ಸಿ ಪೂರೈಸಿದ ಕಾರ್ಯಕರ್ತೆಯರು ಇದ್ದಾರೆ. ಈ ಎಸೆಸೆಲ್ಸಿ ಪೂರೈಸಿದವರಲ್ಲಿ ಬಹುತೇಕರು 48 ವರ್ಷ ಮೇಲ್ಪಟ್ಟವರಾಗಿ ದ್ದಾರೆ. ಇವರು ಸರಕಾರ ಎನ್‌ಇಪಿಯನ್ನು ಎಷ್ಟರಮಟ್ಟಿಗೆ ಅರ್ಥ ಮಾಡಿಕೊಂಡು ಬೋಧಿಸುತ್ತಾರೆ ಎಂಬುದನ್ನು ಕಾಡು ನೋಡಬೇಕಿದೆ.

ಮಕ್ಕಳ ಶೇ.80ರಷ್ಟು ಮೆದುಳು ಬೆಳವಣಿಗೆಯು ಬಾಲ್ಯಾವಸ್ಥೆಯಲ್ಲಿ, ಅದರಲ್ಲಿಯೂ 3ರಿಂದ 8 ವರ್ಷದ ಅವಧಿಯಲ್ಲಿ ಆಗುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಈ ವಯಸ್ಸಿನ ಮಕ್ಕಳಿಗೆ ಆತುರಾತುರವಾಗಿ ಯೋಜನೆ ಜಾರಿ ಮಾಡಿ, ತಾವೇ ಮೊದಲು ಎಂದು ಬೀಗುವುದಕ್ಕಿಂತ ಸಂಪೂರ್ಣ ಸಿದ್ಧತೆ ಮಾಡಿಕೊಂಡು ಮುಂದಿನ ವರ್ಷದಿಂದ ಅನುಷ್ಠಾನ ಮಾಡುವುದು ಒಳಿತು.

Advertisement

Udayavani is now on Telegram. Click here to join our channel and stay updated with the latest news.

Next