Advertisement

“ಸಾಹಿತ್ಯಲೋಕ-ಸಿನಿಮಾ ಮಧ್ಯೆ ಪ್ರೇಮಾಂಕುರವಾಗಲಿ’

12:38 PM Jan 23, 2017 | |

ಧಾರವಾಡ: ಸಾಹಿತ್ಯ ಲೋಕದ ಜ್ಞಾನದಿಂದ ಸಿನೇಮಾ ಪ್ರಪಂಚ ದೂರವಿದ್ದು, ಈ ಅಂತರ ಕಡಿಮೆಯಾಗಿ ಇಲ್ಲಿ ಪ್ರೇಮಾಂಕುರವಾಗಬೇಕಿದೆ ಎಂದು ಚಿತ್ರ ನಟ, ನಿರ್ದೇಶಕ ರಮೇಶ ಅರವಿಂದ ಅಭಿಪ್ರಾಯಪಟ್ಟರು. ಧಾರವಾಡ ಸಾಹಿತ್ಯ ಸಂಭ್ರಮದ “ಸಿನೇಮಾ ಸಂವಾದ ಗೋಷ್ಠಿ’ಯಲ್ಲಿ ಮಾತನಾಡಿದ ಅವರು, ಸಾಹಿತ್ಯ ಲೋಕದಲ್ಲಿ ನಿಧಿ ಇರುವ ಬಗ್ಗೆ ಸಿನೇಮಾ ಮಂದಿಗೆ ಗೊತ್ತಿಲ್ಲ.

Advertisement

ಸಾಹಿತ್ಯ ಮತ್ತು ಸಿನೇಮಾ ಲೋಕಗಳು ಪರಸ್ಪರ ಅರಿಯುವ ಮೂಲಕ ಒಳ್ಳೆಯ ಸಂಬಂಧ ಕಟ್ಟುವುದು ಅಗತ್ಯವಿದೆ. ಇದರಿಂದ ಎರಡೂ ಕ್ಷೇತ್ರಗಳಿಗೂ ಲಾಭವಿದೆ. ಹೀಗಾಗಿ ಚಿತ್ರರಂಗ ಹಾಗೂ ಸಾಹಿತ್ಯದ ಮಧ್ಯೆ ಲವ್‌ಸ್ಟೋರಿ ಆಗಬೇಕಿದೆ ಎಂದರು. ಮೂರು ದಶಕಗಳ ಸಿನೇಮಾ ರಂಗದ ಬದುಕಿನಲ್ಲಿ ಪುಷ್ಪಕವಿಮಾನ 100ನೇ ಚಿತ್ರವಾಗಿ ನಟಿಸಿದ್ದು, ಇದರಲ್ಲಿನ ಪಾತ್ರ ತೃಪ್ತಿ ತಂದಿದೆ. 

ಸದ್ಯ ಪರಭಾಷೆಗಳ ಎದುರು ಕನ್ನಡ ಚಿತ್ರಗಳು ಹೋರಾಟ ನಡೆಸಿವೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾಯ್ದೆ ಅಥವಾ ಕಾನೂನು ತಂದರೆ ಲಾಭವಿಲ್ಲ. ಕನ್ನಡದಲ್ಲಿ ಅದ್ಭುತ, ಒಳ್ಳೆಯ ಚಿತ್ರ ನಿರ್ಮಿಸುವ ಮೂಲಕ ಪೈಪೋಟಿ ನೀಡಬೇಕಿದ್ದು, ಬಂದರೆ ಪ್ರೇಕ್ಷಕರೇ ಬೆನ್ನು ತಟ್ಟಿ ನಿಲ್ಲುತ್ತಾರೆ. ಒಳ್ಳೆಯ ಚಿತ್ರಕ್ಕೆ ಭಾಷೆ ಗಡಿಯಿಲ್ಲ ಎಂದರು.

ಉತ್ತರ ನಿರ್ಲಕ್ಷ ಸತ್ಯ: ಉತ್ತರ ಕರ್ನಾಟಕದ ಭಾಗದ ಸಾಹಿತ್ಯ ಲೋಕ ಹಾಗೂ ಸಂಸ್ಕೃತಿ ಬಗ್ಗೆ ಈವರೆಗೂ ಸ್ಪಷ್ಟ ಅರಿವು ಬಾರದಿರುವುದು ತಲೆ ತಗ್ಗಿಸಬೇಕಾದ ಸಂಗತಿಯೇ ಸರಿ. ಈ ಭಾಗದಿಂದ ಬಂದ ಪ್ರತಿಭೆಗಳಿಗೆ ಅವಕಾಶ ನೀಡುವ ಕೆಲಸ ನಾನಂತೂ ಮಾಡುತ್ತ ಬಂದಿದ್ದೇನೆ. ರಾಜ್ಯದ ಮೂಲೆ-ಮೂಲೆಯಲ್ಲೂ ಪ್ರತಿಭೆಗಳಿದ್ದು, ಅವುಗಳಿಗೆ ಅವಕಾಶ ನೀಡಬೇಕಿದೆ. ಪ್ರತಿಭೆಗಳು ದೊಡ್ಡಮಟ್ಟದ ಕನಸು ಕಾಣದೇ ಸಿಕ್ಕ ಅವಕಾಶದಲ್ಲಿಯೇ ದೊಡ್ಡ ಸಾಧನೆ ಮಾಡುವತ್ತ ಶ್ರಮವಹಿಸಿದರೆ ಅವಕಾಶಗಳು ತಾವಾಗಿಯೇ ಒಲಿದು ಬರಲಿವೆ ಎಂದರು. 

ಸಾಹಿತಿಗಳ ಹಾಗೂ ಮಕ್ಕಳ ಪುಸ್ತಕಗಳು ನನ್ನ ಸಿನೇಮಾ ಬದುಕಿಗೆ ಸಾಕಷ್ಟು ಸಹಕಾರಿ ಆಗಿದ್ದು, ಸಿನೇಮಾ ರಂಗದಲ್ಲಿ ಮುನ್ನಡೆಯಲು ಸಹಾಯ ಮಾಡಿವೆ. ಸಿನೇಮಾ ಬದುಕಿನ ಆಯ್ಕೆಗಳು ಸಂತಸ-ಸಂಕಷ್ಟ ಎಲ್ಲವನ್ನೂ ತಂದಿವೆ. ನಮ್ಮ ಆಯ್ಕೆಗಳು ಮುಂದಿನ ಪರಿಣಾಮಕ್ಕೆ ದಾರಿ ಆಗಲಿದ್ದು, ಕೆಲವೊಂದು ಬಾರಿ ಎಡವಿದ್ದೂ ಉಂಟು. ಇನ್ನು ನನ್ನ ಬದುಕಿನ ಅದ್ಭುತ ಸಂತಸ ಕ್ಷಣವೆಂದರೆ ಸಿನೇಮಾ ರಂಗಕ್ಕೆ ಸಂಬಂಧಿಸಿದ್ದೇ ಇಲ್ಲ ನನ್ನ ಮಗಳು ಹುಟ್ಟಿದಾಗ ಕೇಳಿದ ಅವಳ ಮೊದಲ ಅಳು ನನ್ನ ಬದುಕಿನ ಅದ್ಭುತ ಕ್ಷಣ ಆಗಿದೆ ಎಂದರು. 

Advertisement

ಕಲಾವಿದರಿಗೆ ನೆಮ್ಮದಿ ಮುಖ್ಯ: ಈ ಯುಗದ ಅದ್ಭುತ ಮ್ಯಾಜಿಕ್‌ ಕಲೆಯೆಂದರೆಸಿನೇಮಾ. ಈ ರಂಗದಲ್ಲಿ ಕೆಲಸ ಮಾಡುವ ಕಲಾವಿದರಿಗೆ ಅವರ ಕುಟುಂಬ ವರ್ಗದಲ್ಲಿ ನೆಮ್ಮದಿ ಮುಖ್ಯ. ಕಲಾವಿದರ ಮನೆಯಲ್ಲಿ ನೆಮ್ಮದಿ ಇದ್ದರೆ ಕಲಾವಿದ ನೆಮ್ಮದಿಯಿಂದ ಇರಲಿ ಸಾಧ್ಯವಿದ್ದು, ಇದರಿಂದ ಉತ್ತಮ ಸಾಧನೆ ಮಾಡಬಹುದಾಗಿದೆ. ಈ ವಿಷಯದಲ್ಲಿ ನಾನಂತೂ ಲಕ್ಕಿ ಆಗಿದ್ದು, ನನ್ನ ಮನೆಯಲ್ಲಿ  ನೆಮ್ಮದಿ ಇದೆ. ದಾಂಪತ್ಯ ಜೀವನ ಸುಂದರ ಆಗಿದೆ. ಇಬ್ಬರಲ್ಲೂ ಕ್ಷಮಿಸುವ ಭಾವ ಇದ್ದರೆ ದಾಂಪತ್ಯ ಜೀವನ ಸ್ವರ್ಗಕ್ಕೆ ಸಮ ಎಂದರು. 

ವಿಷ ಬೀಜ ಕಥೆ ಹೇಳ್ಳೋದು ಬಿಡಿ: ಸಮಾಜದಲ್ಲಿ ಆಗುತ್ತಿರುವ ಕೋಮು ಗಲಭೆ, ಗಲಾಟೆಯಿಂದ ನೆಮ್ಮದಿ ಹಾಳಾಗಿದ್ದು, ಎರಡು ಜನಾಂಗದ ಮಧ್ಯೆ ಗೋಡೆ ಕಟ್ಟುವವರಿಗೆ ಲಾಭ ಆಗುತ್ತಿದೆ. ಆಯಾ ಜನಾಂಗದವರೇ ಬಿತ್ತುತ್ತಿರುವ ವಿಷ ಬೀಜ ಕಥೆಗಳು ಸಾಮರಸ್ಯ ಹಾಳು ಮಾಡುತ್ತಿವೆ. ಹೀಗಾಗಿ ವಿಷ ಬೀಜ ಬಿತ್ತುವ ಕಥೆಗಳನ್ನು ನಂಬದೇ ಮಾನವ ಕುಲದಲ್ಲಿ ನಂಬಿಕೆಯಿಟ್ಟು ಕೈ ಚಾಚಿದರೆ ಸಮಾಜದಲ್ಲಿ ಸಾಮರಸ್ಯ, ನೆಮ್ಮದಿ ಕಾಣಬಹುದಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.  

ವೀಕ್‌ಎಂಡ್‌ನ‌ಲ್ಲಿ ರೈತ ಕೂಡ ಬರಬೇಕು: ವೀಕೆಂಡ್‌ ವಿಥ್‌ ರಮೇಶ ಕಾರ್ಯಕ್ರಮದಲ್ಲಿ ಬರೀ ಸೆಲೆಬ್ರಿಟಿ, ಸಿನಿಮಾ ಜಗತ್ತಿನ ಸಾಧಕರಿಗಷ್ಟೇ ಸೀಮಿತವಾಗಿದೆ. ಆ ಸೀಟ್‌ನಲ್ಲಿ ಧಾರವಾಡದ ಸಾಹಿತಿಗಳಿಗೂ ಸ್ಥಾನ ನೀಡುವಂತೆ ಹೇಳಿದ ಸಭಿಕರೊಬ್ಬರ ಪ್ರಶ್ನೆಗೆ ಉತ್ತರಿಸಿದ ರಮೇಶ, ಧಾರವಾಡ ಸಾಹಿತಿಗಳಷ್ಟೇ ಅಲ್ಲ ರೈತ, ಸೈನಿಕ, ಶಿಕ್ಷಕ ಕೂಡ ಆ ಸೀಟ್‌ನಲ್ಲಿ ಕುಳಿತುಕೊಳ್ಳಬೇಕೆಂಬ ವಾದ ನನ್ನದೂ ಇದೆ.

ಇದು ಮುಂದಿನ ಭಾಗದಲ್ಲಿ ಈಡೇರಬಹುದು ಎಂಬ ನಿರೀಕ್ಷೆ ಇದೆ ಎಂದು ಸ್ಪಷ್ಟಪಡಿಸಿದರು. ಕೊನೆಯಲ್ಲಿ ಕ್ರೇಜಿಲೋಕ ಚಿತ್ರದ ಡೈಲಾಗ್‌ ಹೇಳುವ ಮೂಲಕ ರಮೇಶ ಅರವಿಂದ ಗೋಷ್ಠಿಗೆ ಅಂತ್ಯ ಹಾಡಿದರು. ಪತ್ರಕರ್ತ ಗೌರೀಶ ಅಕ್ಕಿ ಗೋಷ್ಠಿಯ ನಿರ್ದೇಶಕರಾಗಿ ಸಂವಾದ ನಡೆಸಿಕೊಟ್ಟರು. 

Advertisement

Udayavani is now on Telegram. Click here to join our channel and stay updated with the latest news.

Next