ವೆಲ್ಲಿಂಗ್ಟನ್: ಶುಕ್ರವಾರ ಮೊದಲ್ಗೊಂಡ ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯದಲ್ಲಿ ಎಡಗೈ ಮಧ್ಯಮ ವೇಗಿ ನೀಲ್ ವ್ಯಾಗ್ನರ್ ದಾಳಿಗಿಳಿಯುವ ತನಕ ಸುಖದಲ್ಲಿದ್ದ ಪ್ರವಾಸಿ ವೆಸ್ಟ್ ಇಂಡೀಸ್, ಅನಂತರ ನಾಟಕೀಯ ಕುಸಿತಕ್ಕೆ ಸಿಲುಕಿ 134ಕ್ಕೆ ಆಲೌಟ್ ಆಗಿದೆ. ಜವಾಬಿತ್ತ ನ್ಯೂಜಿಲ್ಯಾಂಡ್ 2 ವಿಕೆಟಿಗೆ 85 ರನ್ ಗಳಿಸಿದೆ.
ನೀಲ್ ವ್ಯಾಗ್ನರ್ ಕೇವಲ 39 ರನ್ ವೆಚ್ಚದಲ್ಲಿ 7 ವಿಕೆಟ್ ಉಡಾಯಿಸಿ ನ್ಯೂಜಿಲ್ಯಾಂಡಿಗೆ ಮೇಲುಗೈ ಒದಗಿಸಿದರು. ಇದು ವ್ಯಾಗ್ನರ್ ಅವರ ಜೀವನಶ್ರೇಷ್ಠ ಬೌಲಿಂಗ್ ಸಾಧನೆ. ಹಾಗೆಯೇ ನ್ಯೂಜಿಲ್ಯಾಂಡ್ ಟೆಸ್ಟ್ ಇತಿಹಾಸದ 4ನೇ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ.
“ಬಾಸಿನ್ ರಿಸರ್ವ್’ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟ ವೆಸ್ಟ್ ಇಂಡೀಸ್ ಉತ್ತಮ ಆರಂಭವನ್ನೇ ಕಂಡುಕೊಂಡಿತ್ತು. ಕೈರನ್ ಪೊವೆಲ್ (42)-ಕ್ರೆಗ್ ಬ್ರಾತ್‌ವೇಟ್ (24) ಸೇರಿಕೊಂಡು ಮೊದಲ ವಿಕೆಟಿಗೆ 21.5 ಓವರ್‌ಗಳಿಂದ 59 ರನ್ ಒಟ್ಟುಗೂಡಿಸಿದ್ದರು. ಆಗ ಬೌಲ್ಟ್-ಹೆನ್ರಿ ದಾಳಿ ಯಾವುದೇ ಪರಿಣಾಮ ಬೀರಿರಲಿಲ್ಲ. ಆದರೆ ನೀಲ್ ವ್ಯಾಗ್ನರ್ ಬೌಲಿಂಗಿಗೆ ಇಳಿದೊಡನೆ ವಿಂಡೀಸ್ ಕುಸಿತ ಮೊದಲ್ಗೊಂಡಿತು. ಬರೀ 75 ರನ್ ಅಂತರದಲ್ಲಿ ಹತ್ತೂ ವಿಕೆಟ್ ಉರುಳಿ ಹೋಯಿತು. ಉಳಿದೆರಡು ವಿಕೆಟ್ ಬೌಲ್ಟ್ ಪಾಲಾಯಿತು. ಶೇನ್ ಡೌರಿಚ್ (18) ರನೌಟಾದರು.
ಮೊದಲ ಎಸೆತಕ್ಕೇ ಹಿಟ್ ವಿಕೆಟ್
ಮೊದಲ ಟೆಸ್ಟ್ ಆಡಿದ ಸುನೀಲ್ ಆ್ಯಂಬ್ರಿಸ್, ಮಧ್ಯಮ ಕ್ರಮಾಂಕದ ಶೈ ಹೋಪ್ ಖಾತೆ ತೆರೆಯುವಲ್ಲಿ ವಿಫಲರಾದರು. ಇವರಲ್ಲಿ ಆ್ಯಂಬ್ರಿಸ್ ಟೆಸ್ಟ್ ಇತಿಹಾಸದಲ್ಲಿ ಮೊದಲ ಎಸೆತಕ್ಕೇ ಹಿಟ್ ವಿಕೆಟ್ ಆಗಿ ಔಟಾದ ವಿಶ್ವದ ಮೊದಲ ಕ್ರಿಕೆಟಿಗನೆನಿಸಿದರು! ಆ್ಯಂಬ್ರಿಸ್ ಚೊಚ್ಚಲ ಟೆಸ್ಟ್‌ನಲ್ಲೇ ಹಿಟ್ ವಿಕೆಟ್ ರೂಪದಲ್ಲಿ ಔಟಾದ ವಿಶ್ವದ 11ನೇ ಆಟಗಾರ.
ಮೊದಲ ಇನ್ನಿಂಗ್ಸ್ ಆರಂಭಿಸಿರುವ ನ್ಯೂಜಿಲ್ಯಾಂಡ್ ಟಾಮ್ ಲ್ಯಾಥಂ (37) ಮತ್ತು ನಾಯಕ ಕೇನ್ ವಿಲಿಯಮ್ಸನ್ (1) ವಿಕೆಟ್ ಕಳೆದುಕೊಂಡಿದೆ. ರಾವಲ್ (29)-ಟಯ್ಲರ್ (12) ಕ್ರೀಸಿನಲ್ಲಿದ್ದಾರೆ.
ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್-134 (ಪೊವೆಲ್ 42, ಬ್ರಾತ್‌ವೇಟ್ 24, ಡೌರಿಚ್ 18, ವ್ಯಾಗ್ನರ್ 39ಕ್ಕೆ 7, ಬೌಲ್ಟ್ 36ಕ್ಕೆ 2). ನ್ಯೂಜಿಲ್ಯಾಂಡ್-2 ವಿಕೆಟಿಗೆ 85 (ಲ್ಯಾಥಂ 37, ರಾವಲ್ ಬ್ಯಾಟಿಂಗ್ 29).