ಪ್ರವಾಹದಿಂದ ಉತ್ತರ ಕರ್ನಾಟಕ ತತ್ತರಿಸಿದೆ. ಆಗಸ್ಟ್‌ನಲ್ಲಿ ಕಂಡು ಬಂದ ಪ್ರವಾಹ ಇನ್ನೇನು ತಗ್ಗಿತು ಎನ್ನುವುದರೊಳಗೆ ಮತ್ತೆ ಪ್ರವಾಹ ಹಲವು ಸಮಸ್ಯೆ-ಸಂಕಷ ಸೃಷ್ಟಿಸಿದೆ. ನದಿ,ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಲಕ್ಷಾಂತರ ಹೆಕ್ಟೇರ್‌ನಲ್ಲಿ ಬೆಳೆದು ನಿಂತ ಬೆಳೆ ನೀರಿಗಾಹುತಿಯಾಗಿದೆ. ಜನ-ಜಾನುವಾರು ಮೃತಪಟ್ಟಿದ್ದು, ಅದೆಷ್ಟೋ ಮನೆಗಳು ಭಾಗಶಃ ಅಥವಾ ಪೂರ್ಣ ನೆಲಕ್ಕುರಳಿವೆ. ಸಾವಿರಾರು ಕಿಮೀ ನಗರ- ಗ್ರಾಮಾಂತರ ರಸ್ತೆ ಹಾಗೂ ಸೇತುವೆಗಳು ಆಕಾರ ಕಳೆದುಕೊಂಡಿವೆ. ಪ್ರವಾಹದಿಂದಾದ ಆವಾಂತರದಿಂದ ರಕ್ಷಣೆ ಹಾಗೂ ಬದುಕು ಕಟ್ಟಿಕೊಳ್ಳಲು ಜನರು ಸರ್ಕಾರದತ್ತ ನೋಡುತ್ತಿದ್ದು, ಸಂತ್ರಸ್ತರ ನೋವಿಗೆ ಸೂಕ್ತ ಸ್ಪಂದನೆ, ನೆರವು ದೊರೆಯಬೇಕಾಗಿದೆ.
ಬರದ ನಾಡು ಎಂದೇ ಬಿಂಬಿತವಾಗಿರುವ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳೀಗ ಮಲೆನಾಡು ಸ್ವರೂಪ ಪಡೆದುಕೊಂಡಿವೆಯೇ ಎನ್ನುವಷ್ಟರ ಮಟ್ಟಿಗೆ ಮಳೆ ಬೀಳತೊಡಗಿದೆ. ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬೆಳಗಾವಿ ಜಿಲ್ಲೆಗಳು ಪ್ರವಾಹದಿಂದ ನಲುಗುವಂತಾಗಿದ್ದು, ಮಳೆಯಿಂದಾಗಿ ಈ ಭಾಗದ ಇತರೆ ಜಿಲ್ಲೆಗಳು ಸಹ ಹಾನಿಗೀಡಾಗಿವೆ. ಕೃಷ್ಣಾ, ಭೀಮಾ, ಕಾಗಿಣಾ, ಘಟಪ್ರಭಾ, ಮಲಪ್ರಭಾ, ದೂಧ್‌ಗಂಗಾ, ವೇದಗಂಗಾ, ತುಂಗಭದ್ರಾ ಸೇರಿದಂತೆ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನದಿ ಪಾತ್ರದ ಗ್ರಾಮಗಳು, ಲಕ್ಷಾಂತರ ಹೆಕ್ಟೇರ್ ಕೃಷಿ ಭೂಮಿಗೆ ನೀರು ನುಗ್ಗಿದ್ದು, ಜನರ ಬದುಕನ್ನೇ ಅನಾಥವಾಗಿಸಿದೆ.
ಮುಂಗಾರು ಹಂಗಾಮಿನ ಬೆಳೆ ಇನ್ನೇನು ಕೈ ಸೇರುತ್ತಿದೆ ಎನ್ನುವಾಗಲೇ ನಿರಂತರ ಮಳೆ, ಪ್ರವಾಹದಿಂದಾಗಿ ಕಣ್ಣೆದುರೇ ಬೆಳೆದು ನಿಂತ ಬೆಳೆ ಹಾಳಾಗುತ್ತಿರುವುದು ಕಂಡು ಅನ್ನದಾತರು ನೊಂದಿದ್ದಾರೆ. ಬೆಳೆ ಹಾನಿಗೀಡಾದ ನೋವು ಒಂದು ಕಡೆಯಾದರೆ, ಸೆಪ್ಟೆಂಬರ್‌ನಲ್ಲಿ ಹಿಂಗಾರು ಬಿತ್ತನೆ ಆರಂಭವಾಗಬೇಕಾಗಿತ್ತು. ಸತತ ಮಳೆಯಿಂದಾಗಿ ಅದು ಸಾಧ್ಯವಾಗದೆ, ಹಿಂಗಾರು ಬೆಳೆಯ ಗತಿ ಏನು ಎಂಬ ಸಂಕಷ್ಟ ಎದುರಾಗಿದೆ. 2009ರ ಸೆ.28ರಿಂದ ಅ.4ರವರೆಗೆ ಕಂಡು ಬಂದ ಐದು ದಿನಗಳ ಪ್ರವಾಹದಿಂದ ಉತ್ತರ ಕರ್ನಾಟಕ ಅಕ್ಷರಶಃ ನಲುಗಿತ್ತು. ಸುಮಾರು 60 ವರ್ಷಗಳ ಇತಿಹಾಸದಲ್ಲೇ ಕಂಡರಿಯದ ಪ್ರವಾಹ ಅದಾಗಿತ್ತು. 2019ರ ಜುಲೈನಲ್ಲಿ ಕಂಡು ಬಂದ ಪ್ರವಾಹ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ 22 ಜಿಲ್ಲೆಗಳಲ್ಲಿ ಸಾಕಷ್ಟು ಸಾವು-ನೋವು, ನಷ್ಟ ಸೃಷ್ಟಿಸಿತ್ತು. ಸುಮಾರು 9 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿ ಸೇರಿದಂತೆ ಅಂದಾಜು 32 ಸಾವಿರ ಕೋಟಿ ರೂ. ಹಾನಿಯಾಗಿತ್ತು.
ಇದೇ ವರ್ಷದ ಆಗಸ್ಟ್‌ನಲ್ಲಿ ಸುರಿದ ಮಳೆಯ ಪ್ರಮಾಣ 44 ವರ್ಷಗಳಲ್ಲೇ ಅತ್ಯಧಿಕ ಪ್ರಮಾಣದ್ದೆಂದು ಅಂದಾಜಿಸಲಾಗಿದೆ. ಅಕ್ಟೋಬರ್‌ನಲ್ಲಿ ಸುರಿದ ಮಳೆ ಧಾರವಾಡ ಹಾಗೂ ಹಾವೇರಿ ಹೊರತುಪಡಿಸಿದರೆ ಉತ್ತರ ಕರ್ನಾಟಕ ಇತರೆ 11 ಜಿಲ್ಲೆಗಳಲ್ಲಿ ವಾಡಿಕೆಗಿಂತ ಶೇ.175ರಿಂದ ಶೇ.712ರಷ್ಟು ಅಧಿಕವಾಗಿದೆ. ಈ ವರ್ಷದ ಮಳೆ, ಪ್ರವಾಹ, ಸಿಡಿಲು, ಮನೆ ಕುಸಿತದಿಂದಾಗಿ ಮುಂಬೈ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಇದುವರೆಗೆ ಸುಮಾರು 95 ಜನರು ಮೃತಪಟ್ಟಿದ್ದು, ನೂರಾರು ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ. ಸುಮಾರು 9.54 ಲಕ್ಷ ಹೆಕ್ಟೇರ್‌ನಷ್ಟು ಪ್ರದೇಶದ ಬೆಳೆ ಹಾನಿಗೀಡಾಗಿದೆ. ತಜ್ಞರ ಪ್ರಕಾರ 2021-2050ರ ಯೋಜಿತ ಅವಧಿಯಂತೆ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಮುಂಗಾರು ಮಳೆ ಮತ್ತಷ್ಟು ಅಪಾಯ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದ್ದು, ಬರುವ ದಿನಗಳು ಇನ್ನಷ್ಟು ಕಠಿಣವಾಗಲಿವೆ ಎಂಬ ಸಂದೇಶ ರವಾನೆ ಆಗುತ್ತಿದೆ. ಶಾಶ್ವತ ಪರಿಹಾರ ಕ್ರಮಗಳಿಗೆ ಸರ್ಕಾರ ಮುಂದಾಗಬೇಕಾಗಿದೆ. ಮಳೆ-ಪ್ರವಾಹದ ಹೊಡೆತಕ್ಕೆ ಸಿಲುಕಿ ಎಲ್ಲವನ್ನು ಕಳೆದು ಕೊಂಡ ಸಂತ್ರಸ್ತರ ಪಾಲಿಗೆ ತಾನಿರುವುದಾಗಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕಾಗಿದೆ. ಸಂಕಷ್ಟಕ್ಕೆ ಸಿಲುಕಿದ ಜನರಿಗೆ ತುರ್ತು ಅಗತ್ಯತೆಗಳ ಪೂರೈಕೆ, ಕಾಲಮಿತಿಯೊಳಗೆ ಬೆಳೆ-ಆಸ್ತಿ ನಷ್ಟದ ಅಂದಾಜು, ಸೂಕ್ತ ಪರಿಹಾರ ನೀಡಿಕೆ ಕಾರ್ಯಗಳು ಯುದ್ದೋಪಾದಿಯಲ್ಲಿ ಸಾಗಬೇಕಾಗಿದೆ.