Advertisement

ತಾತ್ಕಾಲಿಕ ಸಂಪರ್ಕ ರಸ್ತೆಯಿಂದ ನೆರೆ ಸೃಷ್ಟಿ

06:15 AM Jun 09, 2018 | |

ಅಜೆಕಾರು: ಶಿರ್ಲಾಲು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹೆಗ್ಡೆಬೆಟ್ಟು ಪರಿಸರದಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿ ಅಪೂರ್ಣವಾಗಿ ಸ್ಥಳೀಯರು ಸಂಕಷ್ಟಕ್ಕೆ ಈಡಾಗಿದ್ದಾರೆ.

Advertisement

ನದಿಯಲ್ಲಿ ನೀರಿನ ಹರಿವು ಹೆಚ್ಚಾದ ಪರಿಣಾಮ ತಾತ್ಕಾಲಿಕ ಸಂಪರ್ಕ ರಸ್ತೆ ನದಿಗೆ ಅಡ್ಡವಾಗಿರುವುದರಿಂದ ಕೃತಕ ನೆರೆ ಸೃಷ್ಟಿಯಾಗಿ ನದಿ ನೀರು ಕೃಷಿ ಭೂಮಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ.

ನದಿ ಸಮೀಪದ ಸಾದು ಪೂಜಾರಿಯವರ ಅಡಿಕೆ ತೋಟಕ್ಕೆ ನೀರು ನುಗ್ಗಿ ಅಡಿಕೆ ಗಿಡಗಳು ಹಾನಿಗೀಡಾಗಿದ್ದರೆ ಇದೇ ಪರಿಸರದ ಜಯಂತ ಶೆಟ್ಟಿಯವರ ಅಡಿಕೆ ತೋಟಕ್ಕೆ ನೀರು ನುಗ್ಗಿ ಕೆಸರು ಮಣ್ಣು ತೋಟದಲ್ಲಿ ತುಂಬಿ ಹೋಗಿದೆ. ಜತೆಗೆ ತೋಟದ ಸಮೀಪದ ಮಣ್ಣು ಕೃತಕ ನೆರೆಯಿಂದ ಕುಸಿಯುತ್ತಿದ್ದು ಅಡಿಕೆ ಮರಗಳು ನೆಲಕ್ಕುರುಳುವ ಸಂಭವ ಹೆಚ್ಚಾಗಿದೆ.

ವಿದ್ಯುತ್‌ ಕಂಬ ತೆರವು 
ಹೊಸದಾಗಿ ನಿರ್ಮಾಣವಾಗುವ ಸೇತುವೆ ಬಳಿಯಲ್ಲಿದ್ದ ಅಪಾಯಕಾರಿ ವಿದ್ಯುತ್‌ ಕಂಬವನ್ನು ತೆರವುಗೊಳಿಸಿ ಹೊಸ ಕಂಬ ಅಳವಡಿಸುವಂತೆ ಕಂದಾಯ ಅಧಿಕಾರಿಗಳು ಹಾಗೂ ಪಂಚಾಯತ್‌ ಸದಸ್ಯರು ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಹ ಹೊಸ ಕಂಬ ಅಳವಡಿಸಿರಲಿಲ್ಲ. ಆದರೆ ಜೂ. 8ರಂದು ಸುರಿದ ಭಾರೀ ಮಳೆಗೆ ಅಪಾಯಕಾರಿ ಕಂಬವು ನೆಲಕ್ಕುರುಳಿದ ಪರಿಣಾಮ ಎಚ್ಚೆತ್ತ ಮೆಸ್ಕಾಂ ಅಧಿಕಾರಿಗಳು ಕಂಬವನ್ನು ತೆರವುಗೊಳಿಸಿ ಹೊಸ ಕಂಬ ಅಳವಡಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ತಾತ್ಕಾಲಿಕ ಸಂಪರ್ಕ ರಸ್ತೆ ತೆರವು
ಹಲವು ದಶಕಗಳಿಂದ ತೂಗು ಸೇತುವೆಯ ಸಂಕಷ್ಟದಿಂದ ಬಳಲುತ್ತಿದ್ದ ಸ್ಥಳೀಯರು ಹೊಸ ಸೇತುವೆಗೆ ಮನವಿ ಮಾಡುತ್ತಾ ಬಂದಿದ್ದರು. ಸ್ಥಳೀಯರ ಮನವಿಗೆ ಸ್ಪಂದಿಸಿದ ಶಾಸಕ ಸುನಿಲ್‌ ಕುಮಾರ್‌ ಹೊಸ ಸೇತುವೆಗೆ ಹಾಗೂ ರಸ್ತೆಗೆ 3.90 ಕೋಟಿ ರೂ. ಅನುದಾನ ಒದಗಿಸಿದ್ದರು. ಆದರೆ ಕಾಮಗಾರಿ ವಿಳಂಬವಾದ ಕಾರಣ ಈ ಮಳೆಗಾಲದಲ್ಲಿಯೂ ಸ್ಥಳೀಯರು ಸಂಕಷ್ಟಪಡಬೇಕಾಗಿದೆ.

Advertisement

ಸೇತುವೆಯ ಕಾಮಗಾರಿ ಪ್ರಾರಂಭಗೊಂಡ ಸಂದರ್ಭದಲ್ಲಿ ಸಂಪರ್ಕಕ್ಕಾಗಿ ತಾತ್ಕಾಲಿಕವಾಗಿ ಮಣ್ಣಿನಿಂದ ನದಿಯ ನಡುವೆ ಸಂಪರ್ಕ ರಸ್ತೆ ಮಾಡಿಕೊಡಲಾಗಿತ್ತು. ಈಗ ಮಳೆಗಾಲ ಪ್ರಾರಂಭವಾಗಿದ್ದು ನದಿ ನೀರಿನ ಹರಿವು ಹೆಚ್ಚಾದ ಪರಿಣಾಮ ತಾತ್ಕಾಲಿಕ ರಸ್ತೆಯನ್ನು ತೆರವುಗೊಳಿಸಿ ನದಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗಿದೆ. ಹೀಗಾಗಿ ಸ್ಥಳೀಯರು ಸಂಚರಿಸಲು ಸುತ್ತು ಬಳಸಿ ಕೋಲಿಬೆಟ್ಟು ರಸ್ತೆಯಾಗಿ ತೆರಳಬೇಕಾಗಿದೆ. ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಇದು ತೀವ್ರ ಸಂಕಷ್ಟ ತಂದೊಡ್ಡಿದೆ.

ಕೂಡಲೇ ಸ್ಪಂದನೆ
ಕೃತಕ ನೆರೆ ಸೃಷ್ಟಿಯಾಗುವುದನ್ನು ಮನಗಂಡ ಪಂಚಾಯತ್‌ ಆಡಳಿತ ಕೂಡಲೇ ಸ್ಪಂದಿಸಿ ತಾತ್ಕಾಲಿಕ ರಸ್ತೆಯನ್ನು ತೆರವುಗೊಳಿಸಿ ನೀರು ಹರಿದುಹೋಗುವಂತೆ ಮಾಡಲಾಗಿದೆ.
– ಆನಂದ ಬಿ.ಕೆ.,ಶಿರ್ಲಾಲು ಪಿಡಿಒ

ಕಾಲಾವಕಾಶವಿದೆ
ಗುತ್ತಿಗೆದಾರರಿಗೆ ಮುಂದಿನ ನವೆಂಬರ್‌ ತಿಂಗಳವರೆಗೆ ಕಾಲಾವಕಾಶವಿರುವುದರಿಂದ ಕಾಮಗಾರಿ ಪೂರ್ಣಗೊಂಡಿಲ್ಲ.
ರಮಾನಂದ ಪೂಜಾರಿ, 
ಶಿರ್ಲಾಲು ಗ್ರಾ.ಪಂ. ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next