Advertisement

ಶೆಟ್ರ ಹುಡುಗಿಯ ಬಾಲಿವುಡ್‌ ಕನಸು

02:59 PM Sep 13, 2017 | Team Udayavani |

ಮಾಡೆಲಿಂಗ್‌ ಕ್ಷೇತ್ರಕ್ಕೆ ಬಂದವರ ಮುಂದಿನ ಆಯ್ಕೆ ಯಾವುದೆಂದರೆ ಸಿನಿಮಾ ರಂಗ ಎಂದು ಸುಲಭವಾಗಿ ಹೇಳಬಹುದು. ಅದಕ್ಕೆ ತಕ್ಕಂತೆ ಚಿತ್ರರಂಗ ಕೂಡಾ ಮಾಡೆಲ್‌ ಆಗಿದ್ದವರಿಗೆ ಹೆಚ್ಚೆಚ್ಚು ಅವಕಾಶ ಕೊಡುತ್ತಿದೆ. ಇಂತಹ ಅವಕಾಶದ ಮೂಲಕ ಅದೃಷ್ಟ ಮಾಡಿದವರು ನೇಹಾ ಶೆಟ್ಟಿ. “ಮುಂಗಾರು ಮಳೆ-2′ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನೇಹಾ ಕೂಡಾ ಮಾಡೆಲಿಂಗ್‌ ಹಿನ್ನೆಲೆಯಿಂದ ಬಂದವರು. ಮೂಲತಃ ಮಂಗಳೂರಿನವರಾದ ನೇಹಾ ತಮ್ಮ ಕೆರಿಯರ್‌ ಬಗ್ಗೆ ಸಾಕಷ್ಟು ಕನಸು ಕಂಡಿದ್ದಾರೆ. ಕನ್ನಡವಷ್ಟೇ ಅಲ್ಲದೇ ಬಾಲಿವುಡ್‌ನ‌ಲ್ಲೂ ಮಿಂಚಬೇಕೆಂಬ ಆಸೆ ಹೊಂದಿರುವ ನೇಹಾ “ರೂಪತಾರಾ’ ಜೊತೆ ತಮ್ಮ ಆಸೆ, ಕನಸು, ಮುಂದಿನ ಆಯ್ಕೆಗಳ ಬಗ್ಗೆ ಮಾತನಾಡಿದ್ದಾರೆ….  

Advertisement

1. “ಮುಂಗಾರು ಮಳೆ-2′ ಬಿಡುಗಡೆಯಾಗಿ ಇಷ್ಟು ದಿನವಾದರೂ ನಿಮ್ಮ ಕಡೆಯಿಂದ ಹೊಸ ಸಿನಿಮಾದ ಸುದ್ದಿ ಬಂದಿಲ್ಲ?
 “ಮುಂಗಾರು ಮಳೆ-2′ ಚಿತ್ರ ಬಿಡುಗಡೆಗೂ ಮುನ್ನವೇ ನನಗೆ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿದ್ದವು. ಆದರೆ, ನಾನು ಸಿನಿಮಾ ಬಿಡುಗಡೆಯಾದ ಮೇಲೆ ಒಪ್ಪಿಕೊಳ್ಳಬೇಕೆಂದು ನಿರ್ಧರಿಸಿದ್ದೆ. ಅದರಂತೆ ಈಗ ಒಳ್ಳೆಯ ಕಥೆಗಾಗಿ ಎದುರು ನೋಡುತ್ತಿದ್ದೇನೆ. ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಸದ್ಯದಲ್ಲೇ ನನ್ನ ಕಡೆಯಿಂದ ಸಿನಿಮಾ ಸುದ್ದಿ ಬರುತ್ತದೆ?

2. ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬಂದರೂ ಯಾಕೆ ಒಪ್ಪುತ್ತಿಲ್ಲ?
– “ಮುಂಗಾರು ಮಳೆ-2′ ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿತ್ತು. ಅದೊಂದು ಬೆಂಚ್‌ ಮಾರ್ಕ್‌. ಎರಡನೇ ಚಿತ್ರದ ಪಾತ್ರ ಕೂಡಾ ವಿಭಿನ್ನವಾಗಿರಬೇಕೆಂಬ ಆಸೆ ನನ್ನದು. ಸಿನಿಮಾದಿಂದ ಸಿನಿಮಾಕ್ಕೆ ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡಬೇಕು. ಆಗ ಮಾತ್ರ ನಟಿಯಾಗಿ ಗುರುತಿಸಿಕೊಳ್ಳಲು ಸಾಧ್ಯ ಎಂದು ನಂಬಿರುವವಳು ನಾನು. ಇಲ್ಲಿವರೆಗೆ ಬಂದ ಆಫ‌ರ್‌ಗಳೇನೋ ಚೆನ್ನಾಗಿವೆ. ಆದರೆ ನಾನು ಬಯಸಿರುವಂತಹ ಪಾತ್ರ ಅದರಲ್ಲಿ ಇರಲಿಲ್ಲ. ಹಾಗಾಗಿ, ಮತ್ತೆ ಒಳ್ಳೆಯ ಪಾತ್ರಕ್ಕಾಗಿ ಎದುರು ನೋಡುತ್ತಿದ್ದೇನೆ. 

3. ಹೆಚ್ಚು ದಿನ ಸಿನಿಮಾ ಒಪ್ಪಿಕೊಳ್ಳದೇ ಚಿತ್ರರಂಗದಿಂದ ದೂರವಿದ್ದರೆ “ಆ ನಟಿಗೆ ಅವಕಾಶವಿಲ್ಲ’ ಎಂಬ ಮಾತು ಕೂಡಾ ಕೇಳಿಬರುತ್ತದೆಯಲ್ಲ?
– ಹೌದು, ಆ ತರಹದ ಮಾತು ಕೇಳಿಬರುತ್ತದೆ. ಆ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಯಾರೋ ಮಾತನಾಡುತ್ತಾರೆಂಬ ಕಾರಣಕ್ಕೆ ನಾನು ಇಷ್ಟವಾಗದ ಸಿನಿಮಾಗಳನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಸಿನಿಮಾ ಮೇಲೆ ಸಿನಿಮಾ ಮಾಡಬೇಕೆಂಬ ಆಸೆಯಂತೂ ನನಗಿಲ್ಲ. ಕೆಲವೇ ಕೆಲವು ಸಿನಿಮಾ ಮಾಡಿದರೂ ಆ ಸಿನಿಮಾ ಚೆನ್ನಾಗಿರಬೇಕು, ನನ್ನ ಪಾತ್ರ ಜನರಿಗೆ ಇಷ್ಟವಾಗಬೇಕೆಂಬ ಆಸೆ ಇದೆಯಷ್ಟೇ. 

4. ನಾಯಕಿಯರಿಗೆ ಚಿತ್ರರಂಗದಲ್ಲಿ ಸೀಮಿತ ಅವಕಾಶಗಳಿರುತ್ತವೆ. ಹಾಗಾಗಿ ಹೆಚ್ಚಿನ ಆಯ್ಕೆ ಕಷ್ಟ ಎಂಬ ಮಾತಿದೆಯಲ್ಲ?
– ಇರಬಹುದು. ನಾಯಕಿಯರಿಗೆ ಸಿಗುವ ಸೀಮಿತ ಅವಕಾಶದಲ್ಲೇ ಒಳ್ಳೆಯ ಅವಕಾಶಗಳನ್ನು ಹುಡುಕಲು ಪ್ರಯತ್ನಿಸಬೇಕು. ನಿಮ್ಮ ಮೇಲೆ ನಿಮಗೆ ನಂಬಿಕೆ ಇದ್ದರೆ, ಎಂತಹ ಪಾತ್ರಕೊಟ್ಟರೂ ನಿಭಾಹಿಸಬಲಲೆ ಎಂಬ ವಿಶ್ವಾಸವಿದ್ದರೆ ಸೀಮಿತ ಅವಕಾಶದಲ್ಲೂ ಒಳ್ಳೆಯ ಪಾತ್ರಗಳನ್ನು ಹುಡುಕಬಹುದೆಂಬ ನಂಬಿಕೆ ನನ್ನದು. 

Advertisement

5. ಮೊದಲ ಚಿತ್ರದ ಅನುಭವ ಹೇಗಿತ್ತು ಮತ್ತು ನಿಮ್ಮ ಕೆರಿಯರ್‌ಗೆ ಎಷ್ಟು ಪ್ಲಸ್‌ ಆಯಿತು?
   - ತುಂಬಾ ಒಳ್ಳೆಯ ಅನುಭವ. ಮೊದಲ ಸಿನಿಮಾದಲ್ಲೇ ಸಾಕಷ್ಟು ಒಳ್ಳೊಳ್ಳೆ ಅನುಭವ ಆಯಿತು. ಬುಲೆಟ್‌ ಓಡಿಸೋದು, ಒಂಟೆ ಸವಾರಿ ಸೇರಿದಂತೆ ಹೊಸ ಹೊಸ ಅನುಭವ ಕೊಟ್ಟ ಸಿನಿಮಾ “ಮುಂಗಾರು ಮಳೆ-2′. ಪಾತ್ರದ ವಿಷಯದಲ್ಲೂ ಅಷ್ಟೇ. ಎರಡು ಶೇಡ್‌ನ‌ಲ್ಲಿ ಸಾಗುವ ಪಾತ್ರದಲ್ಲಿ ಮೊದಲರ್ಧದಲ್ಲಿ ಸಖತ್‌ ಬೋಲ್ಡ್‌ ಪಾತ್ರ ಸಿಕ್ಕರೆ ದ್ವಿತೀಯಾರ್ಧದಲ್ಲಿ ಪಕ್ಕಾ ಹೋಮ್ಲಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಇಂದಿನ ಟ್ರೆಂಡ್‌ಗೆ ತಕ್ಕನಾದ ಪಾತ್ರ ಸಿಗುವ ಮೂಲಕ ನಟನೆ ಹೆಚ್ಚು ಅವಕಾಶವಿತ್ತು. ಮೊದಲ ಚಿತ್ರದಲ್ಲೇ ದೊಡ್ಡ ನಿರ್ದೇಶಕ, ಸ್ಟಾರ್‌ ನಟನ ಸಿನಿಮಾದಲ್ಲಿ ನಟಿಸುವ ಅವಕಾಶ ಎಲ್ಲರಿಗೂ ಸಿಗೋದಿಲ್ಲ. ಆದರೆ, ನಾನು ಆ ವಿಚಾರದಲ್ಲ ಅದೃಷ್ಟವಂತೆ. ಒಂದು ಹಿಟ್‌ ಸಿನಿಮಾದ ಸೀಕ್ವೆಲ್‌ನಲ್ಲಿ ನಟಿಸುವ ಮೂಲಕ ಈಗ ನನ್ನನ್ನು ಕೂಡಾ “ಮಳೆ ಹುಡುಗಿ’ ಎಂದು ಕರೆಯುತ್ತಾರೆ. ಮೊದಲ ಸಿನಿಮಾ ಯಾವತ್ತೂ ನೆನಪಲ್ಲಿಯುಳಿತ್ತದೆ.

6. “ಮುಂಗಾರು ಮಳೆ-2′ ಚಿತ್ರದ ನಿಮ್ಮ ಪಾತ್ರದ ಬಗ್ಗೆ ಸಿಕ್ಕ ಪ್ರತಿಕ್ರಿಯೆ?
– ಸಿನಿಮಾ ನೋಡಿದವರು ನನ್ನ ಪಾತ್ರದ ಬಗ್ಗೆ ಮಾತನಾಡುತ್ತಿದ್ದಾರೆ. ಇದು ನನ್ನ ಮೊದಲ ಸಿನಿಮಾ ಎಂದು ಗೊತ್ತಾಗೋದಿಲ್ಲ ಎನ್ನುತ್ತಿದ್ದಾರೆ.  ತುಂಬಾ ಬೋಲ್ಡ್‌ ನೇಚರ್‌ ಇರುವ ಹುಡುಗಿಯ ಪಾತ್ರವಾದ್ದರಿಂದ ಅದನ್ನು ಅಷ್ಟೇ ಚೆನ್ನಾಗಿ ನಿಭಾಹಿಸಿದ್ದೀಯ ಎಂದು ಸಿನಿಮಾ ನೋಡಿದವರು ಹೇಳುತ್ತಿದ್ದಾರೆ. ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆಂಬ ಮಾತುಗಳು ಕೂಡಾ ಕೇಳಿಬಂತು.

 7.ಮೊದಲ ಚಿತ್ರ ನಿಮಗೆ ತೃಪ್ತಿ ಕೊಟ್ಟಿದೆಯಾ?
– ಖಂಡಿತಾ. ತುಂಬಾ ತೃಪ್ತಿ ಕೊಟ್ಟಿದೆ. ಒಂದು ಪರಿಪೂರ್ಣ ಪ್ಯಾಕೇಜ್‌ ಸಿನಿಮಾ “ಮುಂಗಾರು ಮಳೆ-2′. ಮೊದಲ ಚಿತ್ರದಲ್ಲೇ ತುಂಬಾ ಸ್ಕೋಪ್‌ ಇರುವ ಪಾತ್ರ ಸಿಕ್ಕಿದೆ. ನಂದಿನಿ ಎಂಬ ಪಾತ್ರದ ಮೂಲಕ ಕಥೆಗೆ ಹೊಸ ಟ್ವಿಸ್ಟ್‌ ಸಿಗುತ್ತಾ ಸಿನಿಮಾ ಸಾಗಿದೆ.

8. ಸಿನಿಮಾ ನೋಡಿದಾಗ ನಿಮ್ಮ ಪ್ಲಸ್‌ ಮತ್ತು ಮೈನಸ್‌ ಯಾವುದೆಂದು ಅನಿಸಿತು ನಿಮಗೆ?
– ಯಾರು ಎಷ್ಟೇ ಚೆನ್ನಾಗಿ ಮಾಡಿದ್ದೀಯಾ ಎಂದರೂ ನನಗೆ ಮತ್ತಷ್ಟು ಚೆನ್ನಾಗಿ ನಟಿಸಬಹುದಿತ್ತು, ಇನ್ನಷ್ಟು ಬೆಟರ್‌ ಮಾಡಬಹುದಿತ್ತು ಅನಿಸುತ್ತದೆ. ನನಗೆ ನಾನೇ ದೊಡ್ಡ ಕ್ರಿಟಿಕ್‌. ತೆರೆಮೇಲೆ ನೋಡಿದಾಗ ಕೆಲವು ದೃಶ್ಯದಲ್ಲಿ ಇನ್ನಷ್ಟು ಚೆನ್ನಾಗಿ ನಟಿಸಬಹುದು ಎಂದೆನಿಸಿದ್ದು ಸುಳ್ಳಲ್ಲ. ಇದು ಮೊದಲ ಸಿನಿಮಾ, ಮುಂದಿನ ಸಿನಿಮಾಗಳಲ್ಲಿ ನಾನು ಮಾಡಿದ ತಪ್ಪುಗಳನ್ನು ಸುಧಾರಿಸಿಕೊಳ್ಳುತ್ತಾ ಹೋಗುತ್ತೇನೆ.

  9.ಮೊದಲ ಸಿನಿಮಾ ಸ್ಟಾರ್‌ ಜೊತೆಗೆ ಮಾಡಿದ್ದೀರಿ. ಎರಡನೇ ಸಿನಿಮಾದಲ್ಲೂ ಸ್ಟಾರ್‌ ಜೊತೆಗೆ ನಟಿಸಬೇಕೆಂಬ ಆಸೆ ಇದೆಯಾ?
– ಮೊದಲೇ ಹೇಳಿದಂತೆ ಸ್ಟಾರ್‌ ಸಿನಿಮಾ ಅಥವಾ ದೊಡ್ಡ ನಿರ್ದೇಶಕರ ಸಿನಿಮಾದಲ್ಲಿ ಅವಕಾಶ ಸಿಗೋದು ಅವರವರ ಅದೃಷ್ಟಕ್ಕೆ ಬಿಟ್ಟ ವಿಚಾರ. ಆದರೆ, ಒಬ್ಬ ನಟಿಯಾಗಿ ನಾನು ಕಥೆ ಹಾಗೂ ಅದರಲ್ಲಿನ ನನ್ನ ಪಾತ್ರ ಮಾತ್ರ ನೋಡುತ್ತೇನೆ. ಆ ನಂತರ ಸ್ಟಾರ್‌ಕಾಸ್ಟ್‌ ಬಗ್ಗೆ ಗಮನಕೊಡುತ್ತೇನೆ. 
  
10. ಬಾಲಿವುಡ್‌ನ‌ತ್ತ ನಿಮ್ಮ ಆಸಕ್ತಿ ಹೆಚ್ಚಿದೆ?
– ಆಸಕ್ತಿ ಹೆಚ್ಚಿದೆ ಅನ್ನುವುದಕ್ಕಿಂತ ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆ ಇದೆ. ಅದಕ್ಕಾಗಿ ಪ್ರಯತ್ನಿಸುತ್ತಿದ್ದೇನೆ. ಯಾವುದೇ ಒಂದು ಕ್ಷೇತ್ರಕ್ಕೆ ಹೋಗುವ ಮುನ್ನ ನಾವು ಪರಿಪೂರ್ಣವಾಗಿರಬೇಕು. ಅದೇ ಕಾರಣದಿಂದ ನಾನು ಕೂಡಾ ಸಾಕಷ್ಟು ತಯಾರಿ ನಡೆಸುತ್ತಿದ್ದೇನೆ. ಈಗಾಗಲೇ ಕುಚುಪುಡಿ ಅಭ್ಯಾಸ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಕುದುರೆ ಸವಾರಿ ಕೂಡಾ ಕಲಿಯುತ್ತೇನೆ. ಎಲ್ಲಾ ವಿಷಯದಲ್ಲಿ ಪಫೆìಕ್ಟ್ ಆಗಿರಬೇಕೆಂಬುದು ನನ್ನ ಆಸೆ. 

11. ನಿಮ್ಮ ಕಥೆಯ ಆಯ್ಕೆ ಹೇಗೆ?
– ಕಥೆ ಕೇಳಿ ನನಗೆ ಇಷ್ಟವಾದರೆ ಆ ನಂತರ ಮಮ್ಮಿ, ಡ್ಯಾಡಿ ಹಾಗೂ ನನ್ನ ತಂಗಿಯಲ್ಲೂ ಡಿಸ್ಕಸ್‌ ಮಾಡುತ್ತೇನೆ. ಏಕೆಂದರೆ ಒಂದು ಸಿನಿಮಾ ಒಪ್ಪಿಕೊಳ್ಳುವ ಮುನ್ನ ಪ್ರತಿಯೊಬ್ಬರ ಅಭಿಪ್ರಾಯ ಮುಖ್ಯ. ನನ್ನ ತಂಗಿ ತುಂಬಾ ಚಿಕ್ಕವಳು. ಆದರೂ ನಾನು ಅವಳಲ್ಲೂ ಕೇಳುತ್ತೇನೆ. ಇನ್ನು, ನನ್ನ ಬಿಗ್‌ ಕ್ರಿಟಿಕ್‌ ಎಂದರೆ ನನ್ನ ತಂದೆ. ಅವರು ನೇರವಾಗಿ ಹೇಳುತ್ತಾರೆ. ಯಾರಾದರೂ ನೀನು ಚೆನ್ನಾಗಿ ನಟಿಸಿದ್ದೀಯಾ ಎಂದರೆ ಅವರು, “ಇಲ್ಲಾ ಇನ್ನಷ್ಟು ಬೆಟರ್‌ ಮಾಡಬಹುದಿತ್ತು’ ಎನ್ನುತ್ತಾರೆ. ಹಾಗಾಗಿ, ಡ್ಯಾಡಿ ನನ್ನ ಬಿಗ್‌ ಕ್ರಿಟಿಕ್‌. 

12. ಬೇರೆ ಭಾಷೆಗಳಿಂದ ಅವಕಾಶ ಬರುತ್ತಿದೆಯಾ?
-ತೆಲುಗು, ತಮಿಳಿನಿಂದ ಆಫ‌ರ್‌ ಬರುತ್ತಿದೆ. ಕಥೆ ಕೇಳುತ್ತಿದ್ದೇನೆ. ನನಗೆ ಯಾವ ಭಾಷೆಯಾದರೂ ಓಕೆ, ಒಳ್ಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆಂಬುದಷ್ಟೇ ಮುಖ್ಯ. ಹಾಗಾಗಿ ಎಲ್ಲಾ ಭಾಷೆಯ ಸಿನಿಮಾಗಳ ಕಥೆ ಕೇಳುತ್ತಿದ್ದೇನೆ. 

13. ಆಲ್ಬಂವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದೀರಂತೆ?
– ಹೌದು, ಚಂದನ್‌ ಶೆಟ್ಟಿಯವರ “ಚಾಕ್ಲೆಟ್‌ ಗರ್ಲ್’ ಎಂಬ ಆಲ್ಬಂನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಚಂದನ್‌ ಈ ಹಿಂದೆ “ಥ್ರಿ ಪೆಗ್‌’ ಎಂಬ ಆಲ್ಬಂ ಮಾಡಿದ್ದರು. ಅದು ಸೂಪರ್‌ ಹಿಟ್‌ ಆಗಿತ್ತು. ಈಗ ಚಾಕ್ಲೆಟ್‌ ಗರ್ಲ್ ಮಾಡುತ್ತಿದ್ದಾರೆ. 

14. ನಿಮ್ಮ ತಂದೆಯ ನಿರ್ಮಾಣದ ಸಿನಿಮಾವೊಂದರಲ್ಲಿ ನಟಿಸಲಿದ್ದೀರಂತೆ?
– ಅದು ಈಗಷ್ಟೇ ಮಾತುಕತೆಯ ಹಂತದಲ್ಲಿದೆ. ರಾಜೇಶ್‌ ಎನ್ನುವವರ ಕಥೆ ಇಷ್ಟವಾಗಿದೆ. ಈ ಸಿನಿಮಾವನ್ನು ನಮ್ಮ ತಂದೆಯೇ ನಿರ್ಮಿಸುವ ಸಾಧ್ಯತೆ ಇದೆ. ಎಲ್ಲವೂ ಅಂದುಕೊಂಡಂತೆ ಆದರೆ ಮಾರ್ಚ್‌ ವೇಳೆಗೆ ಆ ಸಿನಿಮಾ ಶುರುವಾಗಬಹುದು.

15. ಗ್ಲಾಮರಸ್‌ ಪಾತ್ರಗಳ ಬಗ್ಗೆ ನಿಮ್ಮ ನಿಲುವು?
– ಗ್ಲಾಮರಸ್‌ ಎಂಬ ಪದಕ್ಕೆ ವಿಶಾಲ ಅರ್ಥವಿದೆ. ಕೇವಲ ಹಾಕುವ ಬಟ್ಟೆಯಲ್ಲಷ್ಟೇ ಗ್ಲಾಮರ್‌ ಅಡಗಿಲ್ಲ. ವಲ್ಗರ್‌ ಹಾಗೂ ಗ್ಲಾಮರ್‌ ನಡುವೆ ವ್ಯತ್ಯಾಸವಿದೆ. ಅದನ್ನು ಸೂಕ್ಷ್ಮವಾಗಿ ನೋಡಬೇಕಾಗುತ್ತದೆ.  ಪಾತ್ರಕ್ಕೆ ಅಗತ್ಯವಿದೆಯಾ ಎಂದು ಯೋಚಿಸಿ ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳುವುದನ್ನು ನಿರ್ಧರಿಸುತ್ತೇನೆ. 

16. ನಿಮ್ಮ ಕೆರಿಯರ್‌ಗೆ ಕುಟುಂಬದ ಬೆಂಬಲ ಹೇಗಿದೆ?
– ಬಹುಶಃ ನನ್ನ ಅಪ್ಪ-ಅಮ್ಮನ ಬೆಂಬಲ ಇಲ್ಲದೇ ಇರುತ್ತಿದ್ದರೆ ನಾನು ಇಲ್ಲಿ ಇರಲು ಸಾಧ್ಯವೇ ಇರುತ್ತಿರಲಿಲ್ಲ. ನನ್ನ ಪ್ರತಿ ಹಂತದಲ್ಲೂ ಪ್ರೋತ್ಸಾಹಿಸುತ್ತಾ ಬರುತ್ತಿದ್ದಾರೆ. ಪ್ರತಿ ಹಂತದಲ್ಲೂ ಅವರ ಮಾರ್ಗದರ್ಶನ, ಸಲಹೆ ಇದ್ದೇ ಇರುತ್ತದೆ. 

ಬರಹ: ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next